ಸಾರಾಂಶ
ಕುಮಟಾ:
ದೇಶದಲ್ಲಿ ಆಡಳಿತ ನಡೆಸಿದ ಹಿಂದೂ ವಿರೋಧಿ ಧೋರಣೆಯ ಹಲವು ಸರ್ಕಾರಗಳು ನಮ್ಮ ಧರ್ಮ, ಸಂಸ್ಕೃತಿಗೆ ಸಾಕಷ್ಟು ಹಾನಿ ಮಾಡಿವೆ. ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಆಡಳಿತವಾಗುತ್ತಿಲ್ಲ. ಪರಕೀಯರ ಆಳ್ವಿಕೆಯಿಂದ ದೇಶಕ್ಕೆ ರಾಜಕೀಯವಾಗಿ ಸ್ವಾತಂತ್ರ್ಯ ದೊರೆತರೂ ನಮ್ಮ ಶ್ರದ್ಧಾಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ನಮ್ಮದಾಗಲಿಲ್ಲ ಎಂದು ಹಳದೀಪುರದ ವಾಮನಾಶ್ರಮ ಶ್ರೀಗಳು ಖೇದ ವ್ಯಕ್ತಪಡಿಸಿದರು.ಪಟ್ಟಣದ ಮಹಾಲಸಾ ಕಲಾಕ್ಷೇತ್ರದಲ್ಲಿ ಬುಧವಾರ ಹಿಂದೂ ಜನಜಾಗೃತಿ ಸಮಿತಿ ಹಾಗೂ ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ದೇವಸ್ಥಾನಗಳ ಅಧಿವೇಶನ ಉದ್ಘಾಟಿಸಿ ಶ್ರೀಗಳು ಆಶೀರ್ವದಿಸಿದರು.ಸ್ವಾತಂತ್ರ್ಯದ ಬಳಿಕವೂ ನಮ್ಮ ಶ್ರದ್ಧಾಕೇಂದ್ರಗಳ ವಿಚಾರದಲ್ಲಿ ಬ್ರಿಟಿಷರ ನಿಯಮಗಳು ಹಾಗೇ ಉಳಿದುಕೊಂಡಿದ್ದರಿಂದ ಸರ್ಕಾರದ ಹಿಡಿತ ತಪ್ಪಲಿಲ್ಲ. ಹೀಗಾಗಿ ಜನರ ಸುಖ-ಸಂತೋಷದ ಬಾಳಿನ ನಿರೀಕ್ಷೆ ಪೂರ್ಣಗೊಳ್ಳಲಿಲ್ಲ. ನಮ್ಮ ಸಂಪತ್ತು ಅನ್ಯರ ಪಾಲಾಗಬಾರದು. ಹಿಂದೂಗಳು ಎಲ್ಲರೂ ಸೇರಿ ಪ್ರಯತ್ನಪಟ್ಟರೆ ಮಾತ್ರ ನಮ್ಮ ಶ್ರದ್ಧಾಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ನಮ್ಮದೇ ಆಗುತ್ತವೆ. ಜನರ ಒತ್ತಡವಿಲ್ಲದೇ ಸರ್ಕಾರವೂ ಮಣಿಯದು. ದೇವಸ್ಥಾನಗಳ ಆಡಳಿತ ಭಕ್ತರ ಅಧೀನವಾಗಬೇಕು ಎಂಬ ದೃಢ ಸಂಕಲ್ಪವಾಗಬೇಕಿದೆ. ಜಯ ಸಿಗುವ ವರೆಗೆ ಹೋರಾಟವಾಗಬೇಕಿದೆ. ದೇವಸ್ಥಾನ ಉಳಿಸಿದರೆ ಮಾತ್ರ ಬೆಳೆಸಲು ಸಾಧ್ಯ. ಇದಕ್ಕಾಗಿ ಎಲ್ಲರೂ ಸಂಘಟಿತರಾಗಬೇಕಿದೆ. ನಮ್ಮ ಶ್ರದ್ಧಾಕೇಂದ್ರಗಳ ಸ್ವಾಯತ್ತತೆಗಾಗಿ ಸರ್ವ ರೀತಿಯ ಪ್ರಯತ್ನವಾಗಲಿ ಎಂದರು.ಡಾ. ಸೌಮ್ಯಶ್ರೀ ಶರ್ಮಾ ಮಾತನಾಡಿ, ನಮ್ಮೊಳಗಿನ ಶಕ್ತಿ ಜಾಗೃತಿಗೆ, ಉನ್ನತ ಬದುಕಿಗೆ, ಧರ್ಮ ಸಂಸ್ಕೃತಿಯ ಉಳಿವಿಗೆ ದೇವಸ್ಥಾನಗಳು ಬೇಕು. ದೇವಸ್ಥಾನಗಳ ಈ ಮಹತ್ವವನ್ನು ಪೀಳಿಗೆಯಿಂದ ಪೀಳಿಗೆಗೆ ಸರಿಯಾಗಿ ತಿಳಿಸದ ಹೊರತು ಅವುಗಳ ಬಗ್ಗೆ ಕಾಳಜಿ ಬೆಳೆಸಲಾಗದು. ದೇವಸ್ಥಾನಗಳ ಸ್ವಾಯತ್ತತೆ ವಿಚಾರ ಕೇವಲ ಸರ್ಕಾರ ಒಂದರಿಂದ ಆಗುವ ಕೆಲಸವಲ್ಲ, ನಾವೆಲ್ಲರೂ ಈ ಬಗ್ಗೆ ಒಂದಾಗಿ ಕೆಲಸ ಮಾಡಬೇಕಿದೆ. ಎಲ್ಲರೂ ಜಾಗೃತರಾಗೋಣ ಎಂದು ಕರೆ ನೀಡಿದರು.