ಸಾರಾಂಶ
ಎಸ್ಸೆಸ್ಸೆಲ್ಸಿ ಟಾಪ್ ಟೆನ್ ಸ್ಥಾನ ಗಿಟ್ಟಿಸಿಕೊಳ್ಳಲು "ಮಿಷನ್ ವಿದ್ಯಾಕಾಶಿ " ಯೋಜನೆ ರೂಪಿಸಿ ಓಡಾಡಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು, ಡಿಡಿಪಿಐ ಎಸ್.ಎಸ್. ಕೆಳದಿಮಠ ಮತ್ತು ಶಿಕ್ಷಣ ಪ್ರೇಮಿಗಳ ಕನಸನ್ನು ಹುಬ್ಬಳ್ಳಿ ಶಹರ ಬಿಇಒ ಘಟಕ ನುಚ್ಚು ನೂರು ಮಾಡಿದೆ.
ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಟಾಪ್ ಟೆನ್ ಸ್ಥಾನ ಗಿಟ್ಟಿಸಿಕೊಳ್ಳಲು "ಮಿಷನ್ ವಿದ್ಯಾಕಾಶಿ " ಯೋಜನೆ ರೂಪಿಸಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ಓಡಾಡಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು, ಡಿಡಿಪಿಐ ಎಸ್.ಎಸ್. ಕೆಳದಿಮಠ ಮತ್ತು ಶಿಕ್ಷಣ ಪ್ರೇಮಿಗಳ ಕನಸನ್ನು ಹುಬ್ಬಳ್ಳಿ ಶಹರ ಬಿಇಒ ಘಟಕ ನುಚ್ಚು ನೂರು ಮಾಡಿದೆ.
ಜಿಲ್ಲೆಯಲ್ಲೇ ಅತ್ಯಂತ ಕಳಪೆ ಫಲಿತಾಂಶ (7ನೇ ಸ್ಥಾನ) ಮಾಡಿರುವ ಹುಬ್ಬಳ್ಳಿ ಶಹರ ಬಿಇಒ ಚನ್ನಪ್ಪಗೌಡರ ವಿರುದ್ಧ ಇದೀಗ ಅಧಿಕಾರಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ಧಾರವಾಡ ಜಿಲ್ಲೆಗೆ ವಿದ್ಯಾಕಾಶಿ ಎಂದು ಹೆಸರಿದೆ. ಆದರೆ, ವಿದ್ಯೆಯಲ್ಲಿ ಮಾತ್ರ ಹಿಂದುಳಿದಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳೆದ ವರ್ಷ (2023-24) 22ನೆಯ ಸ್ಥಾನ ಪಡೆದಿತ್ತು. ಹೇಗಾದರೂ ಮಾಡಿ ಮೊದಲ ಹತ್ತರಲ್ಲಿ ಒಂದು ಸ್ಥಾನ ಪಡೆದುಕೊಳ್ಳಲೇಬೇಕು ಎಂದು ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಯತ್ನ ಮಾಡಿದ್ದವು. ರೂಢಿ ಪರೀಕ್ಷೆ, ನಿತ್ಯ ಪರೀಕ್ಷೆ, ಸಂವಾದ, ಕಾರ್ಯಾಗಾರ ಹೀಗೆ ಎಲ್ಲ ಬಗೆಯ ಶ್ರಮ ಹಾಕಲಾಗಿತ್ತು.
