ಯುವಕರೆಲ್ಲ ಮುದುಕರಾದ್ರೂ ಬರಲೇ ಇಲ್ಲ ರೈಲು

| Published : Jul 02 2025, 12:25 AM IST

ಸಾರಾಂಶ

ಬಾಗಲಕೋಟೆ ಜಿಲ್ಲೆಯಲ್ಲೇ ಇಳಕಲ್ಲ ನಗರವು ಅತಿದೊಡ್ಡ ನಗರವಾಗಿದೆ. ಆದರೆ ಇಲ್ಲಿಯವರೆಗೂ ನಗರಕ್ಕೆ ರೈಲು ಸೇವೆ ದೊರಕದಿರುವುದು ಈ ಭಾಗದ ಜನತೆಗೆ ನಿರಾಸೆ ತಂದಿದೆ. ಈಗ ಬಂದಿತು, ಆಗ ಬರಬಹುದು ಎಂದು ಕನಸು ಕಾಣುವ ಜನರಿಗೆ ನಗರಕ್ಕೆ ಮಾತ್ರ ರೈಲು ಬರಲೇ ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಆಗುತ್ತಲೇ ಇಲ್ಲ.

ಬಸವರಾಜ ಮಠದ

ಕನ್ನಡಪ್ರಭ ವಾರ್ತೆ ಇಳಕಲ್ಲ

ಬಾಗಲಕೋಟೆ ಜಿಲ್ಲೆಯಲ್ಲೇ ಇಳಕಲ್ಲ ನಗರವು ಅತಿದೊಡ್ಡ ನಗರವಾಗಿದೆ. ಆದರೆ ಇಲ್ಲಿಯವರೆಗೂ ನಗರಕ್ಕೆ ರೈಲು ಸೇವೆ ದೊರಕದಿರುವುದು ಈ ಭಾಗದ ಜನತೆಗೆ ನಿರಾಸೆ ತಂದಿದೆ. ಈಗ ಬಂದಿತು, ಆಗ ಬರಬಹುದು ಎಂದು ಕನಸು ಕಾಣುವ ಜನರಿಗೆ ನಗರಕ್ಕೆ ಮಾತ್ರ ರೈಲು ಬರಲೇ ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಆಗುತ್ತಲೇ ಇಲ್ಲ.

ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಇಳಕಲ್ಲ ನಗರದಲ್ಲಿ ಸಕಲ ಸೌಲಭ್ಯಗಳಿವೆ. ಆದರೆ ರೈಲಿನ ಸೌಲಭ್ಯ ಮಾತ್ರ ಇಲ್ಲವಾಗಿದೆ. ಈ ಸೌಲಭ್ಯ ಪಡೆಯಬೇಕೆಂದರೆ ದೂರದ 200 ಕಿ.ಮೀ ಕ್ರಮಿಸಿ ಸೋಲ್ಲಾಪುರ ಮುಖಾಂತರ ಮುಂಬೈ, ದೆಹಲಿಯಂತಹ ಊರಿಗೆ ಹೊರಡಬೇಕು. ಹಾಗೇ ತಿರುಪತಿ, ಆಂಧ್ರ, ತಮಿಳುನಾಡಂತಹ ಸ್ಥಳಕ್ಕೆ ಹೋಗಲು ದೂರದ 100 ಕಿ.ಮೀ ಕ್ರಮಿಸಿ ಹೊಸಪೇಟೆ ಮುಖಾಂತರ ಚಲಿಸಬೇಕಾಗುತ್ತದೆ.

ಇಳಕಲ್ಲ ನಗರದ ಬಸ್ ನಿಲ್ದಾಣದಲ್ಲಂತೂ ಪ್ರತಿನಿತ್ಯವು ನಮಗೆ ಹುಬ್ಬಳ್ಳಿ, ಹೊಸಪೇಟೆ, ಬಾಗಲಕೋಟೆ, ಬಿಜಾಪುರ, ಮಹಾರಾಷ್ಟ್ರದ ಸೋಲ್ಲಾಪುರ, ಮುಂಬೈ, ದೆಹಲಿ, ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಕಾಣ ಸಿಗುತ್ತಾರೆ. ಈ ಸ್ಥಳಗಳಿಗೆ ಹೊರಡುವ ಬಸ್‌ಗಳು ಭರ್ತಿಯಾಗಿ ಹೋಗುತ್ತವೆ. ಆದರೆ ರೈಲು ಸೇವೆ ಒದಗಿಸಿದರೆ ಸಂಚಾರಕ್ಕೆ ಮತ್ತಷ್ಟು ಅನುಕೂಲ ಎಂಬುದು ಜನರ ನಂಬಿಕೆ.

