ಕಲುಷಿತ ವಾತಾವರಣದ ಮಧ್ಯೆಯೂ ನನ್ನ ಗೆಲುವು ನಿಶ್ಚಿತ: ಆಯನೂರು ಮಂಜುನಾಥ್ ವಿಶ್ವಾಸ

| Published : Jun 06 2024, 12:31 AM IST

ಕಲುಷಿತ ವಾತಾವರಣದ ಮಧ್ಯೆಯೂ ನನ್ನ ಗೆಲುವು ನಿಶ್ಚಿತ: ಆಯನೂರು ಮಂಜುನಾಥ್ ವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಪದವೀಧರರ ಕ್ಷೇತ್ರಕ್ಕೆ ಈ ಬಾರಿ ನಡೆದ ಚುನಾವಣೆ ರೀತಿ ಹಿಂದೆಂದೂ ನಡೆದಿರಲಿಲ್ಲ. ಮತದಾನದವರೆಗೆ ಗುಂಡು-ತುಂಡು ಪಾರ್ಟಿಗಳು ಜೋರಾಗಿ ನಡೆದಿವೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿದ್ಯಾವಂತರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಸರಸ್ವತಿ ಬದಲು ಲಕ್ಷ್ಮೀ ಹರಿದಾಡಿದ್ದಾಳೆ. ಹಣದ ಹಂಚಿಕೆ, ಜಾತಿ ಬಣ್ಣ, ಹೆಂಡದ ಹೊಳೆಯಂತ ಕಲುಷಿತ ವಾತಾವರಣದ ಮಧ್ಯೆಯೂ ಮತದಾರರು ಪ್ರಜ್ಞಾವಂತಿಕೆ ಮೆರದಿದ್ದಾರೆ ಎಂಬ ವಿಶ್ವಾಸ ಇದೆ ಎಂದು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪದವೀಧರರ ಕ್ಷೇತ್ರಕ್ಕೆ ಈ ಬಾರಿ ನಡೆದ ಚುನಾವಣೆ ರೀತಿ ಹಿಂದೆಂದೂ ನಡೆದಿರಲಿಲ್ಲ. ಮತದಾನದವರೆಗೆ ಗುಂಡು-ತುಂಡು ಪಾರ್ಟಿಗಳು ಜೋರಾಗಿ ನಡೆದಿವೆ. ಇದರ ಮಧ್ಯೆಯೂ ಪದವೀಧರರು ನನ್ನನ್ನು ಬೆಂಬಲಿಸಿದ್ದು, ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದರು.

ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಗುರುವಾರ ಫಲಿತಾಂಶ ಹೊರಬೀಳಲಿದ್ದು, ಈ ಬಾರಿ ಕಾಂಗ್ರೆಸ್‍ನ ಇಬ್ಬರು ಅಭ್ಯರ್ಥಿಗಳು ಗೆಲ್ಲುತ್ತೇವೆ. ಕಳೆದ ಬಾರಿಗಿಂತ ಈ ಬಾರಿ ಸುಮಾರು 20 ಸಾವಿರ ಹೆಚ್ಚು ಮತದಾನವಾಗಿದೆ. 85 ಸಾವಿರ ಮತದಾರರಿದ್ದರು. 69 ಸಾವಿರ ಮತ ಚಲಾವಣೆಯಾಗಿದೆ. ಎಲ್ಲಾ ಕಡೆ ಒಳ್ಳೆ ವಾತಾವರಣವಿತ್ತು. ನಾನು ಸೇರಿ ಶಿಕ್ಷಕರ ಕ್ಷೇತ್ರದ ಡಾ.ಕೆ.ಕೆ. ಮಂಜುನಾಥ್ ಕೂಡ ಗೆಲ್ಲಲಿದ್ದಾರೆ ಎಂದರು.

