ಸಾರಾಂಶ
ಜಿ. ಸೋಮಶೇಖರ
ಕೊಟ್ಟೂರು: 2018ರಲ್ಲಿ ಅಸ್ತಿತ್ವಕ್ಕೆ ಬಂದ ಕೊಟ್ಟೂರು ತಾಲೂಕಿನಲ್ಲಿ ಹಲವು ಸೌಕರ್ಯಗಳು ಇನ್ನೂ ಮರೀಚಿಕೆಯಾಗಿವೆ. ಇದರಿಂದ ಹೆಸರಿಗೆ ತಾಲೂಕು ಕೇಂದ್ರ ಎಂಬಂತಾಗಿದೆ. ಅಲ್ಲದೇ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಾದರೂ ಕಾಮಗಾರಿ ಪ್ರಾರಂಭವಾಗಿಲ್ಲ.ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಡಿಎಂಎಫ್ ಅನುದಾನ ₹10 ಕೋಟಿ ಮೀಸಲಿಸಿ 4 ವರ್ಷ ಕಳೆದಿದೆ. ಆದರೆ ಅನುದಾನ ಬಳಕೆಯಾಗದೆ ಆಡಳಿತ ಭವನದ ಶಂಕುಸ್ಥಾಪನೆಯೂ ನಡೆದಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದಾಗಿ ಕಾರ್ಯರೂಪ ಪಡೆಯುತ್ತಿಲ್ಲ.
ತಾಲೂಕಿನಲ್ಲಿ ಕೇವಲ ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯಾಲಯಗಳು ಕಾರ್ಯಾರಂಭವಾಗಿದ್ದು ಬಿಟ್ಟರೆ ಉಳಿದ ಇಲಾಖೆಗಳ 30 ಕಚೇರಿಗಳು ಇದುವರೆಗೂ ಆರಂಭಗೊಂಡಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನವೂ ಆಗದಿರುವುದು ತಾಲೂಕಿನ ಜನತೆಯಲ್ಲಿ ತೀವ್ರ ಅಸಮಾಧಾನ ತರಿಸಿದೆ.ತಾಲೂಕಿನಲ್ಲಿ ಇದುವರೆಗೂ ಪ್ರತಿ ತಿಂಗಳು ನಡೆಯುವ ಲೋಕಾಯುಕ್ತ ಅರ್ಜಿ ಸ್ವೀಕಾರ ಸೇರಿದಂತೆ ಇತರ ಸಭೆಗಳು ನಡೆಯುತ್ತಿಲ್ಲ. ತಾಲೂಕು ಪಂಚಾಯಿತಿ ಕೆಡಿಪಿ ಸಭೆ ಕಾಟಾಚಾರಕ್ಕೆ ಕೇವಲ ಇದುವರೆಗೂ ಮೂರು ಬಾರಿ ನಡೆದಿವೆ. ಈ ಸಭೆಗಳು ಕೊಟ್ಟೂರು ತಾಲೂಕನ್ನು ಪ್ರತಿನಿಧಿಸುವ ಹಗರಿಬೊಮ್ಮನಹಳ್ಳಿಯಲ್ಲಿ ನಿಯಮಿತವಾಗಿ ನಡೆಯುತ್ತವೆ. ಆ ಸಭೆಯಲ್ಲಿ ಕೊಟ್ಟೂರಿನ ವಿಷಯಗಳಲ್ಲಿ ಪ್ರಸ್ತಾಪವಾಗುತ್ತವೆ, ಮತ್ತೆ ಯಾಕೆ ಕೊಟ್ಟೂರಿನಲ್ಲಿ ಪ್ರತ್ಯೇಕ ಸಭೆ ನಡೆಸಬೇಕೆಂಬ ಉಡಾಫೆ ಮಾತುಗಳನ್ನು ಅಧಿಕಾರಿಗಳು ಆಡುತ್ತಿದ್ದಾರೆ.
