ಹಣ ಕೊಟ್ಟರೂ ಸಿಗುತ್ತಿಲ್ಲ ಸಗಣಿ ಗೊಬ್ಬರ

| Published : Feb 13 2025, 12:49 AM IST

ಸಾರಾಂಶ

ಭೂಮಿಯ ಫಲವತ್ತತೆ, ಹೆಚ್ಚಿನ ಇಳುವರಿಗಾಗಿ ರೈತರು ಸಗಣಿ ಗೊಬ್ಬರು ಬಳಸುತ್ತಿದ್ದರು. ಆನಂತರ ಕಡಿಮೆ ಬೆಲೆಗೆ ರಾಸಾಯನಿಕ ಗೊಬ್ಬರ ದೊರೆಯುತ್ತಿದ್ದಂತೆ ರೈತರು ಸಗಣಿ ಗೊಬ್ಬರ ಬಳಕೆ ಮಾಡುವುದನ್ನೇ ಕೈಬಿಟ್ಟರು.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ರಾಸಾಯನಿಕ ಗೊಬ್ಬರ ಬಳಕೆಯಿಂದ ಕಣ್ಮರೆಯಾಗಿದ್ದ ಸಗಣಿ (ತಿಪ್ಪೆ) ಗೊಬ್ಬರಕ್ಕೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಮೂರುಪಟ್ಟು ಹಣ ನೀಡಿ ಖರೀದಿಸುತ್ತೇನೆ ಎಂದರೂ ಸಿಗುತ್ತಿಲ್ಲ. ಅಲ್ಲೊಂದು ಇಲ್ಲೊಂದು ಕಡೆ ದೊರೆಯುತ್ತಿದೆಯಾದರೂ ಗುಣಮಟ್ಟದಿಂದ ಇಲ್ಲ. ಹೀಗಾಗಿ ರೈತರೇ ಸಗಣಿ ಗೊಬ್ಬರ ಹುಡುಕುವಂತ ಸ್ಥಿತಿ ನಿರ್ಮಾಣವಾಗಿದೆ.

ಭೂಮಿಯ ಫಲವತ್ತತೆ, ಹೆಚ್ಚಿನ ಇಳುವರಿಗಾಗಿ ರೈತರು ಸಗಣಿ ಗೊಬ್ಬರು ಬಳಸುತ್ತಿದ್ದರು. ಆನಂತರ ಕಡಿಮೆ ಬೆಲೆಗೆ ರಾಸಾಯನಿಕ ಗೊಬ್ಬರ ದೊರೆಯುತ್ತಿದ್ದಂತೆ ರೈತರು ಸಗಣಿ ಗೊಬ್ಬರ ಬಳಕೆ ಮಾಡುವುದನ್ನೇ ಕೈಬಿಟ್ಟರು. ಇದರಿಂದ ಬೇಡಿಕೆ ಒಮ್ಮೆಲೆ ಕಡಿಮೆ ಆಗಿದ್ದರಿಂದ ಸಗಣಿ ಸಂಗ್ರಹಿಸಿ ಗೊಬ್ಬರ ಮಾಡಿ ಮಾರಾಟ ಮಾಡುವವರು ಬೇರೆ ಕೆಲಸದತ್ತ ಮುಖ ಮಾಡಿದರು.

ಜಾನುವಾರುಗಳೇ ಇಲ್ಲ:

ಈ ಹಿಂದೇ ಗ್ರಾಮೀಣ ಪ್ರದೇಶದಲ್ಲಿ ಅವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದ್ದವು. ಪ್ರತಿ ರೈತರ ಮನೆಯಲ್ಲಿ ಕನಿಷ್ಠವೆಂದರೂ ಐದರಿಂದ ಹತ್ತು ಜಾನುವಾರು ಸಿಗುತ್ತಿದ್ವಂತೆ. ನಂತರ ಅವು ವಿಭಕ್ತ ಕುಟುಂಬಗಳಾಗಿ ಪರಿವರ್ತನೆ ಆಗುತ್ತಿದ್ದಂತೆ ಹಾಗೂ ಕೃಷಿಯಲ್ಲಿ ಯಂತ್ರೋಪಕರಣಗಳು ಬಳಕೆ ಹೆಚ್ಚುತ್ತಿದ್ದಂತೆ ಜಾನುವಾರುಗಳ ಸಂಖ್ಯೆಯೂ ಕೊಟ್ಟಿಗೆಯಿಂದ ಕಣ್ಮರೆಯಾದವು. ಜತೆಗೆ ರಸ್ತೆಯಲ್ಲಿ ಸಗಣಿ ಹಿಡಿದು ಅದನ್ನು ಸಂಗ್ರಹಿಸಿ ಮಾರಾಟ ಮಾಡುವವರ ಸಂಖ್ಯೆಯೂ ಇಳಿಮುಖವಾಯಿತು. ಹೀಗಾಗಿ ಸಗಣಿ ಗೊಬ್ಬರವು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಸಾಯನಿಕ ಗೊಬ್ಬರ ಬಳಕೆ:

ಕೃಷಿಯಲ್ಲಿ ತಂತ್ರಜ್ಞಾನದೊಂದಿಗೆ ರಾಸಾಯನಿಕ ಗೊಬ್ಬರ ಬಳಕೆಯಿಂದಲೂ ಸಗಣಿ ಗೊಬ್ಬರ ಬೇಡಿಕೆ ಕಳೆದುಕೊಂಡಿತು ಎಂದು ರೈತರು ಹೇಳುತ್ತಿದ್ದಾರೆ. ರಾಸಾಯನಿಕ ಗೊಬ್ಬರ ತಮಗೆ ಬೇಕಾದ ಸಮಯದಲ್ಲಿ ತಂದು ಬೆಳೆಗೆ ಹಾಕಬಹುದು. ಆದರೆ, ಸಗಣಿ ಗೊಬ್ಬರವನ್ನು ಒಂದು ವರ್ಷದ ವರೆಗೆ ಒಂದೆಡೆ ಹಾಕಿ ನೀರು, ಕಸ ಇತ್ಯಾದಿ ವಸ್ತುಗಳನ್ನು ಹಾಕಿ ಬಳಿಕ ಅದು ರೈತರಿಗೆ ಸಿಗುತ್ತಿತ್ತು. ಹೀಗಾಗಿ ರೈತರು ನ್ಯಾನೋ ರೀತಿ ಸಿಗುತ್ತಿರುವ ಗೊಬ್ಬರದತ್ತ ಮುಖ ಮಾಡಿದರು.

ಬೆಲೆ ಮೂರುಪಟ್ಟು ಹೆಚ್ಚಳ:

ಮೊದಲು ಒಂದು ಚಕ್ಕಡಿ ಸಗಣಿ ಗೊಬ್ಬರಕ್ಕೆ ₹300ರಿಂದ ₹400 ಇತ್ತು, ಈಗ ₹1500 ರಿಂದ ₹2 ಸಾವಿರ. ಒಂದು ಟ್ರ್ಯಾಕ್ಟರ್‌ಗೆ ₹1000 ದಿಂದ ₹1500ಕ್ಕೆ ದೊರೆಯುತ್ತಿದ್ದ ಸಗಣಿ ಗೊಬ್ಬರ ಈಗ ₹ 5 ಸಾವಿರದಿಂದ ₹6 ಸಾವಿರ, ಒಂದು ಟಿಪ್ಪರ್‌ಗೆ ₹ 6ರಿಂದ 7 ಸಾವಿರಕ್ಕಿತ್ತು. ಈಗ ₹15ರಿಂದ ₹18 ಸಾವಿರಕ್ಕೆ ತಲುಪಿದೆ. ಎರಡ್ಮೂರು ವರ್ಷಗಳಲ್ಲಿ ಬೆಲೆ ಮೂರುಪಟ್ಟು ಹೆಚ್ಚಾದರೂ ಸಹ ಹುಡುಕಿದರು ಗೊಬ್ಬರ ದೊರೆಯುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ಸಗಣಿ ಗೊಬ್ಬರಕ್ಕಾಗಿ ಅಲೆದಾಡುತ್ತಿದ್ದೇನೆ. ಎಲ್ಲಿಯೂ ಸಿಗುತ್ತಿಲ್ಲ. ಹಿಂದೆ ₹ 1000, ₹1500ಕ್ಕೆ ಟ್ರ್ಯಾಕ್ಟರ್‌ ಸೆಗಣಿ ಗೊಬ್ಬರ ಸಿಗುತ್ತಿತ್ತು. ಈಗ ಐದಾರು ಸಾವಿರ ಕೊಡುತ್ತೇನೆ ಎಂದರೂ ದೊರೆಯುತ್ತಿಲ್ಲ ಎಂದು ಹಾವೇರಿಯಿಂದ ಹುಬ್ಬಳ್ಳಿಗೆ ಸಗಣಿ ಗೊಬ್ಬರ ಖರೀದಿಸಲು ಆಗಮಿಸಿದ್ದ ಹನುಮಂತ ಮೇಗೂರ ಹೇಳಿದರು.ಹಲವು ವರ್ಷಗಳಿಂದ ರೈತರು ರಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಸಗಣಿ ಗೊಬ್ಬರ ಸಂಗ್ರಹಕ್ಕೆ ಹೆಚ್ಚಿನ ಆಸಕ್ತಿ ವಹಿಸಲಿಲ್ಲ. ಈಗ ಈ ಸಗಣಿ ಗೊಬ್ಬರಕ್ಕೆ ಬೇಡಿಕೆ ಬಂದಿದೆಯಾದರೂ ಸಿಗುತ್ತಿಲ್ಲ ಎಂದು ಗುಡೇನಕಟ್ಟಿ ಗ್ರಾಮದ ರೈತ ಬಸವರಾಜ ಯೋಗಪ್ಪನವರ ಹೇಳಿದರು.