ಮಹಾಸಂಘದ ರಾಜ್ಯ ಸಂಯೋಜಕ ಮೋಹನ ಗೌಡ ಮಾತನಾಡಿ, ಒಂದು ಕಾಲದಲ್ಲಿ ವಿಶ್ವಮಟ್ಟದಲ್ಲಿ ದೇಶದ ಆರ್ಥಿಕತೆಯ ಗರಿಮೆಗೆ ಕಾರಣವಾಗಿದ್ದ ನಮ್ಮ ದೇವಸ್ಥಾನಗಳ ಮೇಲೆ ವಿವಿಧ ಸ್ವರೂಪದ ಆಕ್ರಮಣ, ಲೂಟಿ ನಡೆದುಬಂದಿದೆ. ೧೯೨೭ರಲ್ಲಿ ಎಂಡೋಮೆಂಟ್ ಕಾಯ್ದೆ ಮೂಲಕ ಎಲ್ಲ ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲೆ ಆಡಳಿತಾತ್ಮಕ ಹಿಡಿತವನ್ನೂ ಸಾಧಿಸಿದರು. ೧೯೨೯ರಲ್ಲಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧಾರ್ಮಿಕ ಕೇಂದ್ರಗಳನ್ನು ಕಾಯ್ದೆಯಿಂದ ಹೊರಗಿಡಲಾಯಿತು. ಬಳಿಕ ೧೯೪೭ರಲ್ಲಿ ಪರಕೀಯರ ಆಳ್ವಿಕೆಯಿಂದ ಮುಕ್ತಿ ಸಿಕ್ಕರೂ ಬ್ರಿಟಿಷರು ಮಾಡಿದ ಕಾಯ್ದೆಯಿಂದ ಇಂದಿಗೂ ಮುಕ್ತಿ ಸಿಕ್ಕಿಲ್ಲ. ದೇಶದ ೪ ಲಕ್ಷ ದೇವಸ್ಥಾನಗಳು ಈ ಕಾಯ್ದೆಗೆ ಒಳಪಟ್ಟಿವೆ. ಹಿಂದೂಗಳಿಗೆ ಅನ್ಯಾಯವಾಗುತ್ತಿದೆ. ಇದೆಲ್ಲದರ ವಿರುದ್ಧ ನಮ್ಮ ಮಹಾಸಂಘ ಹೋರಾಟ ಮುಂದುವರಿಸಿದ್ದು ಧಾರ್ಮಿಕ ಸ್ಥಳಗಳ ರಕ್ಷಣೆಗೆ ಕಾರ್ಯೋನ್ಮುಖರಾಗಿದ್ದೇವೆ ಎಂದರು.ಸದಾಶಿವಗಡದ ದುರ್ಗಾದೇವಿ ದೇವಸ್ಥಾನದ ಕಾರ್ಯದರ್ಶಿ ಲಿಂಗರಾಜು ಮಾತನಾಡಿ, ಹಿಂದೂಗಳನ್ನು ಜಾತಿ ಆಧಾರದ ಮೇಲೆ ಒಡೆಯುತ್ತಿದ್ದಾರೆ. ನಾವೆಲ್ಲ ಸಂಘಟಿತರಾಗಿ ದೇವಸ್ಥಾನಗಳ ಆದಾಯ ಅನ್ಯರ ಪಾಲಾಗದಂತೆ ತಡೆಯಬೇಕು ಎಂದು ಹೇಳಿದರು.ವೇ. ಪ್ರಶಾಂತ ಕುಂಭೇಶ್ವರ ಅವರ ವೇದಘೋಷದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅಶ್ವಿನಿ ನಾಯಕ ಹಿಂದೂ ಜನಜಾಗೃತಿ ಸಮಿತಿಯ ಸಂಸ್ಥಾಪಕ ಜಯಂತ ಬಾಲಾಜಿ ಅಠವಲೆ ಸಂದೇಶ ವಾಚಿಸಿ, ಕಾರ್ಯಕ್ರಮ ನಿರ್ವಹಿಸಿದರು. ಗುರುಪ್ರಸಾದ ಗೌಡ, ಸಂದೀಪ ಭಂಡಾರಿ, ಅಶೋಕ ಆಚಾರ್ಯ, ಸುಮಂಗಲಾ ನಾಯಕ, ಸಾಗರ ಕುರ್ಡೇಕರ, ಸುಬ್ರಾಯ ವಾಳ್ಕೆ ಇದ್ದರು.