ಸಾರಾಂಶ
- ರೇಣುಕಾ ಮಂದಿರದಲ್ಲಿ ಸಂಗೀತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯುತ್ತಿದ್ದು, ಪ್ರತಿ ಮತವೂ ಅಮೂಲ್ಯವಾಗಿದೆ. ಒಂದೊಂದು ಮತಕ್ಕೂ ಅಪಾರ ಶಕ್ತಿ ಇದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.ನಗರದ ಪಿ.ಬಿ. ರಸ್ತೆಯ ರೇಣುಕಾ ಮಂದಿರದಲ್ಲಿ ಮಂಗಳವಾರ ಸಂಜೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿಗೆ ಏರ್ಪಡಿಸಲಾದ ಸಂಗೀತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮತಗಟ್ಟೆ ಸ್ಥಳದ ಚಿಂತೆಯಿಲ್ಲ:ಈ ಬಾರಿಯ ಚುನಾವಣೆಯಲ್ಲಿ ಮತ ಚೀಟಿಯಲ್ಲಿ ಕ್ಯೂಆರ್ ಕೋಡ್ ಮುದ್ರಿಸುವ ಮೂಲಕ ಮತಗಟ್ಟೆ ಸ್ಥಳದ ಮಾಹಿತಿಯನ್ನು ತಮ್ಮ ಮೊಬೈಲ್‌ನಿಂದಲೇ ಸೆರೆಹಿಡಿದು ಮತಗಟ್ಟೆಗೆ ಕರೆದುಕೊಂಡು ಹೋಗಲಿದ್ದು ನಗರದಲ್ಲಿನ ಮತದಾರರಿಗೆ ಅನುಕೂಲ ಕಲ್ಪಿಸಲಾಗಿದೆ. ಲೊಕೇಷನ್ ಮ್ಯಾಪ್ ಮೂಲಕ ನಿಮ್ಮ ಮತಗಟ್ಟೆಗೆ ಕರೆದುಕೊಂಡು ಹೋಗಲಿದ್ದು ಅದೇ ಮತ ಚೀಟಿ ತೋರಿಸಿ ವೋಟ್ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಮತದಾನ ಮಾಡೋಣ, ಬೇರೆಯವರನ್ನು ಪ್ರೇರೇಪಿಸೋಣ ಎಂಬ ಪ್ರತಿಜ್ಞೆಯನ್ನು ಯುವ ಮತದಾರರು ನೆರವೇರಿಸಬೇಕಾಗಿದೆ ಎಂದರು.
ಚುನಾವಣಾ ರಾಯಭಾರಿ, ಚಿತ್ರಯುವ ನಟ ಪೃಥ್ವಿ ಕೆ.ಆರ್. ಶಾಮನೂರು ಮಾತನಾಡಿ, ಉತ್ತಮ ನಾಯಕನ ಆಯ್ಕೆಗೆ ಪ್ರತಿಯೊಂದು ಮತ ಅಗತ್ಯ. ಒಂದು ಮತ ಕಡಿಮೆಯಾದರೆ ಸಮರ್ಥ ನಾಯಕನ ಆಯ್ಕೆ ಸಾಧ್ಯವಾಗದಿರಬಹುದು. ಈ ನಿಟ್ಟಿನಲ್ಲಿ ಎಲ್ಲರೂ ಮತದಾನ ಮಾಡಲೇಬೇಕಾಗಿದೆ ಎಂದರು.ಶಿಮುಲ್‌ನಿಂದ ಮತದಾನ ಜಾಗೃತಿಗೆ ಹಾಲಿನ ಪ್ಯಾಕೇಟ್ ಮೇಲೆ ಮೇ 7ರಂದು ತಪ್ಪದೇ ಮತದಾನ ಮಾಡಬೇಕೆಂದು ಮುದ್ರಣ ಮಾಡಿದ್ದು ಇದನ್ನು ಬಿಡುಗಡೆ ಮಾಡಲಾಯಿತು.
ಜಿಪಂ ಸಿಇಒ ಹಾಗೂ ಸ್ವೀಪ್ ಅಧ್ಯಕ್ಷರಾದ ಸುರೇಶ್ ಬಿ. ಇಟ್ನಾಳ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿನ್ನಲೆ ಗಾಯಕಿ ಹಾಗೂ ರಾಯಭಾರಿಯಾದ ಶೃತಿ ಪ್ರಹ್ಲಾದ್, ಜನಪದ ಕಲಾವಿದ ಯುಗಧರ್ಮ ರಾಮಣ್ಣ, ಜಿಪಂ ಉಪ ಕಾರ್ಯದರ್ಶಿ ಕೃಷ್ಣನಾಯ್ಕ್, ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಪಾಲಿಕೆ ಆಯುಕ್ತರಾದ ರೇಣುಕಾ, ಡಿಯುಡಿಸಿ ಯೋಜನಾ ನಿರ್ದೇಶಕ ಮಹಂತೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಹಿನ್ನಲೆ ಗಾಯಕಿ ಸೃಷ್ಠಿ ಶಾಮನೂರು, ಗಾಯಕ ರವೀಂದ್ರಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಅನಂತರ ಕಲಾವಿದರು ಸಂಗೀತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.- - - -23ಕೆಡಿವಿಜಿ46ಃ:
ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ಮತದಾನ ಜಾಗೃತಿಗಾಗಿ ನಡೆದ ಸಂಗೀತ ಸಂಜೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಉದ್ಘಾಟಿಸಿದರು.