ಸಾರಾಂಶ
ಪ್ರತಿ ದಿನ ೬೭.೫೦ ಲಕ್ಷ ಲೀಟರ್ ನೀರಿನ ಬೇಡಿಕೆ
೩೬.೪೫ ಲಕ್ಷ ಲೀಟರ್ ನೀರು ಲಭ್ಯನಾಲ್ಕು ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಡಿಪಿಆರ್ ಸಲ್ಲಿಕೆ
ವಿ.ಎಂ. ನಾಗಭೂಷಣಕನ್ನಡಪ್ರಭ ವಾರ್ತೆ ಸಂಡೂರು
ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ನಾರಿಹಳ್ಳ ಜಲಾಶಯ ತುಂಬಿದ್ದರೂ ೮-೧೦ ದಿನಗಳಿಗೊಮ್ಮೆ ನೀರನ್ನು ಪೂರೈಸಲಾಗುತ್ತಿದೆ. ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸಂಡೂರು ಪಟ್ಟಣದ ಪರಿಸ್ಥಿತಿ ದೀಪದ ಕೆಳಗೆ ಕತ್ತಲು ಎನ್ನುವಂತಾಗಿದೆ.ಕುಡಿಯುವ ನೀರಿನ ಬೇಡಿಕೆ ಮತ್ತು ಪೂರೈಕೆಯ ನಡುವಿನ ವ್ಯತ್ಯಾಸವೇ ಕುಡಿವ ನೀರಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ೨೦೧೧ರ ಜನ ಗಣತಿ ಪ್ರಕಾರ ಪಟ್ಟಣದ ಜನಸಂಖ್ಯೆ ೩೭೪೩೧. ಈಗ ಪಟ್ಟಣದ ಜನಸಂಖ್ಯೆ ೪೮-೫೦ ಸಾವಿರಕ್ಕೇರಿಕೆಯಾಗಿದೆ. ಜನ ಸಂಖ್ಯೆ ಹೆಚ್ಚಾದಂತೆ ನೀರು ಸಂಗ್ರಹದ ಟ್ಯಾಂಕ್‌ಗಳ ಸಂಖೆ ಹೆಚ್ಚಾಗಿಲ್ಲ. ಪ್ರತಿ ವ್ಯಕ್ತಿಗೆ ಪ್ರತಿದಿನ ಅಗತ್ಯವಿರುವ ೧೩೫ ಲೀಟರ್‌ನಂತೆ ಒಂದು ದಿನಕ್ಕೆ ಈಗಿನ ಜನಸಂಖೆಗೆ ಅಗತ್ಯವಿರುವುದು ೬೭.೫೦ ಲಕ್ಷ ಲೀಟರ್ ನೀರು. ಆದರೆ, ಈಗಿರುವ ನಾಲ್ಕು ಓವರ್ ಹೆಡ್ ಟ್ಯಾಂಕ್‌ಗಳು ಮತ್ತು ಕೊಳವೆ ಬಾವಿಗಳಿಂದ ಒಟ್ಟು ೩೬.೪೫ ಲಕ್ಷ ಲೀಟರ್ ನೀರು ಲಭ್ಯವಾಗುತ್ತಿದೆ. ಬೇಡಿಕೆ ಮತ್ತು ಪೂರೈಕೆಯ ನಡುವಿನ ವ್ಯತ್ಯಾಸದಿಂದ ಪಟ್ಟಣದ ಜನತೆಗೆ ಕುಡಿಯುವ ನೀರು ೮-೧೦ ದಿನಕ್ಕೊಮ್ಮೆ ಪೂರೈಸಲಾಗುತ್ತಿದೆ.
ಕುಡಿಯುವ ನೀರಿನ ಸಮಸ್ಯೆಗೆ ವಿದ್ಯುತ್ ಸರಬರಾಜಿನಲ್ಲಿನ ವ್ಯತ್ಯಯವೂ ಕಾರಣವಾಗಿದೆ. ತಾರಾನಗರದ ಬಳಿಯ ನಾರಿಹಳ್ಳ ಜಲಾಶಯದ ಹತ್ತಿರದಲ್ಲಿರುವ ಪಂಪ್‌ಹೌಸ್‌ಗೆ ಸದಾ ವಿದ್ಯುತ್ ಪೂರೈಸುವ ಎಕ್ಸ್ಪ್ರೆಸ್ ಫೀಡರ್ ಲೈನ್ ವ್ಯವಸ್ಥೆ ಇಲ್ಲ. ಈ ಪಂಪ್‌ಹೌಸ್ ಪಕ್ಕದಲ್ಲಿರುವ ಎನ್‌ಎಂಡಿಸಿಗೆ ಸೇರಿದ ಪಂಪ್‌ಹೌಸ್‌ಗೆ ಎಕ್ಸ್ಪ್ರೆಸ್ ಪೀಡರ್ ಲೈನಿನ ವ್ಯವಸ್ಥೆ ಇದೆ. ಪಟ್ಟಣಕ್ಕೆ ಪಂಪ್‌ಹೌಸ್‌ಗೆ ವಿದ್ಯುತ್ ಪೂರೈಕೆಯ ಲೈನಿನಲ್ಲಿ ತೊಂದರೆ ಕಾಣಿಸಿಕೊಂಡರೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಗ್ಯಾರಂಟಿ. ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾದಾಗ, ಎನ್‌ಎಂಡಿಸಿ ಲೈನಿನಿಂದ ವಿದ್ಯುತ್ ಪಡೆಯುವ ಪ್ರಸ್ತಾವ ಹಲವು ವರ್ಷಗಳಿಂದ ಇದೆಯಾದರೂ ಇದು ಇನ್ನೂ ಕಾರ್ಯಗತವಾಗಿಲ್ಲ.ಹೀಗಾಗಿ ಸಂಡೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಪಂಪ್‌ಹೌಸ್‌ಗೆ ಪ್ರತ್ಯೇಕವಾದ ಎಕ್ಸ್ಪ್ರೆಸ್ ಫೀಡರ್ ಲೈನ್ ವ್ಯವಸ್ಥೆಯಾದರೆ ಪಂಪ್‌ಹೌಸ್‌ನ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂಬ ಮಾತು ಜನತೆಯಿಂದ ಕೇಳಿ ಬರುತ್ತಿದೆ.
ಪಟ್ಟಣದ ೮ನೇ ವಾರ್ಡಿನ ಹಲವು ನಾಗರಿಕರು ಇತ್ತೀಚೆಗೆ ಪುರಸಭೆಯಲ್ಲಿ ನಡೆದ ಬಜೆಟ್ ಮಂಡನಾ ಸಭೆಯ ನಂತರ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರನ್ನು ಭೇಟಿಯಾಗಿ ತಮ್ಮ ವಾರ್ಡ್‌ನಲ್ಲಿ ೧೨ ದಿನವಾದರೂ ನೀರು ಪೂರೈಕೆ ಮಾಡಿಲ್ಲ. ಒಂದು ಕೊಳವೆ ಬಾವಿಯೂ ಇಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಜನತೆ ಪುರಸಭೆಗೆ ಮುತ್ತಿಗೆ ಹಾಕಲಿದ್ದಾರೆ ಎಂದು ದೂರಿದ್ದು ಮತ್ತು ಬಜೆಟ್ ಮಂಡನಾ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಒಕ್ಕೊರಲಿನಿಂದ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದು ಇಲ್ಲಿನ ನೀರಿನ ಸಮಸ್ಯೆಗೆ ಕನ್ನಡಿ ಹಿಡಿದಂತಿತ್ತು.