ಹೂವಿಗೆ ಬಂಪರ್ ದರ ಇದ್ದರೂ ಬೆಳೆಯೇ ಇಲ್ಲ

| Published : May 13 2024, 12:02 AM IST

ಸಾರಾಂಶ

ತರಕಾರಿ, ಹಣ್ಣು, ರೇಷ್ಮೆ, ಹಾಲಿನೊಂದಿಗೆ ಜಿಲ್ಲೆಯ ಪ್ರಮುಖ ಕೃಷಿಯಾಗಿರುವ ಪುಷ್ಪೋದ್ಯಮಕ್ಕೆ ಈಗ ಬಿಸಿಲಿನ ತಾಪಕ್ಕೆ ಗುರಿಯಾಗಿದೆ. ಅತಿಯಾದ ಬಿಸಿಲಿನ ಝಳಕ್ಕೆ ಪುಷ್ಪೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಭೀಕರ ಬರ ಹಿನ್ನೆಲೆ ಈ ಬಾರಿ ಸರಿಯಾದ ಉತ್ಪಾದನೆ ಇಲ್ಲದೆ ಹೂವುಗಳಿಗೆ ಬಂಗಾರದಂತಹ ಬೆಲೆ ಬಂದಿದೆ. ಆದರೆ ಸುಡುತ್ತಿರುವ ಬಿಸಿಲಿನಲ್ಲಿ ಬೆಳೆಗಳನ್ನು ಕಾಪಾಡಿಕೊಳ್ಳುವುದೇ ಈಗ ಹೂವಿನ ಬೆಳೆಗಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಷ್ಟೇ ನೀರು ಹರಿಸಿದರೂ ಗಿಡಗಳು ಸಾಯುತ್ತಿದ್ದು, ಹೂ ಬೆಳೆಗಾರರನ್ನು ಕಂಗೆಡಿಸಿದೆ.

ತರಕಾರಿ, ಹಣ್ಣು, ರೇಷ್ಮೆ, ಹಾಲಿನೊಂದಿಗೆ ಜಿಲ್ಲೆಯ ಪ್ರಮುಖ ಕೃಷಿಯಾಗಿರುವ ಪುಷ್ಪೋದ್ಯಮಕ್ಕೆ ಈಗ ಬಿಸಿಲಿನ ತಾಪಕ್ಕೆ ಗುರಿಯಾಗಿದೆ. ಅತಿಯಾದ ಬಿಸಿಲಿನ ಝಳಕ್ಕೆ ಪುಷ್ಪೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ.

ಬಿಸಿಲಿಗೆ ಒಣಗುತ್ತಿರುವ ಹೂ

ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದರೂ ಸರಿಯಾದ ಉತ್ಪಾದನೆ ಇಲ್ಲದೆ ನಷ್ಟ ಅನುಭವಿಸವಂತಾಗಿದೆ. ಕಳೆದ ಹಲವು ತಿಂಗಳ ಹಿಂದೆ ಬೆಲೆಯ ಕುಸಿತದಿಂದ ಕಂಗಾಲಾಗಿದ್ದ ಹೂವು ಬೆಳೆಗಾರ, ಹೂವಿನ ಬೆಲೆ ಜಿಗಿಯುತ್ತಿದ್ದಂತೆ ಖುಷಿಯಾಗಿದ್ದ. ಆದರೆ ಬಿಸಿಲಿನ ಪ್ರಖರತೆ 39 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಅತಿಯಾದ ತಾಪಮಾನದಿಂದ ಹೂಗಳು ಅರಳುವುದಿರಲಿ, ಉಳಿಸಿ ಕೊಳ್ಳುವುದೇ ಸಮಸ್ಯೆಯಾಗಿ ಮಾರ್ಪಟ್ಟಿದೆ.

ಹಣ್ಣು ಮತ್ತು ತರಕಾರಿ ಹೆಚ್ಚು ಬೆಳೆಯುವ ಜಿಲ್ಲೆಯ ರೈತರು ಇತ್ತೀಚಿನ ವರ್ಷಗಳಲ್ಲಿ ಗುಲಾಬಿ, ಸೇವಂತಿ ಹಾಗೂ ಚೆಂಡು ಹೂವು ಸೇರಿ ಹಲವು ಬಗೆಯ ಅಲಂಕಾರಿಕ ಹೂವು ಬೆಳೆಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಹೂವು ಬೆಳೆಯ ವಿಸ್ತೀರ್ಣವೂ ಹೆಚ್ಚುತ್ತಿದೆ. ಇಲ್ಲಿಬೆಳೆದ ಹೂಗಳು ತಮಿಳುನಾಡು, ಮಹಾರಾಷ್ಟ್ರ, ಕೇರಳ, ದಿಲ್ಲಿಸೇರಿ ರಾಜ್ಯ ಮತ್ತು ವಿಶ್ವದ ನಾನಾ ಭಾಗಗಳಿಗೆ ರವಾನೆಯಾಗುತ್ತಿದ್ದು, ಒಳ್ಳೆಯ ಬೇಡಿಕೆಯೂ ಇದೆ.

