ಶಾಸಕ ಎ.ಮಂಜುಗೆ ಪೆನ್‌ಡ್ರೈವ್‌ ಕೊಟ್ಟೆ: ನವೀನ್‌ ಗೌಡ

| Published : May 13 2024, 12:02 AM IST

ಸಾರಾಂಶ

ಪ್ರಜ್ವಲ್‌ ರೇವಣ್ಣರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್‌ ಬಹಿರಂಗ ಹಾಗೂ ಹಂಚಿಕೆ ಆರೋಪದಲ್ಲಿ ಐವರ ಮೇಲೆ ದಾಖಲಾಗಿದ್ದ ದೂರು ಎಸ್‌ಐಟಿಗೆ ವರ್ಗವಾಗಿರುವ ಬೆನ್ನಲ್ಲೇ ಶನಿವಾರ ರಾತ್ರಿಯೇ ಹಾಸನದಲ್ಲಿ ಲಿಖಿತ್‌ಗೌಡ ಹಾಗೂ ಚೇತನ್‌ ಎಂಬುವವರನ್ನು ಬಂಧಿಸಲಾಗಿದೆ.

ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ ಪೆನ್‌ಡ್ರೈವ್‌ ಪ್ರಕರಣದ ಆರೋಪಿ

ಕನ್ನಡಪ್ರಭ ವಾರ್ತೆ ಹಾಸನ

ಪ್ರಜ್ವಲ್‌ ರೇವಣ್ಣರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್‌ ಬಹಿರಂಗ ಹಾಗೂ ಹಂಚಿಕೆ ಆರೋಪದಲ್ಲಿ ಐವರ ಮೇಲೆ ದಾಖಲಾಗಿದ್ದ ದೂರು ಎಸ್‌ಐಟಿಗೆ ವರ್ಗವಾಗಿರುವ ಬೆನ್ನಲ್ಲೇ ಶನಿವಾರ ರಾತ್ರಿಯೇ ಲಿಖಿತ್‌ಗೌಡ ಹಾಗೂ ಚೇತನ್‌ ಎಂಬುವವರನ್ನು ಬಂಧಿಸಲಾಗಿದೆ. ಈ ನಡುವೆ ಈ ಐವರು ಆರೋಪಿಗಳ ಪೈಕಿ ನವೀನ್‌ ಗೌಡ ಭಾನುವಾರ ಅರಕಲಗೂಡು ಶಾಸಕ ಎ.ಮಂಜು ವಿರುದ್ಧ ಹೊಸ ಬಾಂಬ್‌ ಸಿಡಿಸಿದ್ದಾರೆ.

ನವೀನ್‌ ಗೌಡ ಅವರು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ತನಗೆ ಸಿಕ್ಕ ಪೆನ್‌ಡ್ರೈವ್‌ ಅನ್ನು ಶಾಸಕ ಎ.ಮಂಜುಗೆ ನೀಡಿದ್ದೇನೆ ಎಂದಿದ್ದಾರೆ. ‘ಏ.20 ರಂದು ನನಗೆ ರಸ್ತೆಯ ಅಂಗಡಿ ಮುಂಗಟ್ಟೊಂದರ ಬಳಿ ಪೆನ್‌ಡ್ರೈವ್‌ ಸಿಕ್ಕಿತು. ಅದನ್ನು ನಾನು ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ಎ.ಮಂಜು ಅವರಿಗೆ ನೀಡಿದ್ದೆ’ ಎಂದು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಕುಮಾರಸ್ವಾಮಿಯವರು ಈ ಪೆನ್‌ಡ್ರೈವ್‌ ಹಿಂದೆ ಮಹಾ ನಾಯಕರೆಲ್ಲಾ ಇದ್ದಾರೆ ಎಂದು ಹೇಳಿಕೆ ನೀಡಿದ್ದಾಗಿಯೂ ಪೋಸ್ಟ್‌ ಇದೆ.

