ಸಾರಾಂಶ
ಲಿಂಗರಾಜು ಕೋರಾ
ಬೆಂಗಳೂರು : ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ 2024-25ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಿ ತಿಂಗಳು ಕಳೆದರೂ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ತಲುಪಿಲ್ಲ. ಕೆಲ ತರಗತಿಗಳಿಗೆ ಕನ್ನಡ ಮಾಧ್ಯಮದಲ್ಲಿ ಕನ್ನಡ, ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕಗಳು ಶಾಲೆಗಳಿಗೆ ಸರಬರಾಜಾಗಿಲ್ಲ. ಇನ್ನು, ಆಂಗ್ಲ ಮಾಧ್ಯಮದ ಬಹುತೇಕ ಪಠ್ಯಪುಸ್ತಕಗಳು ಶಾಲೆಗಳಿಗೆ ತಲುಪಿಲ್ಲ ಎನ್ನುವ ಆರೋಪ ಶಾಲಾ ಶಿಕ್ಷಕರಿಂದ, ಎಸ್‌ಡಿಎಂಸಿ ಸದಸ್ಯರದ್ದಾಗಿದೆ.
ಸರ್ಕಾರ ಸುಮಾರು 2300ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿದೆಯಾದರೂ ಆ ಶಾಲೆಗಳಿಗೆ ಸಮರ್ಪಕವಾಗಿ ಆಂಗ್ಲ ಮಾಧ್ಯಮ ಪಠ್ಯಪುಸ್ತಕಗಳನ್ನು ನೀಡುವಲ್ಲಿ ವಿಳಂಬ ಮಾಡಲಾಗಿದೆ. 1ರಿಂದ 4ನೇ ತರಗತಿ ವರೆಗೆ ಆಂಗ್ಲ ಮಾಧ್ಯಮದ ಯಾವ ಪುಸ್ತಕಗಳೂ ಬಂದಿಲ್ಲ. 5 ರಿಂದ 7ನೇ ತರಗತಿ ವರೆಗೆ ಕೆಲ ಪುಸ್ತಕಗಳು ಬಂದಿವೆ. 8 ರಿಂದ 10ನೇ ತರಗತಿಗೆ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ತಲುಪಿಲ್ಲ.ಈ ಸಂಬಂಧ ‘ಕನ್ನಡಪ್ರಭ’ ರಿಯಾಲಿಟಿ ಚೆಕ್ ನಡೆಸಿದಾಗ ಬೆಂಗಳೂರಿನ ಹೆಬ್ಬಾಳದ ಕೆಂಪಾಪುರದ ಕರ್ನಾಟಕ ಪಬ್ಲಿಕ್ ಶಾಲೆ, ಬ್ಯಾಟರಾಯನಪುರ ಸರ್ಕಾರಿ ಶಾಲೆ, ಹೊಸಕೆರೆ ಹಳ್ಳಿಯ ಸರ್ಕಾರಿ ಶಾಲೆ ಸೇರಿದಂತೆ ನಗರದ ಇನ್ನೂ ಹಲವು ಶಾಲೆಗಳಲ್ಲಿ ಕೆಲ ತರಗತಿಗಳಿಗೆ ಕನಿಷ್ಠ ಒಂದರಿಂದ ಗರಿಷ್ಠ ಮೂರು ಪಠ್ಯಪುಸ್ತಕಗಳು ಇದುವರೆಗೆ ಬಾರದೆ ಇರುವ ಬಗ್ಗೆ ಶಿಕ್ಷಕರು ಮಾಹಿತಿ ನೀಡಿದರು.
