ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳು ಕಳೆದು ಅ. ೨ರಿಂದ ಬೇಸಿಗೆ (ದಸರಾ) ರಜೆ ಬಂದರೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಬೇಕಾದ ಶೂ ಹಾಗೂ ಸಾಕ್ಸ್‌ ಇನ್ನೂ ವಿತರಣೆಯಾಗದೇ ಇರುವುದು ಪಾಲಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಮಹದೇವಪ್ಪ ಎಂ. ಸ್ವಾಮಿ

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳು ಕಳೆದು ಅ. ೨ರಿಂದ ಬೇಸಿಗೆ (ದಸರಾ) ರಜೆ ಬಂದರೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಬೇಕಾದ ಶೂ ಹಾಗೂ ಸಾಕ್ಸ್‌ ಇನ್ನೂ ವಿತರಣೆಯಾಗದೇ ಇರುವುದು ಪಾಲಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳಿಗೆ ಉಚಿತವಾಗಿ ಶೂ-ಸಾಕ್ಸ್ ವಿತರಿಸುವ ಯೋಜನೆಯಿಂದ ಪಾಲಕರಿಗೆ ಆರ್ಥಿಕ ಹೊರೆಯಾಗುವುದು ತಪ್ಪುತ್ತದೆ. ಆದರೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿದ್ಯಾರ್ಥಿಗಳ ಕೈ ಸೇರಬೇಕಿದ್ದ ಶೂ-ಸಾಕ್ಸ್‌ಗಳು ನಾಲ್ಕು ತಿಂಗಳು ಕಳೆದರೂ ತಲುಪದಿರುವುದು ಯೋಜನೆಯ ಅನುಷ್ಠಾನದ ಬಗ್ಗೆ ಪ್ರಶ್ನೆ ಮೂಡಿಸಿದೆ.

ಶಾಲೆಗೆ ಪ್ರತಿದಿನ ತೆರಳುವ ಮಕ್ಕಳಿಗೆ ಶೂ-ಸಾಕ್ಸ್ ಅತ್ಯಗತ್ಯವಾಗಿದ್ದು, ವಿತರಣೆ ವಿಳಂಬದಿಂದ ಕೆಲವು ಪಾಲಕರು ಅನಿವಾರ್ಯವಾಗಿ ಸ್ವಂತ ಖರ್ಚಿನಲ್ಲಿ ಅವುಗಳನ್ನು ಖರೀದಿಸುವಂತಾಗಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಇದು ಹೆಚ್ಚುವರಿ ಹೊರೆಯಾಗಿದೆ. ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಹಲವು ಸೌಲಭ್ಯಗಳನ್ನು ಒದಗಿಸುತ್ತಿರುವಾಗ, ಅಗತ್ಯ ವಸ್ತುಗಳ ವಿತರಣೆಯಲ್ಲಿನ ವಿಳಂಬ ಮಾತ್ರ ನಿರಾಸೆ ಮೂಡಿಸಿದೆ. ತಾಲೂಕಿನ ಯಾವ ಶಾಲೆ ಮಕ್ಕಳಿಗೂ ಇನ್ನೂ ಶೂ-ಸಾಕ್ಸ್ ವಿತರಣೆ ಪೂರ್ಣಗೊಂಡಿಲ್ಲ. ಇನ್ನು ವಿಳಂಬ ಮಾಡದೆ ಅರ್ಹ ಎಲ್ಲ ವಿದ್ಯಾರ್ಥಿಗಳಿಗೆ ಕೂಡಲೇ ಗುಣಮಟ್ಟದ ಶೂ-ಸಾಕ್ಸ್ ವಿತರಿಸಬೇಕು. ವಿತರಣಾ ಪ್ರಕ್ರಿಯೆಯಲ್ಲಿ ಉಂಟಾಗಿರುವ ಲೋಪಗಳನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಕ್ಕಳಿಗೆ ಅಗತ್ಯ ಸೌಲಭ್ಯಗಳು ದೊರೆಯುವಂತೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇನ್ನು ತಾಲೂಕಿನ ಹರಿಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಳೆದ ಸಾಲಿನಲ್ಲೂ ಶೂ, ಸಾಕ್ಸ್ ವಿತರಿಸದೇ ಅಧಿಕಾರಿಗಳು ಮತ್ತು ಶಾಲೆಯ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿಯವರು ಬೇಜವಾಬ್ದಾರಿ ತೋರಿದ್ದಾರೆ. ಕಳೆದ ಸಾಲಿನ ಅನುದಾನ ಬಿಡುಗಡೆಯಾಗಿದ್ದರೂ ಮಕ್ಕಳಿಗೆ ಶೂ ಸಾಕ್ಸ್ ಏಕೆ ವಿತರಿಸಿಲ್ಲ ಎಂದು ಅಧಿಕಾರಿಗಳನ್ನು ಕೇಳಿದರೆ ಇಲ್ಲಸಲ್ಲದ ಸಬೂಬು ಹೇಳುತ್ತಿದ್ದಾರೆ.

ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವುದಕ್ಕಾಗಿ ಸರ್ಕಾರ ಹತ್ತು ಹಲವು ಯೋಜನೆಗಳ ಮೂಲಕ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯ ನೀಡುತ್ತಿದೆ. ಆದರೆ ಇವೆಲ್ಲವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದಂತಹ ಅಧಿಕಾರಿಗಳ ಇಚ್ಛಾಶಕ್ತಿ ಕಡಿಮೆಯಾದರೆ ವಿದ್ಯಾರ್ಥಿಗಳು ಸರಕಾರಿ ಸೌಲಭ್ಯದಿಂದ ವಂಚಿತರಾಗುತ್ತಾರೆಂಬುದಕ್ಕೆ ಇಲ್ಲಿಯವರೆಗೂ ಶೂ-ಸಾಕ್ಸ್‌ ಬರದೇ ಇರುವುದೇ ಒಂದು ನಿದರ್ಶನವೆಂದರೆ ತಪ್ಪಾಗಲಾರದು. ತಾಲೂಕಿನಲ್ಲಿ ಒಟ್ಟು ೧೫೭ ಸರ್ಕಾರಿ ಶಾಲೆಗಳಲ್ಲಿ ೧೮.೩೧೦ ವಿದ್ಯಾರ್ಥಿಗಳ ಪೈಕಿ ೧೨.೦೭೬ ಶೂ, ಸಾಕ್ಸ್‌ ಬಂದಿವೆ. ಇನ್ನೂ ೬೨೩೪ ವಿದ್ಯಾರ್ಥಿಗಳ ಶೂ, ಸಾಕ್ಸ್‌ ಬರದೇ ಇರುವುದರಿಂದ ವಿತರಿಸಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರು, ಜಿಲ್ಲಾ ಉಪನಿರ್ದೇಶಕರು ಹಾಗೂ ಸರಬರಾಜುದಾರರ ಗಮನಕ್ಕೆ ತರಲಾಗಿದೆ. ಎಲ್ಲ ನಂಬರಿನ ಶೂ, ಸಾಕ್ಸ್ ಸಮರ್ಪಕವಾಗಿ ಬಂದ ಮೇಲೆ ವಿತರಿಸಲಾಗುವುದು ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಶೀಮಿಕೇರಿ.