ಮೂವರು ಮಂದಿ ಎಸ್ಪಿ ಬಂದ್ರೂ ಬ್ಲಾಕ್ ಸ್ಪಾಟ್ ಬದಲಾಗಲಿಲ್ಲ!

| Published : Jun 03 2024, 12:31 AM IST

ಸಾರಾಂಶ

ಚಿತ್ರದುರ್ಗದ ಕೆಸ್ಸಾರ್ಟಿಸಿ ಬಸ್ ನಿಲ್ದಾಣದ ರಸ್ತೆಯಲ್ಲಿ ಡಿವೈಡರ್ ನೆಲ ಸಮ ಮಾಡಿದ ನಂತರ ರಸ್ತೆಯಲ್ಲಿಯೇ ಉಳಿದಿರುವ ಕಬ್ಬಿಣದ ರಾಡುಗಳು ಚೂಪಾಗಿ ಶರಶಯ್ಯೆ ಮಾದರಿಯಲ್ಲಿ ಕಂಗೊಳಿಸುತ್ತಿವೆ. ಇಷ್ಟಾದರೂ ಆಡಳಿತಶಾಹಿ ಇತ್ತ ಗಮನಹರಿಸದಿರುವುದು ಅನುಮಾನಗಳಿಗೆ ಎಡೆಮಾಡಿವೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ನಡು ರಸ್ತೆ ಮಧ್ಯೆ ಕುಸಿದಿರುವ ಒಳಚರಂಡಿ ಛೇಂಬರ್ ಮುಚ್ಚಳ ಬದಲಾಯಿಸಲು ಎಷ್ಟು ದಿನ ಬೇಕು? ಯಾವುದೋ ಮೂಲೆಯಲ್ಲಿದ್ದರೆ ಅಧಿಕಾರಿಗಳ ಕಣ್ಣಿಗೆ ಬೀಳಲು ತುಸು ತಡವಾಗಬಹುದು. ಜನ, ವಾಹನ ಸಂಚಾರವಿಲ್ಲದ ರಸ್ತೆಯಲ್ಲಿಯಾದರೆ ಮುಂದೆ ಯಾವಾಗಲಾದರೂ ನೋಡೋಣವೆಂಬ ಅಭಿಪ್ರಾಯ ಬರಬಹುದು. ಆದರೆ ನಿತ್ಯ ಸಹಸ್ರಾರು ವಾಹನ ಸಂಚರಿಸುವ ಅದೂ ಜಿಲ್ಲಾ ರಕ್ಷಣಾಧಿಕಾರಿ ಮನೆ ಮುಂಭಾಗದ ಚೇಂಬರ್ ಮುಚ್ಚಳ ಬದಲಾಯಿಸಲು ಎಷ್ಟು ದಿನ ಬೇಕು. ಬರೋಬ್ಬರಿ ಎರಡು ವರ್ಷಗಳು ದಾಟಿದರೂ ಸಾಧ್ಯವಾಗಿಲ್ಲ. ಮೂರು ಮಂದಿ ಎಸ್ಪಿಗಳು ಬಂದು ಹೋದರೂ ಹಾಗೇ ಇದೆ. ಅಷ್ಟರಮಟ್ಟಿಗೆ ಅಧಿಕಾರಿಗಳು ದಿಕ್ಕೆಟ್ಟು ಹೋಗಿದ್ದಾರೆ.