ಸರ್ಕಾರಿ ಶಾಲೆಗಳು ಮಾತ್ರವಲ್ಲ ಕೆಲ ಖಾಸಗಿ ಶಾಲೆಗಳಿಂದಲೂ ಕೆಲ ತರಗತಿಗಳಿಗೆ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಬಂದಿಲ್ಲ ಎಂದು ಆಡಳಿತ ಮಂಡಳಿಗಳು ದೂರುತ್ತಿವೆ. ಈ ಸಮಸ್ಯೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ತುಮಕೂರು, ಮೈಸೂರು, ದಾವಣಗೆರೆ, ರಾಯಚೂರು ಸೇರಿದಂತೆ ಇನ್ನೂ ಅನೇಕ ಜಿಲ್ಲೆಗಳಲ್ಲೂ ಕೆಲ ಪುಸ್ತಕಗಳು ಇನ್ನು ಮಕ್ಕಳ ಕೈಗೆ ತಲುಪಿಲ್ಲ.
ತುಮಕೂರು ತಾಲ್ಲೂಕಿನ ವಡ್ಡರಹಳ್ಳಿ ಸರ್ಕಾರಿ ಶಾಲೆ, ಕೋರಾ ಹೋಬಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ಆಂಗ್ಲ ಮಾಧ್ಯಮ ತರಗತಿಯ ಪಠ್ಯಪುಸ್ತಕಗಳು ಸರಬರಾಜಾಗಿಲ್ಲ ಎನ್ನುವುದು ಎಸ್‌ಡಿಎಂಸಿಯವರ ಆರೋಪ. ಚಾಮರಾಜನಗರ ತಾಲ್ಲೂಕಿನಲ್ಲಿ ಮಾತ್ರ ಕನ್ನಡ ಮಾಧ್ಯಮದ ಎಲ್ಲ ಪಠ್ಯಗಳೂ ಶಾಲೆಗಳಿಗೆ ತಲುಪಿವೆ ಎಂದು ಶಿಕ್ಷಕರು ಹೇಳಿದ್ದಾರೆ. ಈ ಬಗ್ಗೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಾದ ಪ್ರೇಮಾ ಅವರನ್ನು ಸಂಪರ್ಕಿಸಿದಾಗ, ಬೇಡಿಕೆಗೆ ಅನುಗುಣವಾಗಿ ಶೇ.99ರಷ್ಟು ಪಠ್ಯಪುಸ್ತಕಗಳನ್ನು ನಾವು ತಾಲೂಕು ಹಂತಕ್ಕೆ ಅಂದರೆ ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಿಗೆ ಸರಬರಾಜು ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ.
ಬಿಇಒಗಳನ್ನು ಪ್ರಶ್ನಿಸಿದರೆ ನಮ್ಮ ಕಚೇರಿಗೆ ಬಂದಿರುವ ಯಾವುದೇ ಪುಸ್ತಕಗಳನ್ನು ವಿಳಂಬ ಮಾಡದೆ ಶಾಲೆಗಳಿಗೆ ತಲುಪಿಸಿದ್ದೇವೆ ಎನ್ನುತ್ತಿದ್ದಾರೆ. ಆದರೆ, ಶಾಲೆಗಳಲ್ಲಿ ಶಿಕ್ಷಕರು ಮಾತ್ರ ಇನ್ನೂ ಬಾರದ ಪಠ್ಯಪುಸ್ತಕಗಳ ಪಟ್ಟಿ ಮಾಡಿ ತೋರಿಸುತ್ತಿದ್ದಾರೆ.ಇತ್ತೀಚಿನ ವರ್ಷಗಳಲ್ಲೇ ರಾಜ್ಯ ಪಠ್ಯಕ್ರಮದ ಪುಸ್ತಕಗಳನ್ನು ಸಮಯಕ್ಕೆ ಸರಿಯಾಗಿ ಮುದ್ರಿಸಿ ಶಾಲೆಗಳಿಗೆ ತಲುಪಿಸಿದ ಉದಾಹರಣೆಗಳು ಬಹಳ ಅಪರೂಪ.
