ವಿಶೇಷ ಸಭೆಯಲ್ಲೂ ಪಟ್ಟಣಕ್ಕೆ ಸಿಗದ ಶುದ್ಧ ನೀರು

| Published : Jan 11 2025, 12:46 AM IST

ವಿಶೇಷ ಸಭೆಯಲ್ಲೂ ಪಟ್ಟಣಕ್ಕೆ ಸಿಗದ ಶುದ್ಧ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಯ ನೀರು ಬಳಸಲು ಯೋಗ್ಯವಲ್ಲ ಎಂದು ಲ್ಯಾಬ್ ವರದಿ ಬಂದ ಹಿನ್ನೆಲೆಯಲ್ಲಿ ಸರ್ಕಾರದ ನೆರವಿನಿಂದ ನಗರಕ್ಕೆ ಕುಡಿಯುವ ನೀರು ನಿರಂತರವಾಗಿ ಪೂರೈಸಲು ವಿಶೇಷ ಯೋಜನೆಗೆ ಅನುಮತಿ ನೀಡಲು ಶುಕ್ರವಾರ ಕರೆದಿದ್ದ ವಿಶೇಷ ಸಾಮಾನ್ಯ ಸಭೆ ಗದ್ದಲದಲ್ಲಿ ಅಂತ್ಯವಾಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಯ ನೀರು ಬಳಸಲು ಯೋಗ್ಯವಲ್ಲ ಎಂದು ಲ್ಯಾಬ್ ವರದಿ ಬಂದ ಹಿನ್ನೆಲೆಯಲ್ಲಿ ಸರ್ಕಾರದ ನೆರವಿನಿಂದ ನಗರಕ್ಕೆ ಕುಡಿಯುವ ನೀರು ನಿರಂತರವಾಗಿ ಪೂರೈಸಲು ವಿಶೇಷ ಯೋಜನೆಗೆ ಅನುಮತಿ ನೀಡಲು ಶುಕ್ರವಾರ ಕರೆದಿದ್ದ ವಿಶೇಷ ಸಾಮಾನ್ಯ ಸಭೆ ಗದ್ದಲದಲ್ಲಿ ಅಂತ್ಯವಾಯಿತು.