ಕನ್ನಡಪ್ರಭ ಕಚೇರಿಗೆ ಭಾನುವಾರ ಬೆಳಿಗ್ಗೆ ಬಂದಿದ್ದ ಹಿರಿಯ ನಾಗರಿಕರೊಬ್ಬರು ಸಾರ್, ಎಸ್ಪಿ ಮನೆ ಮುಂಭಾಗದ ಒಳಚರಂಡಿ ಚೇಂಬರ್ ಮುಚ್ಚಳ ಕುಸಿದಿದೆ. ರಾತ್ರಿ ಕತ್ತಲಲ್ಲಿ ಕಾಣಿಸಲಿಲ್ಲ, ಸ್ಕೂಟಿ ಇಳಿದ ತಕ್ಷಣ ದಢ್ ಅಂತ ಶಬ್ದ ಬಂತು. ಇಡೀ ಕಣ್ಣು ಮಂಜಾಯಿತು. ಡಿಸ್ಕ್‌ಗೆ ಹೊಡೆತ ಬಿದ್ದಿರಬೇಕು ಅನ್ನಿಸುತ್ತೆ ಎಂದು ನೋವು ತೋಡಿಕೊಂಡರು. ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಅಟೆಂಪ್ಟ್ ಮರ್ಡರ್ ಕೇಸು ಬುಕ್ ಮಾಡಿ , ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದೆ. ನೋವು ತಿಂದಿದ್ದಲ್ಲದೇ ಪೊಲೀಸ್ ಸ್ಟೇಷನ್‌ಗೆ ಕೋರ್ಟ್ ಅಂತ ಅಲೆದಾಡಬೇಕಾ ಅಂದು ಗೋಗರೆಯುತ್ತಾ ವಾಪಾಸ್ಸಾದರು.

ಒಳಚರಂಡಿಯ ಚೇಂಬರ್ ಅವ್ಯವಸ್ಥೆಯ ಇಂತಹ ಸಾವಿರಾರು ಗುಂಡಿಗಳು ಚಿತ್ರದುರ್ಗದಲ್ಲಿವೆ. ದ್ವಿಚಕ್ರ ವಾಹನ ಸವಾರರು ಈ ಗುಂಡಿಗಳಲ್ಲಿ ಇಳಿದು ಹತ್ತಿ ಮೂಳೆ ವೈದ್ಯರ ಬಳಿ ಎಡತಾಕುತ್ತಿದ್ದಾರೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಒಳಚರಂಡಿ ಚೇಂಬರ್ ಮುಚ್ಚಳಗಳ ವಿಷಯ ಪ್ರಸ್ತಾಪವಾಗುತ್ತದೆ. ಜಿಲ್ಲಾಧಿಕಾರಿಗಳು ಅವ್ಯವಸ್ಥೆ ಸರಿಪಡಿಸಲು ತಿಂಗಳ ಗಡುವು ನೀಡಿ ಸುಮ್ಮನಾಗುತ್ತಾರೆ. ಇದು ನಡೆದೇ ಇದೆ. ಜಿಲ್ಲಾಧಿಕಾರಿಗಳ ಖಡಕ್ ಎಚ್ಚರಿಕೆಗಳು ಪಾಲನೆಯಾಗದೆ ನೇಪಥ್ಯಕ್ಕೆ ಸರಿಯುತ್ತವೆ. ರಸ್ತೆ ಸುರಕ್ಷತಾ ಸಮಿತಿಯಲ್ಲಿ ಎಸ್ಪಿ ಕೂಡಾ ಪ್ರಮುಖ ಸ್ಥಾನದಲ್ಲಿದ್ದಾರೆ.

ಕನ್ನಡಪ್ರಭ ಎರಡು ವರ್ಷದ ಹಿಂದೆ ಮಾಡಿದ್ದ ಏನಿದು ರೋಡೆ, ಏನ್ ದರೋಡೆ ಸರಣಿ ಮಾಲಿಕೆಯಲ್ಲಿ (27-8-2022 ರ ಸಂಚಿಕೆ) ಎಸ್ಪಿ ಮನೆ ಮುಂಭಾಗದ ಈ ಬ್ಲಾಕ್ ಸ್ಪಾಟ್ ಪ್ರಸ್ತಾಪಿಸಿತ್ತು. ಪತ್ರಿಕೆಯಲ್ಲಿ ವರದಿ ಬಂದ ನಂತರ ಕೆಲವು ದಿನ ಈ ಛೇಂಬರ್‌ಗೆ ಬ್ಯಾರಿಕೇಡ್ ಇಡಲಾಗಿತ್ತು. ಆದರೆ ಸರಿಪಡಿಸುವ ಉಸಾಬರಿಗೆ ಹೋಗಲಾಗಿಲ್ಲ. ಇಬ್ಬರು ಎಸ್ಪಿ ಗಳು ವರ್ಗಾವಣೆಯಾಗಿ ಮೂರನೇ ಎಸ್ಪಿಯಾಗಿ ಧರ್ಮೇಂದರ್ ಕುಮಾರ್ ಮೀನಾ ಬಂದಿದ್ದಾರೆ. ಚಿತ್ರದುರ್ಗದಲ್ಲಿರುವ ಇಂತಹ ಗುಂಡಿಗಳ ಬಗ್ಗೆ ಅವರೂ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ ಅವರ ಮನೆ ಮುಂಭಾಗದಲ್ಲಿರುವ ಈ ಬ್ಲಾಕ್ ಸ್ಪಾಟ್ ಸರಿಪಡಿಸಲು ಸಾಧ್ಯವಾಗದೇ ಹೋಗಿದೆ.

