ಸಾರಾಂಶ
ದಾಬಸ್‍ಪೇಟೆ: ರಾಜ್ಯ ಸರ್ಕಾರ ವಿದೇಶ ಹಾಗೂ ಹೊರ ರಾಜ್ಯದ ಬಂಡವಾಳಗಾರರಿಗೆ ಉದ್ಯಮ ಆರಂಭಿಸಲು ಕೃಷಿ ಭೂಮಿ ನೀಡಲು ಮುಂದಾಗಿದೆ. ನಮ್ಮ ಪ್ರಾಣ ಹೋದರೂ ಅನ್ನ ಬೆಳೆಯುವ ಜಮೀನು ನಾವು ಬಿಟ್ಟು ಕೊಡುವುದಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಹಳ್ಳಿಕೆರೆ ಭಾಗ್ಯರಾಜ್ ತಿಳಿಸಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ದಾಬಸ್‍ಪೇಟೆ, ಅನೇಕಲ್ ಮತ್ತು ನರಸಾಪುರ ಭಾಗಗಳ ರೈತರ ಸಂಯುಕ್ತ ಹೋರಾಟ ಸಮಿತಿ ರೈತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಾಲೂರು ತಾಲೂಕಿನ ನರಸಾಪುರದಲ್ಲಿಯೂ ಕೆಐಎಡಿಬಿ ಹೆಸರಲ್ಲಿ 1,400 ಎಕರೆ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಹೊರಟಿದೆ. ಭೂಮಿಯನ್ನೇ ನಂಬಿ ಬದುಕುತ್ತಿದ್ದ ರೈತರು ಬೀದಿಗೆ ಬೀಳುತ್ತಿದ್ದಾರೆ. ಮೂರು ಭಾಗಗಳ ರೈತರ ಇದರ ವಿರುದ್ಧ ಒಗ್ಗೂಡಿ ಹೋರಾಟ ಮಾಡಬೇಕು ಎಂದರು.ಕೋಲಾರ ಜಿಲ್ಲೆಯ ರೈತ ಮುಖಂಡ ಆರ್.ಗೋಪಾಲ್ ಮಾತನಾಡಿ, ಸರ್ಕಾರ ರೈತರ ಜಮೀನನ್ನು ಬಲವಂತವಾಗಿ ಕಿತ್ತುಕೊಂಡು ಉಳ್ಳವರಿಗೆ ಕೊಡಲು ಹೊರಟಿದೆ. ಇದರ ವಿರುದ್ಧ ಹೋರಾಟ ಮಾಡುವ ರೈತರನ್ನು ಕುತಂತ್ರದ ಮೂಲಕ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರೈತರು ಒಗ್ಗೂಡಿದರೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬಹುದು. ಆದ್ದರಿಂದ ರೈತರು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ರೇಷ್ಮೆ ಬೆಳೆಗಾರರ ಮತ್ತು ರೇಷ್ಮೆಗೂಡು ಸಾಗಾಣಿಕೆಗಾರ ಸಂಘದ ಅಧ್ಯಕ್ಷ ಶಿಡ್ಲಘಟ್ಟ ತಾಲೂಕಿನ ಮುಳ್ಳೂರು ಶಿವಣ್ಣ ಮಾತನಾಡಿ, ಭೂಮಿ ಕಳೆದುಕೊಂಡ ರೈತರು ಬೀದಿಗೆ ಬೀಳುತ್ತಿದ್ದಾರೆ. ವಾಮಮಾರ್ಗದಲ್ಲಿ ರೈತರ ಜಮೀನು ಕಬಳಿಸುವ ಸರ್ಕಾರದ ವಿರುದ್ಧ ಎಲ್ಲಾ ರೈತರು ಹೋರಾಡಬೇಕು ಎಂದು ಕರೆ ನೀಡಿದರು.ಆನೇಕಲ್‍ನ ಹಂದೇನಹಳ್ಳಿಯ ರೈತ ಮೋಹನ್ ಮಾತನಾಡಿ, ಹಂದೇನಹಳ್ಳಿ ವ್ಯಾಪ್ತಿಯಲ್ಲಿ ಸರ್ಕಾರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ 1,050 ಎಕರೆ ಕೃಷಿ ಭೂಮಿಯ ಸ್ವಾಧೀನಕ್ಕೆ ಮುಂದಾಗಿದೆ. ಇದರ ವಿರುದ್ಧ ನಾವು ಈಗಾಗಲೇ ಹೋರಾಟ ಆರಂಭಿಸಿದ್ದೇವೆ. ನಮ್ಮ ಹೋರಾಟ ನಿಲ್ಲದು ಎಂದು ಹೇಳಿದರು.
ಸಭೆಯಲ್ಲಿ ನೆಲಮಂಗಲ ತಾಲೂಕಿನ ಹನುಮಂತಪುರದ ರೈತಪರ ಹೋರಾಟಗಾರ ವಿಜಯ್ ಕುಮಾರ್, ರೈತ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಶ್, ಜಿಲ್ಲಾ ಕಾರ್ಯದರ್ಶಿ ಹನುಮಯ್ಯ, ನಂಜೇಗೌಡ, ರಾಮಚಂದ್ರ, ಕೊಡಿಗೇಹಳ್ಳಿ ಮಂಜುನಾಥ್, ಚನ್ನೇಗೌಡ, ಗ್ರಾಪಂ ಸದಸ್ಯರಾದ ನಾಗಬಸವರಾಜು, ರಂಗಸ್ವಾಮಿ, ಕೋಲಾರ, ಅನೇಕಲ್, ನರಸಾಪುರ, ಹನುಮಂತಪುರ, ಬಿದಲೂರು, ಕೋಡಿಪಾಳ್ಯದ ನೂರಾರು ರೈತರು ಪಾಲ್ಗೊಂಡಿದ್ದರು.ಪೋಟೋ 2 :
ದಾಬಸ್‍ಪೇಟೆಯಲ್ಲಿ ದಾಬಸ್‍ಪೇಟೆ, ಆನೇಕಲ್ ಮತ್ತು ನರಸಾಪುರ ಭಾಗಗಳ ರೈತರ ಸಂಯುಕ್ತ ಹೋರಾಟ ಸಮಿತಿ ಸಭೆಯನ್ನು ರೈತ ಹೋರಾಟಗಾರರು ಉದ್ಘಾಟಿಸಿದರು.