ಹೊಳೆಆಲೂರು: ಪ್ರತಿ ಮನೆಗೂ ನಲ್ಲಿಗಳ ಮೂಲಕ ಸಮರ್ಪಕ ಕುಡಿಯುವ ನೀರು ಪೂರೈಸಲೆಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ₹1014 ಕೋಟಿ ವೆಚ್ಚದ "ಡಿಬಿಒಟಿ ಯೋಜನೆ " ನಿರ್ವಹಣೆ ಕೊರತೆಯಿಂದ ಹಳ್ಳ ಹಿಡಿದಿದ್ದು, ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ.
ಈ ಯೋಜನೆಯ ಅಂಚಿನ ಹಳ್ಳಿಗಳಾದ ರೋಣ ತಾಲೂಕು ಅಮರಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿ.ಎಸ್.ಬೇಲೇರಿ, ಬಸರಕೋಡ, ಹಿರೇಹಡಗಲಿ, ಅಮರಗೋಳ ಮುಂತಾದೆಡೆ ಕಳೆದ 15 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದೇ ಅಲ್ಲಿನ ಜನತೆ ತೀವ್ರವಾಗಿ ಪರಿತಪಿಸುತ್ತಿದ್ದಾರೆ.ಈ ಹಳ್ಳಿಗಳು ಮಲಪ್ರಭಾ ನದಿ ಬಲದಂಡೆ ಮತ್ತು ದೊಡ್ಡಹಳ್ಳದ ಪಕ್ಕದಲ್ಲೇ ಇದ್ದರೂ ಕುಡಿಯುವ ನೀರಿಲ್ಲದೇ ಗಂಟಲು ಆರಿದೆ. ಕಾರಣ ನದಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಹಳ್ಳ ಬತ್ತಿದೆ. ಹಾಗಾಗಿ ನೀರಿಗಾಗಿ ಮೂರ್ನಾಲ್ಕು ಕಿಮೀ ಅಲೆದಾಡಿ ಹೊಲಗಳಲ್ಲಿನ ಬೊರ್‌ವೆಲ್ ನೀರು ಹೊತ್ತು ತರುತ್ತಿದ್ದಾರೆ. ಈ ಉರಿಬಿಸಿಲಲ್ಲಿ ನೇಗಿಲು ಹೊಡೆದ ಹೊಲಗಳಲ್ಲಿ ಹೆಂಟೆ ತುಳಿಯುತ್ತ ನೀರು ಹೊತ್ತು ತರುವುದೆಂದರೆ ಜೀವ ಬಾಯಿಗೆ ಬರುತ್ತದೆ.
ತೊಟ್ಟಿಕ್ಕುವ ನಲ್ಲಿಗಳುಪ್ರತಿ ಬೇಸಿಗೆಯಲ್ಲೂ ಇಲ್ಲಿ ಇದೇ ಸ್ಥಿತಿ. ಅದರಲ್ಲೂ ಈ ಬಾರಿ ಏರಿದ ಬಿಸಿಲಿನಂತೆ ಕುಡಿಯುವ ನೀರಿನ ಸಮಸ್ಯೆಯೂ ಮಿತಿಮೀರಿದೆ. ಇನ್ನೇನು ನೀರು ಬಂತು ಎನ್ನುವಷ್ಟರಲ್ಲಿ ನಲ್ಲಿಗಳು ತೊಟ್ಟಿಕ್ಕಲು ಶುರು ಮಾಡುತ್ತವೆ. ಒಂದು ಕೊಡವೂ ತುಂಬುವುದಿಲ್ಲ. ಆಗಲೇ ಬಂದ್ ಆಗುತ್ತವೆ.
ಜನವರಿಯಿಂದಲೇ ಈ ಸಮಸ್ಯೆ ಶುರುವಾಗಿದ್ದರೂ ಅಮರಗೋಳ ಗ್ರಾಪಂ ಪಿಡಿಓ ಜಾವೂರ್ ಕಣ್ಣೆತ್ತಿ ನೋಡುತ್ತಿಲ್ಲ. ಫೋನ್ ಮಾಡಿ ಹೇಳಿದ್ದೇವೆ, ಭೇಟಿಯಾಗಿ ತಿಳಿಸಿದ್ದರೂ ಸ್ಪಂದಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ದೂರು. ಈ ಸಮಸ್ಯೆ ಖಾಸಗೀ ಬೋರ್‌ವೆಲ್‌ಗಳಲ್ಲಿ ಗುದ್ದಾಡಿ ನೀರು ತರುವಂತಾಗಿದೆ.
ಯಾಕೀ ಸಮಸ್ಯೆ?
ಡಿಬಿಟಿಒ ಅಡಿಯಲ್ಲಿ ರಾಜ್ಯ ಸರ್ಕಾರ "ದಹಲ್ " ಎನ್ನುವ ಕಂಪೆನಿಗೆ ಗುತ್ತಿಗೆ ನೀಡಿದೆ. ಮಲಪ್ರಭಾ ಜಲಾಶಯದಿಂದ ನೇರವಾಗಿ ಕುಡಿಯುವ ನೀರು ಪೂರೈಸುವ ₹1014 ಕೋಟಿ ವೆಚ್ಚದ ಯೋಜನೆ ಇದು.ಆರಂಭಿಕ ಹಂತದಲ್ಲಿ ಅಂಚಿನ ಹಳ್ಳಿಗಳನ್ನು ಈ ಯೋಜನೆಯಲ್ಲಿ ಅಳವಡಿಸಿರಲಿಲ್ಲ. ಹಾಗಾಗಿ ನಿಗದಿ ಪಡಿಸಿದ ಹಳ್ಳಿಗಳಿಗೆ ಅನುಕೂಲವಾಗಿವಂತೆ ಚಿಕ್ಕನರಗುಂದ ಬಳಿ ಮದರ್ ಟ್ಯಾಂಕ್, ಮಲ್ಲಾಪುರ ಬಳಿ ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿ ಪೈಪ್‌ಲೈನ್ ಜಾಲದ ಮೂಲಕ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ. ಕೊನೆಯಲ್ಲಿ ಅಂಚಿನ ಹಳ್ಳಿಗಳನ್ನೂ ಕೂಡಿಸಿದ್ದು ಈ ಸಮಸ್ಯೆಗೆ ಕಾರಣ ಎನ್ನುತ್ತಾರೆ ರೋಣ ತಾಪಂ ಇಒ ಚಂದ್ರಶೇಖರ ಕಂದಕೂರ.