ರೈಲಿನ ಅವಶ್ಯಕತೆ ಜನರಿಗಷ್ಟೇ ಅಲ್ಲ, ಇಲ್ಲಿನ ರೇಷ್ಮೆ ಸೀರೆ, ಕಲ್ಲುಗಣಿ ಉದ್ಯಮಕ್ಕೂ ಅವಶ್ಯಕವಾಗಿದೆ. ನಗರದಿಂದ ಪ್ರತಿನಿತ್ಯ ಇಳಕಲ್ಲಿನ ಸುಪ್ರಸಿದ್ಧ ಕಲ್ಲು ದಿಮ್ಮಿಗಳು, ಸೀರೆಗಳು, ಚೆನ್ನೈ, ಮಂಗಳೂರು, ಹೈದರಾಬಾದ್‌ ಸೇರಿದಂತೆ ವಿದೇಶಗಳಿಗೂ ಸಾಗಣೆಯಾಗುತ್ತವೆ. ಇವುಗಳನ್ನು ಲಾರಿ ಮತ್ತಿತರ ವಾಹನಗಳಲ್ಲಿ ಕಳುಹಿಸುವುದು ದುಬಾರಿ ಹಾಗೂ ತೊಂದರೆದಾಯಕ ಎನ್ನುವುದು ವ್ಯಾಪಾರಸ್ಥರ ಅಳಲು.

ದೆಹಲಿಗೆ ಹೋಗಿ ಮನವಿ ಸಲ್ಲಿಕೆ:

ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅತಿಹೆಚ್ಚು ಟ್ಯಾಕ್ಸ್‌ ಕಟ್ಟುವ ಈ ನಗರಕ್ಕೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರಕುತ್ತಿಲ್ಲ ಎಂಬ ಕೊರಗು ಈ ಭಾಗದ ಜನರಿಗಿದೆ. ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ರೈಲು ಸೇವೆಗಾಗಿ ಸಾರ್ವಜನಿಕರು ಹಲವು ಬಾರಿ ಸರ್ಕಾರಕ್ಕೆ ಮನವಿ ಅರ್ಪಿಸಿದ್ದಾರೆ. ಇನ್ನು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲಿ 2016-17ರಲ್ಲಿ ೧೦೦ ಜನರ ನಿಯೋಗವು ದೆಹಲಿಗೆ ಹೋಗಿ ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟು ಒತ್ತಾಯಿಸಿದೆ.