ಅಪಾಯಕಾರಿ ರಸ್ತೆ: ಚಿತ್ರದುರ್ಗದ ಗಾಂಧಿ ವೃತ್ತದಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದವರೆಗಿನ ಓನ್ ವೇಯಲ್ಲಿ ನಿರ್ಮಿಸಲಾಗಿದ್ದ ಡಿವೈಡರ್ ನೆಲಸಮ (ಕನ್ನಡಪ್ರಭ ವರದಿ ಪರಿಣಾಮ) ಮಾಡಲಾಗಿದೆ. ಶಾಸಕ ವೀರೇಂದ್ರ ಪಪ್ಪಿ ಖುದ್ದು ಹಾಜರಿದ್ದು ಈ ಡಿವೈಡರ್ ನೆಲಸಮ ಮಾಡಿಸಿದ್ದರು. ಸಾಲದೆಂಬಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನೆಲಸಮ ಮಾಡಲಾದ ಡಿವೈಡರ್ ಅವಶೇಷಗಳ ಕಣ್ತುಂಬಿಕೊಂಡು ಹೋಗಿದ್ದರು.ಮೊಳೆಗಳ ಮೇಲೆ ಅಪಾಯಕಾರಿ ಸಂಚಾರ: ಅಚ್ಚರಿ ಎಂದರೆ ಡಿವೈಡರ್ ತೆರವುಗೊಳಿಸಿದ ಮಹಾನುಭಾವ ಅಲ್ಲಿರುವ ಕಬ್ಬಿಣದ ರಾಡುಗಳ ಕೊಯ್ದು ಅದರ ಮೇಲೆ ಕಾಂಕ್ರಿಟ್ ಹಾಕದೇ ಹಾಗೇ ಹೋಗಿದ್ದಾನೆ. ಪರಿಣಾಮ ರಸ್ತೆ ಮಧ್ಯೆ ಸರಳುಗಳು ಗೋಚರಿಸಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಕೆಲವು ಕಡೆ ರಾಡುಗಳ ಕಟ್ ಮಾಡಿರುವುದು ಚೂಪಾಗಿ ಶರಶಯ್ಯೆ ಮಾದರಿಯಲ್ಲಿ ಕಂಗೊಳಿಸುತ್ತಿವೆ. ಡಿವೈಡರ್ ನಿರ್ಮಿಸಿ ಜನರಿಗೆ ತೊಂದರೆ ಕೊಟ್ಟರೂ ಅಧಿಕಾರಿಗಳಿಗೆ ಇನ್ನೂ ಸಮಾಧಾನವಾಗಿಲ್ಲವೆನಿಸುತ್ತದೆ. ಇದೀಗ ರಸ್ತೆಯಲ್ಲಿ ಮೊಳೆಗಳ ಹೊಡೆದು ಮತ್ತಷ್ಟು ತೊಂದರೆ ಕೊಡಲು ಮುಂದಾಗಿದ್ದಾರೆ. ಕತ್ತಲಲ್ಲಿ ನಡೆದು ಹೋಗುವವರ ಪಾದಗಳಿಗೆ ಈ ಮೊಳೆಗಳು ಚುಚ್ಚಿ ಗಾಯ ಮಾಡುತ್ತಿವೆ. ಅತ್ಯಂತ ಜನ ನಿಬಿಡ ರಸ್ತೆಗೆ ಇಂತಹ ದುಸ್ಥಿತಿ ಬಂದಿದೆ. ಚಿತ್ರದುರ್ಗದಲ್ಲಿ ಆಡಳಿತ ಇದೆಯಾ ಎಂಬ ಅನುಮಾನಗಳು ಮೂಡಿವೆ.