ಆದರೆ, ಈ ಬಾರಿ ಶಾಲಾರಂಭದ ವೇಳೆಗೆ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಸರಬರಾಜು ಮಾಡುತ್ತಿದ್ದು ಪಠ್ಯಪುಸ್ತಕಗಳನ್ನು ನೀಡಿ ಮಕ್ಕಳನ್ನು ಬರಮಾಡಿಕೊಳ್ಳು ತನ್ನ ಮಾರ್ಗಸೂಚಿಯಲ್ಲಿ ಸೂಚಿಸಿತ್ತು. ಆದರೆ, ಅ ಶೇ.100ರಷ್ಟು ಪಠ್ಯಪುಸ್ತಕ ಪೂರೈಕೆ ಕಾರ್ಯ ಪೂರ್ಣಗೊಂಡಿಲ್ಲ.ಕರ್ನಾಟಕ ಪಠ್ಯಪುಸ್ತಕ ಸಂಘವು(ಕೆಟಿಬಿಎಸ್) ಬೇಡಿಕೆಗೆ ಅನುಗುಣವಾಗಿ ಶಾಲೆಗಳಿಗೆ ಶೇ.99ರಷ್ಟು ಪುಸಕ್ತಗಳನ್ನು ಈಗಾಗಲೇ ಬಿಇಒ ಕಚೇರಿಗಳಿಗೆ ಸರಬರಾಜು ಮಾಡಿದೆ. ಅವುಗಳನ್ನು ಶಾಲೆಗಳಿಗೆ ತಲುಪಿಸುವುದು ಬಿಇಒಗಳ ಕರ್ತವ್ಯ. ಯಾವುದೇ ಶಾಲೆಗಳಿಗೆ ಯಾವುದೇ ಪಠ್ಯಪುಸ್ತಕ ಬಾರದ ಬಗ್ಗೆ ಸಂಘಕ್ಕೆ ಮಾಹಿತಿ ನೀಡಿದರೆ ಸಂಬಂಧಿಸಿದ ಬಿಇಒ ಮೂಲಕ ಪರಿಶೀಲಿಸಿ ಕ್ರಮ ವಹಿಸಲಾಗುವುದು.
ಪ್ರೇಮಾ, ಕೆಟಿಬಿಎಸ್ ವ್ಯವಸ್ಥಾಪಕ ನಿರ್ದೇಶಕರು
ಕ್ಯಾಮ್ಸ್‌ನ ಅನೇಕ ಸದಸ್ಯ ಶಾಲೆಗಳು ಇನ್ನೂ ಕೆಲ ಪಠ್ಯಪುಸ್ತಕಗಳ ಬಾರದಿರುವ ಬಗ್ಗೆ ದೂರು ಸಲ್ಲಿಸಿವೆ. ಆದರೆ, ಕೆಟಿಬಿಎಸ್‌ನವರು ಶೇ.95ರಿಂದ 99ರಷ್ಟು ಪಠ್ಯಪುಸ್ತಕಗಳನ್ನು ಸರಬರಾಜು ಮಾಡಿರುವುದಾಗಿ ಹೇಳುತ್ತಿದ್ದಾರೆ. ಅವರು ಹೇಳುವ ಲೆಕ್ಕವೇ ಬೇರೆ,ವಾಸ್ತವವೇ ಬೇರೆ. ಕೆಲವೆಡೆ ಮೊದಲು ಭಾಗ 2ರ ಪಠ್ಯಪುಸ್ತಕ ನೀಡಿದ್ದಾರೆ. ಭಾಗ 1 ಬಂದಿಲ್ಲ. ಆರ್‌ಟಿಇ ಮಕ್ಕಳಿಗೆ ಉಚಿತವಾಗಿ ಬರಬೇಕಾದ ಪುಸ್ತಕಗಳೂ ಬಂದಿಲ್ಲ. ಇದೆಲ್ಲಾ ಯಾವ ಲೆಕ್ಕದಲ್ಲಿ ನೀಡಿರುವುದಾಗಿ ಹೇಳುತ್ತಿದ್ದಾರೋ ಅರ್ಥವಾಗುತ್ತಿಲ್ಲ. ಪರಿಶೀಲನೆ ನಡೆಸಬೇಕಾಗಿ ಕೋರುತ್ತೇವೆ.
ಡಿ.ಶಶಿಕುಮಾರ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