ಆ ಸಮಯದಲ್ಲಿ ಕೇಂದ್ರ ಸರ್ಕಾರ ಇಳಕಲ್ಲ ನಗರದ ಮನವಿಗೆ ಸ್ಪಂದಿಸಿ, ಆಲಮಟ್ಟಿಯಿಂದ ಕೊಪ್ಪಳ ಮಾರ್ಗವಾಗಿ ರೈಲು ಸೇವೆ ನೀಡಲು ಸರ್ವೇಗೆ ಆದೇಶಿಸಿ, ಸರ್ವೇ ಕಾರ್ಯಕೈಗೊಂಡಿತ್ತು. ಅಲ್ಲದೆ ಆಗಿನ ಸಿಎಂ ಜಗದೀಶ ಶೆಟ್ಟರ ನೇತೃತ್ವದ ರಾಜ್ಯ ಸರ್ಕಾರವು ಜಾಗ ಸ್ವಾಧೀನಕ್ಕೆಂದು ₹೧೫೦ ಕೋಟಿ ಮಂಜೂರುಗೊಳಿಸಿತ್ತು. ಆದರೆ ಆ ಯೋಜನೆ ಅಲ್ಲಿಗೆ ನೆನಗುದಿಗೆ ಬಿದ್ದು, ಇಳಕಲ್ಲಿಗೆ ರೈಲು ಬರುವುದು ತಪ್ಪಿದೆ. ಮತ್ತೆ ರಾಜಕೀಯ ಷಡ್ಯಂತ್ರದಿಂದ ಗದಗ ಗಜೇಂದ್ರಗಡ, ಇಳಕಲ್ಲ ಮುದಗಲ್ಲ, ವಾಡಿ ಮಾರ್ಗದ ರೈಲು ಕೈ ತಪ್ಪಿ ಕುಷ್ಟಗಿಗೆ ಹೋಗಿದೆ. ರೈಲು ಬಾರದೇ ಹೋದಲ್ಲಿ ಜನರು ಪ್ರತಿಭಟನೆ ಹಾದಿ ಹಿಡಿಯುವ ವಿಚಾರದಲ್ಲಿದ್ದಾರೆ. ಇದೆಲ್ಲಾ ನಡೆಯಬಾರು ಎಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಳಕಲ್ಲ ನಗರದ ಜನರ ಬಹುದಿನದ ಬೇಡಿಕೆ ಈಡೇರಿಸುವಂತಾಗಲಿ ಎಂಬುದು ಜನರ ಆಶಯವಾಗಿದೆ.ಆಲಮಟ್ಟಿ- ಕೊಪ್ಪಳ ರೈಲು ಮಾರ್ಗ ಈ ಹಿಂದೆ ಮಂಜೂರಾಗಿತ್ತು. ಯಾವುದೋ ಕಾರಣಕ್ಕಾಗಿ ಕಾರ್ಯಾರಂಭವಾಗಿಲ್ಲ. ಈಗ ನೂತನ ಆಲಮಟ್ಟಿ- ಚಿತ್ರದುರ್ಗ ರೈಲು ಮಾರ್ಗಕ್ಕಾಗಿ ಮನವಿ ಕೊಡಲಾಗಿದ್ದು, ಮಂಜೂರಾಗುವ ಹಂತದಲ್ಲಿದೆ. ಒಟ್ಟಾರೆ ನಾನು ಇಳಕಲ್ಲ ನಗರದ ಜನರಿಗೆ ನಿರಾಸೆ ಮಾಡುವುದಿಲ್ಲ. ಶೀಘ್ರವೇ ನಗರಕ್ಕೆ ರೈಲು ಮಂಜೂರು ಮಾಡಿಸುವೆ.

- ಪಿ.ಸಿ.ಗದ್ದಿಗೌಡರ, ಸಂಸದರು

ಇಳಕಲ್ಲ ನಗರಕ್ಕೆ ರೈಲು ಯೋಜನೆ ಇಲ್ಲಿನ ಜನರ ಬಹುದಿನದ ಬೇಡಿಕೆಯಾಗಿದೆ. ಈ ಮೊದಲು ಆಲಮಟ್ಟಿ- ಕೊಪ್ಪಳ ರೈಲು ಯೋಜನೆ ಕೈಗೊಳ್ಳಲು ಉದ್ದೇಶಿಸಿಲಾಗಿತ್ತು. ಆದರೆ ಅದು ಅನುಷ್ಠಾನಕ್ಕೆ ಬರಲಿಲ್ಲ. ಈಗ ರೈಲು ಹೋರಾಟ ಸಮಿತಿ, ಸಂಸದರು ಹಾಗೂ ಈ ಭಾಗದ ಜನ ಪ್ರತಿನಿಧಿಗಳ ಪ್ರಯತ್ನದಿಂದ ಆಲಮಟ್ಟಿ- ಚಿತ್ರದುರ್ಗ ರೈಲು ಯೋಜನೆ ಜಾರಿ ಹಂತದಲ್ಲಿದೆ. ಇದು ಏನಾಗುತ್ತೋ ಕಾದು ನೋಡಬೇಕು.

- ಶರಣಪ್ಪ ಅಕ್ಕಿ, ರೈಲು ಹೋರಾಟ ಸಮಿತಿ ಅಧ್ಯಕ್ಷ ಇಳಕಲ್ಲ