ಸಂಕೇಶ್ವರ : ಹಿಡಕಲ್ಲ ಜಲಾಶಯ ಭರ್ತಿಯಾದರೂ ಇಲ್ಲಿನ ಬಹುತೇಕ ಗ್ರಾಮದ ಜನರಿಗೆ ತಪ್ಪದ ಕುಡಿಯುವ ನೀರಿನ ಬೇಗೆ

| Published : Aug 05 2024, 12:43 AM IST / Updated: Aug 05 2024, 12:06 PM IST

ಸಂಕೇಶ್ವರ : ಹಿಡಕಲ್ಲ ಜಲಾಶಯ ಭರ್ತಿಯಾದರೂ ಇಲ್ಲಿನ ಬಹುತೇಕ ಗ್ರಾಮದ ಜನರಿಗೆ ತಪ್ಪದ ಕುಡಿಯುವ ನೀರಿನ ಬೇಗೆ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಕಡೆ ಅತಿವೃಷ್ಟಿ, ನೆರೆ ಹಾವಳಿ ಆತಂಕ ಸೃಷ್ಟಿಸಿದ್ದು, ಹುಕ್ಕೇರಿ ತಾಲೂಕಿನ ಹಿಡಕಲ್ಲ ಜಲಾಶಯ ಭಾಗಶಃ ಭರ್ತಿಯಾಗಿದೆ. ಆದರೂ, ತಾಲೂಕಿನ ಕೆಲವು ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಬೇಗೆ ಮಾತ್ರ ತಪ್ಪುತ್ತಿಲ್ಲ. ಜಲಾಶಯದಲ್ಲಿ ನೀರಿದ್ದರೂ ಕುಡಿಯುವ ನೀರಿಗೆ ಜನರು ಪರದಾಡುವಂತಾಗಿದೆ.

ಆನಂದ ಭಮ್ಮನ್ನವರ

 ಸಂಕೇಶ್ವರ :  ಒಂದು ಕಡೆ ಅತಿವೃಷ್ಟಿ, ನೆರೆ ಹಾವಳಿ ಆತಂಕ ಸೃಷ್ಟಿಸಿದ್ದು, ಹುಕ್ಕೇರಿ ತಾಲೂಕಿನ ಹಿಡಕಲ್ಲ ಜಲಾಶಯ ಭಾಗಶಃ ಭರ್ತಿಯಾಗಿದೆ. ಆದರೂ, ತಾಲೂಕಿನ ಕೆಲವು ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಬೇಗೆ ಮಾತ್ರ ತಪ್ಪುತ್ತಿಲ್ಲ. ಜಲಾಶಯದಲ್ಲಿ ನೀರಿದ್ದರೂ ಕುಡಿಯುವ ನೀರಿಗೆ ಜನರು ಪರದಾಡುವಂತಾಗಿದೆ.

ಹುಕ್ಕೇರಿ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಕಳೆದ 20 ವರ್ಷಗಳ ಹಿಂದೆ ಅಳವಡಿಸಿರುವ ಪೈಪ್‌ಲೈನ್ ಸವೆದು ತಿಂಗಳಿನಲ್ಲಿ ಎರಡು ಬಾರಿ ದುರಸ್ತಿಯಲ್ಲಿದೆ. ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ಜಲಾಶಯ ತುಂಬಿ ತುಳುಕಿದರೂ ತಾಲೂಕಿನ ಜನರು ಮಾತ್ರ ಕುಡಿಯುವ ನೀರಿಗಾಗಿ ಟ್ಯಾಂಕರ್ ಮೊರೆ ಹೋಗುವಂತಾಗಿದೆ.

ಗೋಟುರ, ಹೆಬ್ಬಾಳ, ಗವನಾಳ, ಕೋಚರಿ, ಅರ್ಜುನವಾಡ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಮಳೆಗಾಲದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ಕೆಲ ಗ್ರಾಪಂಗಳು ಗ್ರಾಮದ ಜಲ ಮೂಲಗಳಾದ ಬಾವಿ, ಬೋರ್‌ವೆಲ್‌ಗಳ ಮೂಲಕ ಜನರ ನೀರಿನ ದಾಹ ತಣಿಸಿದರೆ, ಇನ್ನುಳಿದ ಗ್ರಾಪಂನವರು ಹಿಡಕಲ್ಲ ಜಲಾಶಯದ ನೀರು ಸರಬರಾಜು ಕೈಕೊಟ್ಟರೆ, ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಜಿಪಂ ಅಧಿಕಾರಿಗಳು ತಾಲೂಕಿಗೊಂದು ಟಾಸ್ಕ್ ಫೋರ್ಸ್ ರಚಿಸಿದೆ. ಆದರೆ ಗೋಟೂರ ಸೇರಿದಂತೆ ಹಲವು ಗ್ರಾಮಗಳ ಜನರ ನೀರಿನ ಸಮಸ್ಯೆಯ ಬಗ್ಗೆ ಟಾಸ್ಕ್‌ಫೋರ್ಸ್‌ನವರು ಕಂಡೂ ಕಾಣಿಸದಂತೆ ಜಾಣಮೌನವಹಿಸುತ್ತಿದ್ದಾರೆ.