ಸಭೆ ಆರಂಭವಾಗುತ್ತಿದ್ದಂತೆ ಮಾಜಿ ಅಧ್ಯಕ್ಷ ಬಿಜೆಪಿಯ ರಾಮಮೋಹನ್ ಈಚನೂರು ಕೆರೆಗೆ ಯುಜಿಡಿಯ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಹಾಗೂ ಇದರಲ್ಲಿ ಅಧಿಕಾರಿಗಳು ನಿರ್ಲಕ್ಷ ವಹಿಸಿರುವ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಯಾಗಿ ಮಾಜಿ ಅಧ್ಯಕ್ಷ ಕಾಂಗ್ರೆಸ್‌ನ ಟಿ.ಎನ್.ಪ್ರಕಾಶ್ ಮಾತನಾಡಿ ಹಲವಾರು ವರ್ಷಗಳಿಂದ ಈ ಸಮಸ್ಯೆ ಇದ್ದು ಇದಕ್ಕೆ ಶಾಶ್ವತ ಪರಿಹಾರ ರೂಪಿಸುವ ಅಗತ್ಯ ಇದೆ ಎಂದು ತಿಳಿಸಿದರು. ಶಾಸಕ ಕೆ.ಷಡಕ್ಷರಿ ಮಾತನಾಡಿ ನಗರಕ್ಕೆ ಕುಡಿಯುವ ನೀರಿಗೆ ತೊಂದರೆಯುಂಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನಗೆ ಮತ್ತು ಎಲ್ಲ ಜನಪ್ರತಿನಿಧಿಗಳಿಗೆ ಇದೆ. ಆದ್ದರಿಂದ ಸರ್ಕಾರದ ನೆರವಿನಿಂದ ತಿಪಟೂರು ನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಸುವ ಮಹತ್ವದ ಯೋಜನೆಗೆ ಅನುಮತಿ ಪಡೆಯುವ ಸಲುವಾಗಿ ಈ ಸಭೆ ಕರೆದಿದ್ದು ಬೇರೆ ವಿಚಾರಗಳ ಚರ್ಚೆಗೆ ಮತ್ತೊಂದು ಸಭೆ ಕರೆದು ಚರ್ಚಿಸಿ ಎಂದು ಅಧ್ಯಕ್ಷರಿಗೆ ಸೂಚಿಸಿದರು. ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ, ಈಗ ಕುಡಿಯುವ ನೀರಿನ ವಿಶೇಷ ಯೋಜನೆಗೆ ಸಭೆ ಅನುಮತಿ ನೀಡಿ ನಂತರ ಇತರೆ ವಿಚಾರಗಳ ಚರ್ಚೆಗೆ ಮತ್ತೊಂದು ಸಭೆ ಕರೆಯಲಾಗುವುದು ಎಂದು ತಿಳಿಸಿದರು. ಆದರೆ ಇದಕ್ಕೊಪ್ಪದ ಬಿಜೆಪಿಯ ಸದಸ್ಯರುಗಳು ಕುಡಿಯುವ ನೀರಿನ ಬಗ್ಗೆಯೇ ಚರ್ಚಿಸಲು ಅನೇಕ ವಿಷಯಗಳಿದ್ದು ಅದಕ್ಕೆ ಇಂದೇ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರೆ, ಕಾಂಗ್ರೆಸ್ ಸದಸ್ಯರುಗಳು ವಿರೋಧಿಸಿದರು. ಸಭೆಯಲ್ಲಿ ಗದ್ದಲದಿಂದಾಗಿ ಯಾರು ಏನು ಮಾತನಾಡುತ್ತಿದ್ದಾರೆ ಕೇಳಿಸದಾಯಿತು. ಅಧ್ಯಕ್ಷೆ ಯಮುನಾ ಧರಣೇಶ್ ಸಭೆಯನ್ನು ಬರಕಾಸ್ತುಗೊಳಿಸಿದರು. ಶಾಸಕರು ಹಾಗೂ ಕಾಂಗ್ರೆಸ್ ಸದಸ್ಯರು ಸಭೆ ಮುಗಿಸಿ ಹೊರ ನಡೆದರೆ ಬಿಜೆಪಿ ಸದಸ್ಯರು ನಗರಸಭೆಯ ಮುಂಬಾಗಿಲಲ್ಲಿ ಕುಳಿತು ಬಹಳ ಹೊತ್ತು ಪ್ರತಿಭಟನೆ ನಡೆಸಿದರು.ಬಿಜೆಪಿ ಸದಸ್ಯರು ಸಭೆ ಮುಗಿದ ಕೂಡಲೇ ನಗರಸಭೆ ಮುಂಭಾಗದಲ್ಲಿ ಮೆಟ್ಟಿಲುಗಳ ಮೇಲೆ ಕುಳಿತು ಚರ್ಚೆಗೆ ಅನುಮತಿ ನೀಡದ್ದಕ್ಕೆ ಪ್ರತಿಭಟಿಸಿ ನಗರಸಭೆ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಡಿಸೆಂಬರ್ ೧೨ನೇ ತಾರೀಖು ಈಚನೂರು ಕೆರೆಯ ಕುಡಿಯುವ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದ್ದರೂ ಅದನ್ನು ಮುಚ್ಚಿಟ್ಟು ಇನ್ನೂ ವರದಿ ಬಂದಿಲ್ಲ ಎಂದು ನಮಗೆ ಹಾಗೂ ಮಾಧ್ಯಮದವರಿಗೆ ಸುಳ್ಳು ಹೇಳಿದ್ದಾರೆ. ಇಷ್ಟು ವರ್ಷ ಕುಡಿಯುವ ನೀರಿಗೆ ಹರಿಯದ ಕೊಳಚೆ ಈ ವರ್ಷ ಹರಿದಿದ್ದು ಅಧಿಕಾರಿಗಳ ವೈಫಲ್ಯ. ಈಚನೂರು ಕೆರೆಯ ನೀರು ಬಳಸಿಕೊಳ್ಳಲಾಗದಿದ್ದರೆ ಪರ್ಯಾಯವಾಗಿ ನಗರದ ಅಮಾನಿಕೆರೆ ನೀರನ್ನು ಬಳಸಿಕೊಳ್ಳಲು ಹಿಂದೆಯೇ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಈ ಎರಡು ಬಿಟ್ಟು ಬೇರೆ ಯಾವುದೇ ಯೋಜನೆಯನ್ನು ನಾವು ವಿರೋಧಿಸುತ್ತೇವೆ ಎಂದು ಪ್ರತಿಭಟನೆಯಲ್ಲಿದ್ದ ನಗರಸಭೆ ಮಾಜಿ ಅಧ್ಯಕ್ಷ ರಾಮಮೋಹನ್, ಬಿಜೆಪಿ ಸದಸ್ಯರುಗಳಾದ ಶಶಿಕಿರಣ್, ಸಂಗಮೇಶ್, ಪ್ರಸನ್ನಕುಮಾರ್, ಸಂಧ್ಯಾಕಿರಣ್, ಶ್ರೀನಿವಾಸ್, ಜಯಲಕ್ಷ್ಮೀ, ಓಹಿಲಾ ಗಂಗಾಧರ್ ಹಾಗೂ ಇತರೆ ಸದಸ್ಯರುಗಳು ಆಕ್ರೋಶ ವ್ಯಕ್ತಪಡಿಸಿದರು. " ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವುದು ನಮ್ಮ ಮೊದಲ ಆದ್ಯತೆ, ಈಚನೂರು ಕೆರೆ ನೀರು ಕಲುಷಿತವಾಗಿರುವುದರಿಂದ ನಗರದ ಜನರಿಗೆ ಬೇರೆ ಮೂಲಗಳಿಂದ ನೀರು ಪೂರೈಸಲು ನಗರಸಭೆಯ ಎಲ್ಲ ಸದಸ್ಯರು ಪಕ್ಷಭೇದ ಮರೆತು ಸಹಕಾರ ನೀಡಬೇಕು " . - ಯಮುನಾ ಧರಣೇಶ್, ನಗರಸಭೆ ಅಧ್ಯಕ್ಷೆ.