ಬಿರು ಬೇಸಿಗೆಯಲ್ಲಿ ನಿಷ್ಪ್ರಯೋಜಕವಾದ ಕುಮಟಾದ ನೀರಿನ ಘಟಕ

| Published : Mar 31 2024, 02:12 AM IST

ಬಿರು ಬೇಸಿಗೆಯಲ್ಲಿ ನಿಷ್ಪ್ರಯೋಜಕವಾದ ಕುಮಟಾದ ನೀರಿನ ಘಟಕ
Share this Article
  • FB
  • TW
  • Linkdin
  • Email

ಸಾರಾಂಶ

ಕಡುಬೇಸಿಗೆಯ ಇಂತಹ ಸಮಯದಲ್ಲೂ ಕುಮಟಾ ನೆಲ್ಲಿಕೇರಿ ಕೆ.ಎಸ್.ಆರ್.ಟಿ.ಸಿ. ಮುಖ್ಯ ಬಸ್ ನಿಲ್ದಾಣದ ಆವಾರದಲ್ಲಿ ಪುರಸಭೆಯಿಂದ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸುತ್ತಿಲ್ಲ.

ಕುಮಟಾ: ಇಲ್ಲಿನ ನೆಲ್ಲಿಕೇರಿ ಕೆ.ಎಸ್.ಆರ್.ಟಿ.ಸಿ. ಮುಖ್ಯ ಬಸ್ ನಿಲ್ದಾಣದ ಆವಾರದಲ್ಲಿ ಪುರಸಭೆಯಿಂದ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿ ನಿಷ್ಪ್ರಯೋಜಕವಾಗಿದ್ದರೂ ಇದನ್ನು ಸರಿಪಡಿಸುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.

ಕಡುಬೇಸಿಗೆಯ ಈ ದಿನಗಳಲ್ಲಿ ಶುದ್ಧ ನೀರಿಗಾಗಿ ಜನ ಪರದಾಡುವಂತಾಗುತ್ತದೆ. ಬಸ್ ನಿಲ್ದಾಣಗಳಲ್ಲಂತೂ ಪ್ರಯಾಣಿಕರಿಗೆ ಬಾಟಲ್ ನೀರು ಖರೀದಿಸುವುದು ದೊಡ್ಡ ಹೊರೆಯಾಗುವುದರಿಂದ ಉಚಿತವಾಗಿ ಉತ್ತಮ ನೀರು ಸಿಕ್ಕರೆ ಉಪಕಾರವೇ ಆಗುತ್ತದೆ. ಆದರೆ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆಯಿಲ್ಲದೇ ಕೆಟ್ಟಿರುವುದು ಬಹಳಷ್ಟು ಸಮಸ್ಯೆಯಾಗಿದೆ.

೨೦೧೮-೧೯ನೇ ಸಾಲಿನ ೧೪ನೇ ಹಣಕಾಸು ಯೋಜನೆಯ ಸಾಮಾನ್ಯ ಮೂಲ ಅನುದಾನದಲ್ಲಿ ಸುಮಾರು ₹ ೭.೫ ಲಕ್ಷ ವೆಚ್ಚದಲ್ಲಿ ಈ ಘಟಕ ನಿರ್ಮಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಘಟಕ ನಿರ್ಮಿಸುವುದರಿಂದ ಪ್ರತಿನಿತ್ಯ ಸಾವಿರಾರು ಜನರಿಗೆ ಉಪಯೋಗವಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಕಾಮಗಾರಿಯ ಮತ್ತು ಯೋಜನೆಯ ಉದ್ದೇಶ ವಿಫಲವಾಗಿದ್ದು ಘಟಕದ ನಿರ್ವಹಣೆ ಸಮಸ್ಯೆಗೆ ಮೂಲವಾಗಿದೆ.

ವಿಚಿತ್ರವೆಂದರೆ ಶುದ್ಧ ನೀರಿನ ಘಟಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಪುರಸಭೆಯವರು ವಾಕರಸಾ ಘಟಕಕ್ಕೆ ಪತ್ರ ಬರೆದಿದ್ದಾರಂತೆ. ಆದರೆ ವಾಕರಸಾ ಘಟಕದವರಿಗೆ ಶುದ್ಧ ನೀರಿನ ಘಟಕವನ್ನು ಹಸ್ತಾಂತರ ಮಾಡಿಲ್ಲದೇ ಇರುವುದರಿಂದ ನಿರ್ವಹಣೆ ತಾಂತ್ರಿಕ ಕಾರಣಗಳಿಗಾಗಿ ಕಷ್ಟಸಾಧ್ಯ ಎಂಬಂತಾಗಿದೆ. ಹೀಗಾಗಿ ದಾಹ ನೀಗಿಸಬೇಕಿದ್ದ ಶುದ್ಧ ಕುಡಿಯುವ ನೀರಿನ ಘಟಕ ಯಾವಾಗ ಪುನಃ ಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಕಾಳಜಿವಹಿಸಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.