ಮಳೆಗಾಲದಲ್ಲಿ ಅಷ್ಟೇನೂ ಸಮಸ್ಯೆ ಆಗುವುದಿಲ್ಲ. ಬೇಸಿಗೆಯಲ್ಲಿ ಚಿಕ್ಕನರಗುಂದ ಮತ್ತು ನವಿಲುತೀರ್ಥದ ಬಳಿ ವಿದ್ಯುತ್ ಕೈಕೊಟ್ಟರೆ ನೀರೆತ್ತುವಲ್ಲಿ ವ್ಯತ್ಯಯವಾಗಿ ಅಂಚಿನ ಹಳ್ಳಿಗಳಿಗೆ ಹನಿ ನೀರು ಕೊಡುವುದೂ ದೊಡ್ಡ ಸಾಹಸವಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ದಹಲ್ ಸಂಸ್ಥೆಯವರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಹೇಳುತ್ತೇವೆ. ಆದಷ್ಟು ಶೀಘ್ರದಲ್ಲಿ ಈ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಕಂದಕೂರ ಭರವಸೆ ನೀಡಿದರು.ಎರಡು ಟ್ಯಾಂಕ್ ನಿರ್ಮಿಸಿ
ಬಸರಕೋಡ, ಬೇಲೇರಿ ಗ್ರಾಮಗಳು ನರಗುಂದ ಮತಕ್ಷೇತ್ರದ ಕೊನೆಯ ಹಳ್ಳಿಗಳು. ಅದರಂತೆ ಈ ಹಳ್ಳಿಗಳ ಜಮೀನು ರೋಣ ಮತಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಹಾಗಾಗಿ ಎರಡೂ ಕ್ಷೇತ್ರದ ಶಾಸಕರು (ಸಿ.ಸಿ.ಪಾಟೀಲ್, ಜಿ.ಎಸ್.ಪಾಟೀಲ್) ನಮ್ಮ ಗ್ರಾಮದ ಬಳಿ ಎರಡು ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿ ಈ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಈ ಉಭಯ ಗ್ರಾಮಗಳ ಜನತೆ ಕೋರಿದ್ದಾರೆ.ಪ್ರವಾಹದ ನೀರಿನಿಂದಾಗಿ ಆಸ್ತಿಪಾಸ್ತಿ ಕಳೆದುಕೊಂಡು, ಹುಟ್ಟಿಬೆಳೆದ ಮನೆ ಬಿಟ್ಟು ಈ ನವಗ್ರಾಮಕ್ಕೆ ಬಂದಿದ್ದೇವೆ. ಇಲ್ಲಿ ಕುಡಿಯು ನೀರು ಸಿಗುತ್ತಿಲ್ಲವೆಂದರೆ ಯಾರನ್ನು ದೂರುವುದು? ನೀರಿನ ಕಂಟಕ ನಮ್ಮನ್ನು ಇನ್ನೂ ಬಿಡುತ್ತಿಲ್ಲ ಎಂದು ಇಲ್ಲಿನ ಜನ ನಿಟ್ಟುಸಿರು ಹಾಕುತ್ತಿದ್ದಾರೆ.
ಹುಟ್ಟಿದ ಊರು-ಮನೆ ಕಳೆದುಕೊಂಡ ನೆರೆ ಸಂತ್ರಸ್ತರಾದ ನಮಗೆ ಈಗ ಈ ನವಗ್ರಾಮದಲ್ಲಿ ಸರ್ಕಾರ ಕುಡಿಯುವ ನೀರು ಪೂರೈಸಲು ಸರಿಯಾದ ವ್ಯವಸ್ಥೆ ಮಾಡುತ್ತಿಲ್ಲ ಎನ್ನುವುದು ನೋವು ತಂದಿದೆ ಎನ್ನುತ್ತಾರೆ ಬಿ.ಎಸ್. ಬೇಲೇರಿ ಗ್ರಾಮದ ಪ್ರಮುಖರಾದ ನಿಂಗಪ್ಪ ಮೇಟಿ.ಅಂಚಿನ ಗ್ರಾಮಗಳಾದ ಬಿ.ಎಸ್.ಬೇಲೇರಿ, ಬಸರಕೋಡ ಗ್ರಾಮಗಳಲ್ಲಿ ಕಳೆ 15 ದಿನಗಳಿಂದ ಕುಡಿಯುವ ನೀರು ಪೂರೈಕೆ ಆಗಿಲ್ಲ ಎನ್ನುವುದು ಬೇಸರ ತರಿಸಿದೆ. ತಕ್ಷಣ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದು ತಾಪಂ ಇಒ ಚಂದ್ರಶೇಖರ ಕಂದಕೂರ ಹೇಳಿದ್ದಾರೆ.