ಸ್ವತಃ ಜಿಲ್ಲಾಧಿಕಾರಿಗಳೇ ತಮ್ಮ ಕೆಲಸದ ಒತ್ತಡದ ಮಧ್ಯೆಯೂ ಪಣ ತೊಟ್ಟು ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಿಕ್ಷಕರಿಗೂ ಕ್ಲಾಸ್ ತೆಗೆದುಕೊಂಡು ಹುರಿದುಂಬಿಸಿದರು. ಕನ್ನಡಪ್ರಭ ಕೂಡ ಅವರ ಪ್ರಯತ್ನಕ್ಕೆ ಸಾಥ್ ನೀಡಿ ಎರಡು ಕಾರ್ಯಾಗಾರಗಳನ್ನು ಆಯೋಸಿತ್ತು.ಈ ಎಲ್ಲರ ಶ್ರಮಕ್ಕೆ ತಕ್ಕಂತೆ ಉಳಿದ ತಾಲೂಕುಗಳು ಸಹ ಶ್ರಮಿಸಿದವು. ಬಿಇಒಗಳೇ ಮುತುವರ್ಜಿ ವಹಿಸಿದರು. ಹೀಗಾಗಿ ಹುಬ್ಬಳ್ಳಿ ಗ್ರಾಮೀಣ, ಧಾರವಾಡ ಗ್ರಾಮೀಣ, ಕಲಘಟಗಿ, ಕುಂದಗೋಳ, ನವಲಗುಂದ, ಧಾರವಾಡ ನಗರ ಹೀಗೆ 6 ತಾಲೂಕುಗಳಲ್ಲಿನ ಫಲಿತಾಂಶ ಉತ್ತಮವಾಯಿತು. ಯಾವ ತಾಲೂಕುಗಳದ್ದು ಶೇ. 65ಕ್ಕಿಂತ ಕಡಿಮೆ ಫಲಿತಾಂಶ ಬರಲೇ ಇಲ್ಲ. ಹುಬ್ಬಳ್ಳಿ ಗ್ರಾಮೀಣವಂತೂ ಶೇ. 76.82ರಷ್ಟು ಫಲಿತಾಂಶ ಪಡೆಯಿತು. ಆದರೆ, ಅದರ ಪಕ್ಕದ ಹುಬ್ಬಳ್ಳಿ ನಗರದಲ್ಲಿ ಮಾತ್ರ ಶೇ. 55.20ಕ್ಕೆ ತೃಪ್ತಿಪಟ್ಟಿತು. ಇದರಿಂದಾಗಿ ಜಿಲ್ಲೆಯ ಫಲಿತಾಂಶ ಕಡಿಮೆಯಾಯಿತು.
ತಪ್ಪು ಮುಚ್ಚಿಕೊಳ್ಳುವ ಯತ್ನ: ಕಳೆದ ಎರಡೂವರೆ ವರ್ಷದಿಂದ ಬಿಇಒ ಚನ್ನಪ್ಪಗೌಡ ಅವರು ಕಚೇರಿಯಲ್ಲೇ (ಒಂದು ಕೋಣೆ) ವಾಸ್ತವ್ಯ ಹೂಡಿ, ಎಚ್‌ಆರ್‌ಎ ಪಡೆದು ಸರ್ಕಾರವನ್ನು ವಂಚಿಸಿದ್ದಾರೆ. ನಿತ್ಯವೂ ಆಪ್ತರೊಂದಿಗೆ ಅಲ್ಲಿ ಗುಂಡು ಪಾರ್ಟಿಯಲ್ಲೇ ಕಾಲಹರಣ ಮಾಡಿದ ಫಲವಾಗಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಕೊನೆಯ ಸ್ಥಾನ ತಲುಪಿದರು.ಚನ್ನಪ್ಪಗೌಡರ ತಮ್ಮ ವಿರುದ್ಧ ಕೇಳಿ ಬಂದ ಹಗರಣದ ಬಗ್ಗೆ ಡಿಡಿಪಿಐ ಅವರಿಗೆ ಉತ್ತರ ನೀಡಿದ್ದಾರೆ ಎಂದು ಅವರದೇ ಕಚೇರಿ ಮೂಲಗಳು ಇದೀಗ ಖಚಿತಪಡಿಸಿವೆ.
ಇವರು ಅಲ್ಲಿ ವಾಸ್ತವ್ಯ ಮಾಡಿರುವ ಬಗ್ಗೆ ಕಚೇರಿ ಮೇಲೆ ಅಳವಡಿಸಿದ ಸಿಸಿ ಟಿವಿ, ಪಾರ್ಟಿಯಲ್ಲಿ ಭಾಗವಹಿಸಿದ ಆಪ್ತರ ರಂಗುರಂಗಿನ ವಿಡಿಯೊಗಳು ಮತ್ತು ಸ್ವತಃ ತಾವೇ ಪತ್ರಿಕೆಗೆ ಮಾತನಾಡುತ್ತ ತಪ್ಪೊಪ್ಪಿಕೊಂಡ ಕಾಲ್ ರೆಕಾರ್ಡ, ಡಿಡಿಪಿಐ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳಿಗೆ ಈ ವಿಷಯ ಗೊತ್ತಿದ್ದಾಗ್ಯೂ ಶಿಕ್ಷಕಿ ಶೈಲಜಾ ಹಿರೇಮಠ ಅವರಿಗೆ ಸೇರಿದ ವಿದ್ಯಾನಗರದ ಮನೆಯಲ್ಲಿ ಬಾಡಿಗೆ ಇರುವುದಾಗಿ ಡಿಡಿಪಿಐ ಅವರಿಗೆ ತಪ್ಪು ಮಾಹಿತಿ ನೀಡಿ ಮತ್ತೊಂದು ಹಗರಣದಲ್ಲಿ ಸಿಲುಕಿದ್ದಾರೆ.