ಯಾವ ಪೆನ್‌ಡ್ರೈವ್‌ ಅನ್ನೂ ನನಗೆ ಕೊಟ್ಟಿಲ್ಲ

ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಶಾಸಕ ಎ.ಮಂಜು, ‘ಅಂತಹ ಯಾವ ಪೆನ್‌ಡ್ರೈ ಅನ್ನೂ ನವೀನ್‌ಗೌಡ ನನಗೆ ನೀಡಿಲ್ಲ. ಒಂದು ವೇಳೆ ಹಾಗೇನಾದರು ನನಗೆ ಪೆನ್‌ಡ್ರೈವ್‌ ಕೊಟ್ಟಿದ್ದರೆ ಅಲ್ಲಿಯೆ ಅವನು ಪೆನ್‌ಡ್ರೈವ್‌ ಹಂಚಿದ್ದಾನೆ ಎಂದರ್ಥವಲ್ಲವೇ. ಹಾಗಿದ್ದ ಮೇಲೆ ಅವನನ್ನು ಎಸ್‌ಐಟಿ ಬಂಧಿಸಬೇಕಲ್ಲವೆ?’ ಎಂದು ಪ್ರಶ್ನಿಸಿದರು. ನನ್ನನ್ನು ಯಾರೂ ಕಿಡ್ನಾಪ್‌ ಮಾಡಿಲ್ಲ: ಸಂತ್ರಸ್ತ ಮಹಿಳೆಯ ವಿಡಿಯೋ ಹೇಳಿಕೆಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ಪರಪ್ಪನ ಅಗ್ರಹಾರ ಜೈಲು ಸೇರುವಂತೆ ಮಾಡಿದ ಮಹಿಳೆಯ ಅಪಹರಣ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ಅಪಹರಣಕ್ಕೊಳಗಾಗಿ ಹಲ್ಲೆಗೊಳಗಾದ ಸ್ಥಿತಿಯಲ್ಲಿ ರೇವಣ್ಣ ಆಪ್ತನ ತೋಟದ ಮನೆಯಲ್ಲಿ ಸಿಕ್ಕಿದ್ದ ಮಹಿಳೆಯೇ ತನ್ನನ್ನು ಯಾರೂ ಅಪಹರಣ ಮಾಡಿಲ್ಲ ಎಂದು ಹೇಳಿರುವ ವಿಡಿಯೋವೊಂದು ಹರಿದಾಡುತ್ತಿದೆ.

2 ನಿಮಿಷ 32 ಸೆಕೆಂಡ್‌ ಇರುವ ಈ ವಿಡಿಯೋದಲ್ಲಿ ಸಂತ್ರಸ್ತ ಮಹಿಳೆ, ‘ತನ್ನನ್ನು ಯಾರೂ ಅಪಹರಣ ಮಾಡಿಲ್ಲ. ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ ಹೊರಬಂದ ನಂತರ ಜನರು ಏನೇನೆಲ್ಲಾ ಮಾತನಾಡುತ್ತಿದ್ದರು. ಹಾಗಾಗಿ ನಾನೇ ಬೇಜಾರು ಕಳೆಯಲೆಂದು ನಾಲ್ಕಾರು ದಿನ ಹೊರಗೆ ಹೋಗಿದ್ದೆ. ಆದರೆ, ನನ್ನ ಮಗ ಇದ್ಯಾವುದನ್ನೂ ತಿಳಿಯದೆ ಆತುರದಲ್ಲಿ ಪೊಲೀಸರಿಗೆ ಕಂಪ್ಲೆಂಟ್‌ ನೀಡಿದ್ದಾನೆ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಆದರೆ, ಈ ವಿಡಿಯೋ ಆಕೆ ತೋಟದ ಮನೆಯಲ್ಲಿ ಸಿಗುವುದಕ್ಕಿಂತ ಮುನ್ನ ಮಾಡಿದ್ದೇ ಅಥವಾ ನಂತರದಲ್ಲಿ ಮಾಡಿರುವುದೇ? ಅದನ್ನು ಮಾಡಿರುವುದು ಯಾರು ಎನ್ನುವುದಕ್ಕೆಲ್ಲಾ ಎಸ್‌ಐಟಿ ವಿಚಾರಣೆಯಿಂದಲೇ ಉತ್ತರ ಸಿಗಬೇಕಿದೆ.