ಇದರ ಪರಿಣಾಮ ಕೊಟೂರು ತಾಲೂಕು ಕೇಂದ್ರ ಹೆಸರಿಗೆ ಮಾತ್ರ ಎಂಬಂತಾಗಿದೆ. ಜನತೆ ಎಂದಿನಂತೆ ಹಳೆಯ ತಾಲೂಕು ಕೇಂದ್ರವಾದ ಕೂಡ್ಲಿಗಿಗೆ ಅಲೆದಾಡುತ್ತಿದ್ದಾರೆ. ಸರ್ಕಾರದ ಮೂಲ ಆಶಯ ಸಂಪೂರ್ಣ ವಿಫಲಗೊಂಡಿದೆ. ಆಡಳಿತಾತ್ಮಕ ಅನುಕೂಲ ಕಲ್ಪಿಸಿಕೊಡಬೇಕೆಂಬ ಆಶಯ ಈಡೇರದಂತಾಗಿದೆ. ಬೆರಳೆಣಿಕೆಯ ಸರ್ಕಾರಿ ಕಚೇರಿ ಇದ್ದು, ಇತರ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಇಲ್ಲಿನ ಜನತೆಗೆ ಸಾಧ್ಯವಾಗುತ್ತಿಲ್ಲ.ಇದಲ್ಲದೆ ಹೊಸ ತಾಲೂಕಿನಲ್ಲಿ ಪ್ರಾರಂಭಿಸುತ್ತೇವೆ ಎಂದು ಈ ಹಿಂದೆ ಘೋಷಿಸಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿ, ಸರ್ಕ್ಯೂಟ್ ಹೌಸ್, ನಿರ್ಮಿಸುವ ಭರವಸೆಗಳು ಅನುಷ್ಠಾನಕ್ಕೆ ಬಂದಿಲ್ಲ.
ಅಧಿಕಾರಿಗಳಿಗೆ ಪತ್ರ: ತಾಲೂಕು ಆಡಳಿತ ಭವನ ನಿರ್ಮಿಸುವ ಉದ್ದೇಶಕ್ಕೆ ಸರ್ಕಾರಿ ಸಮುದಾಯ ಭವನದ ಪಕ್ಕ ಜಮೀನನ್ನು ಗುರುತಿಸಲಾಗಿದೆ. ಇದಕ್ಕೆ ಅನುದಾನ ಬಳಕೆಯ ಆಡಳಿತಾತ್ಮಕ ಒಪ್ಪಿಗೆ ದೊರೆಯಬೇಕಿದೆ. ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಹಸೀಲ್ದಾರ್ ಅಮರೇಶ್ ಜಿ.ಕೆ. ತಿಳಿಸಿದರು.ನೋವಿನ ಸಂಗತಿ: ತಾಲೂಕು ರಚನೆಗೊಂಡರೆ ರೈತರು, ಜನಸಾಮಾನ್ಯರ ತೊಂದರೆ ನಿವಾರಣೆಗೊಳ್ಳುತ್ತದೆ ಎಂಬ ಆಶಯ ಇತ್ತು. ಆದರೆ ಈ ಆಶಯಕ್ಕೆ ಬೆಲೆ ಇಲ್ಲದಂತಾಗಿದೆ. ಕೊಟ್ಟೂರು ತಾಲೂಕಿನಲ್ಲಿ ಸರ್ಕಾರದ ಎಲ್ಲ ಕಚೇರಿಗಳು ತೆರೆಯುವಂತಾಗಬೇಕು. ಆಡಳಿತ ಭವನ ನಿರ್ಮಾಣಕ್ಕೆ ಡಿಎಂಎಫ್ ಅನುದಾನವಿದ್ದರೂ ಬಳಕೆಯಾಗದಿರುವುದು ನೋವಿನ ಸಂಗತಿ ಎಂದು ಸಾರ್ವಜನಿಕರಾದ ಡಿ. ಸಿದ್ದಪ್ಪ ತಿಳಿಸಿದರು.