ಮಾರುಕಟ್ಟೆಯಲ್ಲಿ ಹೂಗಳ ಕೊರತೆ

ಹೂವಿನ ಉತ್ಪಾದನೆ ಪ್ರಮಾಣ ಹೆಚ್ಚಾಗಿರುವುದರಿಂದ ಚಿಕ್ಕಬಳ್ಳಾಪುರ ಎಪಿಎಂಸಿ, ನಗರ ಹೊರವಲಯದ ಹೂವಿನ ಮಾರುಕಟ್ಟೆಗೆ ಟನ್‌ಗಟ್ಟಲೇ ಹೂಗಳನ್ನು ರೈತರು ರವಾನಿಸುತ್ತಿದ್ದರು. ಆದರೀಗ ಮಾರುಕಟ್ಟೆಗಳು ಹೂವುಗಳಿಲ್ಲದೆ ಬಿಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಿತಿ ಮೀರಿದ ತಾಪಮಾನ ಇರುವ ಹಿನ್ನೆಲೆ ಹೂವಿನ ಗಿಡಗಳನ್ನು ಬೆಳೆಯಲು ಕಷ್ಟವಾಗಿದ್ದು, ಈಗಾಗಲೇ ನಾಟಿಯಾಗಿರುವ ತೋಟಗಳನ್ನು ಉಳಿಸಿಕೊಳ್ಳಲು ಪ್ರಖರ ಬಿಸಿಲು ಅವಕಾಶ ಕೊಡುತ್ತಿಲ್ಲ. ಇದರಿಂದ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಂತೆ ಹೂವು ಬಾರದೆ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಸದ್ಯ ಹೂವಿಗೆ ಮಾರುಕಟ್ಟೆಯಲ್ಲಿ ಬನ್‌ ರೋಸ್‌ ಕೆಜಿಗೆ 200ರಿಂದ 250 ರು, ಚಾಕಲೇಟ್‌ ರೋಸ್‌ ಕೆಜಿಗೆ 230ರಿಂದ 250 ರು, ಸೆಂಟ್‌ ಎಲ್ಲೋ ಕೆಜಿಗೆ 200ರಿಂದ 250 ರು, ವೈಟ್‌ ಸೇವಂತಿ ಕೆಜಿಗೆ 250 ರು, ಐಶ್ವರ್ಯ ಗೆ 230ರಿಂದ 250 ರು, ಮಾರಾಟವಾಗುತ್ತಿದೆ. ಕನಕಾಂಬರ ಕೆಜಿ 600ರಿಂದ 800 ರು, ಸುಗಂಧರಾಜ ಕೆಜಿ 200ರಿಂದ 300 ರು., ಸೇವಂತಿ ಕೆಜಿ 200ರಿಂದ 250 ರು, ಬಟಸ್ಸ್‌ ಕೆಜಿ 200ರಿಂದ 250 ರು, ಚೆಂಡು ಹೂವು ಕೆಜಿ 60ರಿಂದ 120 ರು, ಮಲ್ಲಿಗೆ ಕೆಜಿ 600ರಿಂದ 800 ರು, ಕಾಕಡ ಕೆಜಿ 500ರಿಂದ 700 ರು,ಗಳ ಬೆಲೆ ಇದೆ. ಆದರೆ ಬೆಲೆ ಇದ್ದರೂ ಬೆಳೆಯೇ ಇಲ್ಲದಂತಾಗಿದೆ.

ಮಳೆ ಬರುವವರೆಗೆ ಬೇಡಿಕೆ

ನೆರೆ ರಾಜ್ಯಗಳಿಂದ ಇಲ್ಲಿನ ಗುಲಾಬಿಗೆ ಒಳ್ಳೆಯ ಬೇಡಿಕೆ ಇದೆ. ಆದರೆ ಸ್ಥಳೀಯ ಮಾರುಕಟ್ಟೆಗೂ ಸದ್ಯ ಮಾರುಕಟ್ಟೆಗೆ ಬರುತ್ತಿರುವ ಗುಲಾಬಿ ಸಾಲುತ್ತಿಲ್ಲ. ಇನ್ನು ಹೊರ ರಾಜ್ಯಗಳಿಗೆ ಬೇಡಿಕೆ ಇದ್ದರೂ ಕಳಿಸಲು ಆಗುತ್ತಿಲ್ಲ. ಒಳ್ಳೆಯ ಮಳೆಯಾಗುವವರೆಗೂ ಹೂವಿನ ಬೆಲೆಗೆ ಮೋಸವಿಲ್ಲ. ಆದರೆ ಬಿಸಿಲಿನಿಂದ ಸರಿಯಾದ ಫಸಲು ಇಲ್ಲದೆ ಹೂಗಳು ಮಾರುಕಟ್ಟೆಗೆ ಬರುತ್ತಿಲ್ಲ.

ಆದರೆ ಗಿಡಗಳು ಒಣಗುತ್ತಿರುವ ಕಾರಣ ಹೂಗಳೇ ಸಿಗುತ್ತಿಲ್ಲ. ಬಂದ ಹೂಗಳು ಬಿಸಿಲಿನ ಪ್ರಖರತೆಗೆ ಗಿಡದಲ್ಲೇ ಒಣಗುತ್ತಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೆಲೆ ಇದ್ದರೂ ರೈತರು ಹೆಚ್ಚಿನ ಹೂವು ಬೆಳೆಯಲಾಗದೇ ನಷ್ಟಕ್ಕೆ ಸಿಲುಕಿದ್ದಾರೆ. ಹೂವು ಇರಲಿ, ಗಿಡಗಳನ್ನು ಉಳಿಸಿಕೊಳ್ಳುವುದೂ ಕಷ್ಟವಾಗಿದೆ ಎನ್ನುತ್ತಾರೆ ತಾಲೂಕಿನ ಕತ್ರಗುಪ್ಪೆ ಗ್ರಾಮದ ಹೂ ಬೆಳೆಗಾರ ಗಂಗರಾಜು.