ಈ ಹಗರಣ ಇದೀಗ ಶೈಲಜಾ ಹಿರೇಮಠ ಅವರನ್ನು ಸುತ್ತಿಕೊಂಡಿದೆ. ಸೆ.2022 ರಿಂದ ಚನ್ನಪ್ಪಗೌಡರಿಗೆ ತಮ್ಮ ಮನೆ ಬಾಡಿಗೆ ನೀಡಿರುವುದಾಗಿ ಡಿಡಿಪಿಐ ಅವರಿಗೆ ದೃಢೀಕರಣ ನೀಡಿರುವ ಅವರು, ಇದೀಗ ಚಾಪಾ ಕಾಗದದಲ್ಲಿನ ಬಾಡಿಗೆ ಕರಾರು ಪತ್ರ, ಮಹಾನಗರ ಪಾಲಿಕೆಗೆ ಹೆಚ್ಚುವರಿಯಾಗಿ ತುಂಬಿದ ತೆರಿಗೆ, ಪ್ರತಿ ವರ್ಷ ತಾವು ಇಲಾಖೆಗೆ ಸಲ್ಲಿಸುವ ಆದಾಯ ದೃಢೀಕರಣದಲ್ಲಿ ಎರಡು ವರ್ಷದ ಬಾಡಿಗೆಯ ಮೊತ್ತ ವ್ಯತ್ಯಾಸವನ್ನು ತೋರಿಸಬೇಕಿದೆ. ಈ ಕುರಿತಂತೆ ವಿವರಣೆ ಕೇಳಿ ಇವರಿಗೆ ಡಿಡಿಪಿಐ ಅವರು ನೋಟಿಸ್ ನೀಡುವ, ಇಲ್ಲವೇ ಕರೆಸಿ ವಿವರಣೆ ಮತ್ತು ದಾಖಲೆ ಕೇಳುವ ಸಾಧ್ಯತೆ ಇದೆ.
ಪೋನ್ ಪೇ ಮೂಲಕ ಲಂಚ, ಮೂವರು ಎಚ್‌ಎಂಗಳ ಅಮಾನತು ಮತ್ತು ಅದೇ ಸ್ಥಾನಗಳಿಗೆ ನಿಯುಕ್ತಿ, ಕನ್ನಡ ಶಿಕ್ಷಕಿಗೆ ಇಂಗ್ಲಿಷ್ ಶಿಕ್ಷಕಿ ಪಟ್ಟ, ಖಾಸಗೀ ಶಾಲೆಗಳಿಂದ ವಂತಿಗೆ ಸಂಗ್ರಹ, ಎಸ್‌ಡಿಎಂಸಿ ಅಕೌಂಟಿನಿಂದ ಅಕ್ರಮ ಹಣ ತೆಗೆದಿದ್ದು... ಹೀಗೆ ಹತ್ತಾರು ಹಗರಣಗಳು ಈಗ ಒಂದೊಂದಾಗಿ ಚನ್ನಪ್ಪಗೌಡರನ್ನು ಸುತ್ತಿಕೊಳ್ಳುತ್ತಿವೆ. ಡಿಡಿಪಿಐಗೆ ನೀಡಿರುವ ತಮ್ಮ ಉತ್ತರದಲ್ಲಿ ಈ ಬಗ್ಗೆ ಅವರು ಚಕಾರವನ್ನೇ ಎತ್ತಿಲ್ಲ.ಮಿಷನ್ ವಿದ್ಯಾಕಾಶಿ ಯೋಜನೆಯಂತೆ ನಡೆದ ಪ್ರಯತ್ನಗಳ ಫಲವಾಗಿ ಧಾರವಾಡ ಜಿಲ್ಲೆಯು ಈ ಬಾರಿ 22ನೇ ಸ್ಥಾನದಿಂದ 18ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಹುಬ್ಬಳ್ಳಿ ನಗರದ ಫಲಿತಾಂಶ ತೀರಾ ಕಳಪೆಯಾಗಿದೆ. ಇದೊಂದು ಹೆಚ್ಚಾಗಿದ್ದರೆ ನಾವು 10ನೇ ಸ್ಥಾನದ ಆಸುಪಾಸಿನಲ್ಲಿ ಇರುತ್ತಿದ್ದೆವು. ಆದರೆ, ಅದು ಆಗಲಿಲ್ಲ ಬೇಸರ ತಂದಿದೆ ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ತಿಳಿಸಿದರು.