ಹಳ್ಳ ಹಿಡಿದ ಜಲ ಜೀವನ ಮಿಷನ್: ಜನರಿಗೆ ಶುದ್ಧ ನೀರು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ್‌ ಮಿಷನ್ ಯೋಜನೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ, ಒಂದು ಗ್ರಾಮದಲ್ಲೂ ಈ ಯೋಜನೆ ಯಶಸ್ವಿಯಾಗಿಲ್ಲ. ಇದರಿಂದ ಜನರಿಗೆ ನಯಾಪೈಸೆ ಅನುಕೂಲವಾಗಿಲ್ಲ. ಯೋಜನೆಯಿಂದ ಸುಸ್ಥಿತಿಯಲ್ಲಿದ್ದ ರಸ್ತೆಗಳು ಹಾಳಾಗಿ ಸಮಸ್ಯೆ ಮತ್ತಷ್ಟು ಹೆಚ್ಚಿದೆ. ಯೋಜನೆಯಡಿ ಅಳವಡಿಸಿರುವ ನಳಗಳಲ್ಲಿ ಹನಿ ನೀರು ಬರುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ತುಕ್ಕು ಹಿಡಿದ ಶುದ್ಧ ನೀರಿನ ಘಟಕಗಳು: ಹಿಡಕಲ್ಲ ಜಲಾಶಯದ ನೀರು ಸರಬರಾಜು ಮೇಲಿಂದ ಮೇಲೆ ದುರಸ್ತಿಯಲ್ಲಿರುತ್ತದೆ. ಜೊತೆಗೆ ಸಾಂಕ್ರಾಮಿಕ ರೋಗಗಳ ಭೀತಿ ಬೇರೆ. ಇದರ ಮಧ್ಯೆ ಜನರು ಶುದ್ಧ ಕುಡಿಯುವ ನೀರಿನ ಘಟಕದಲ್ಲಿನ ನೀರನ್ನಾದರೂ ಕುಡಿಯಬೇಕೆಂದರೆ ಅವು ಸಹ ಬಂದಾಗಿವೆ. ಆರಂಭದ ಕೆಲ ದಿನಗಳು ನೀರು ಕೊಟ್ಟ ಈ ಘಟಕಗಳು ನಂತರದಲ್ಲಿ ನಿರ್ವಹಣೆ ಇಲ್ಲದೆ ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಯಂತ್ರಗಳು ತುಕ್ಕು ಹಿಡಿಯುತ್ತಿವೆ.

ಅಧಿಕಾರಿಗಳೇ ಇತ್ತ ಗಮನ ಕೊಡಿ: ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹುಕ್ಕೇರಿ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಕಡೆ ಗಮನ ನೀಡಬೇಕಿದೆ ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಜಲಾಶಯ ಭರ್ತಿಯಾಗಿದ್ದರೂ, ಇಲ್ಲಿನ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಹುಕ್ಕೇರಿ ತಾಲೂಕಿನ 27 ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಹಳೆಯದಾಗಿದ್ದರಿಂದ ಸವೆದು ಮೇಲಿಂದ ಮೇಲೆ ಒಡೆಯುತ್ತಿದೆ. ಹೊಸ ಪೈಪ್‌ಲೈನ್‌ಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ಟಿಸಿ ಸುಟ್ಟಿದ್ದು, ದುರಸ್ತಿ ಮಾಡಿ ಮೂರ್ನಾಲ್ಕು ದಿನದಲ್ಲಿ ನೀರು ಸರಬರಾಜು ಪುನಾರಂಭಿಸಲಾಗುವುದು.

- ರಾಜೇಂದ್ರ ಜಾಧವ, ಸಹಾಯಕ ಕಾರ್ಯಕಾರಿ ಅಭಿಯಂತರ

ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಉಪ ವಿಭಾಗ ಹುಕ್ಕೇರಿ