ಹೋರಾಟ ಮತ್ತು ಹಣದ ನಡುವೆಯ ಚುನಾವಣೆ ಇದಾಗಿತ್ತು. ಎರಡು ಪಕ್ಷಗಳಲ್ಲಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ನೀಡಿದ್ದರು. ನನಗೆ ಬಿಜೆಪಿ ಅಭ್ಯರ್ಥಿಗಿಂತ ಬಂಡಾಯ ಅಭ್ಯರ್ಥಿಯಾಗಿದ್ದ ರಘುಪತಿಭಟ್‍ ಅವರೇ ಪೈಪೋಟಿ ನೀಡಿದ್ದಾರೆ ಎನಿಸಿದೆ. ನಾನು ಮೊದಲ ಸ್ಥಾನದಲ್ಲಿದ್ದೇನೆ. ನಂತರ ಸ್ಥಾನದಲ್ಲಿ ಉಳಿದವರು ಇದ್ದಾರೆ ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಗೆಲ್ಲುತ್ತಾರೆ ಎಂಬ ವಿಶ್ವಾಸವಿಟ್ಟು ಕೊಂಡಿದ್ದೆವು. ಆದರೆ ಆಗಲಿಲ್ಲ. ಮತದಾರರ ತೀರ್ಮಾನಕ್ಕೆ ನಾವು ತಲೆಭಾಗುತ್ತೇವೆ. ಈ ಚುನಾವಣೆ ಮೋದಿ ಮತ್ತು ಗೀತಾರ ನಡುವೆಯೇ ಇದ್ದಂತೆ ಕಾಣುತ್ತಿತ್ತು. ರಾಘವೇಂದ್ರ ಅವರು ತಮಗೆ ವೋಟು ಕೊಡಿ ಎಂದು ಎಲ್ಲೂ ಕೇಳಲಿಲ್ಲ. ಇದರ ಜೊತೆಗೆ ಜಾತಿ, ಸ್ವಜನಪಕ್ಷಪಾತ, ಹಣ ಗೆದ್ದಿವೆ ಎಂದರು.

ಶಿವಮೊಗ್ಗದಲ್ಲಿ ಮೋದಿ ಗೆದ್ದರು, ದೇಶದಲ್ಲಿ ಮೋದಿ ಗೆಲ್ಲಲು ಆಗಲಿಲ್ಲ. 400ಕ್ಕೂ ಹೆಚ್ಚು ಸೀಟು ಪಡೆಯುತ್ತೇವೆ ಎಂದಿದ್ದರು, ಆದರೆ ಸರಳ ಬಹುಮತವು ಬರಲಿಲ್ಲ. ಶ್ರೀರಾಮನನ್ನು ಮಧ್ಯ ತಂದರು. ಅದು ಕೆಲಸ ಮಾಡಲಿಲ್ಲ. ಉತ್ತರ ಪ್ರದೇಶದಲ್ಲಿ ಅವರು 35 ಸ್ಥಾನ ಕಳೆದುಕೊಂಡಿದ್ದಾರೆ ಎಂದರು.

ಭಾವನೆಗಳ ಮೇಲೆ ಗೆಲ್ಲುವ ಅಧ್ಯಯನ ಮೋದಿ ಪಾಲಿಗೆ ಮುಗಿದಿದೆ. ಭಾವನೆಯೇ ಬೇರೆ, ಬದುಕೆ ಬೇರೆ. ಈಗ ಮೋದಿಯವರು ಬೇರೆಯವರ ಹೆಗಲ ಮೇಲೆ ಕೈಯಿಟ್ಟು ನಡೆಯಬೇಕಾದ ಪರಿಸ್ಥಿತಿ ಬಂದೊದಗಿದೆ. ಅಹಂಗೆ ತಕ್ಕ ಪಾಠವಾಗಿದೆ. ಜನರು ಬಿಜೆಪಿ ತಿರಸ್ಕರಿಸಿ ಕಾಂಗ್ರೆಸ್‍ಗೆ ಪುರಸ್ಕಾರ ಮಾಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರದ ಫಲಿತಾಂಶ ಕಾಂಗ್ರೆಸ್ ಪಾಲಿಗೆ ಉತ್ತಮವಾಗಿಯೇ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಎಚ್.ನಾಗರಾಜ್, ಪ್ರಮುಖರಾದ ಶಿ.ಜು.ಪಾಶ, ಜಿ.ಪದ್ಮನಾಭ್, ಲಕ್ಷ್ಮಣಪ್ಪ, ಮಲ್ಲೇಶ್, ಧೀರರಾಜ್ ಹೊನ್ನಾವಿಲೆ ಇದ್ದರು.