ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕ್ಷೇತ್ರದ ಜನರ ಕೆಲಸಗಳಿಗಾಗಿ ನಾನೇ ವೈಯಕ್ತಿಕವಾಗಿ ಪ್ರತಿ ಟೇಬಲ್‌ಗೆ ಹೋಗಿ ಅಧಿಕಾರಿಗಳನ್ನು ಭೇಟಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಫೈಲ್‌ಗಳು ಮೂಲೆ ಸೇರುತ್ತಿವೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕೆಲ ಅಧಿಕಾರಿಗಳ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಎಸ್.ಎನ್. ರೆಸಾರ್ಟ್‌ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದ ನೂರಾರು ಸಮಸ್ಯೆಗಳನ್ನು ಹೊತ್ತು ಹೋದರೆ ಕೆಲ ಸಚಿವರು ಭೇಟಿಗೆ ಸಿಗುತ್ತಿಲ್ಲ. ಸಮಸ್ಯೆಗಳನ್ನು ಆಲಿಸುವ ತಾಳ್ಮೆ ಕೂಡ ಸಚಿವರಿಗಿಲ್ಲ. ನಮ್ಮದೇ ಸರ್ಕಾರವಿದ್ದರೂ ಸಚಿವರು ನಮಗೆ ಸಿಗುತ್ತಿಲ್ಲ, ಕ್ಷೇತ್ರಕ್ಕೆ ಅನುದಾನ ನೀಡುತ್ತಿಲ್ಲ. ಇಂತಹ ಸಚಿವರ ಕಿವಿ ಹಿಂಡಿ ಕೆಲಸ ಮಾಡಿಸಬೇಕು. ತಮ್ಮದೇ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳ ಮೊಂಡುತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಶಾಸಕರು ತಮ್ಮ ನೋವನ್ನು ನೇರವಾಗಿ ಮುಖ್ಯಮಂತ್ರಿಗಳ ಮುಂದಿಟ್ಟಿದ್ದಾರೆ. ಮುಖ್ಯಮಂತ್ರಿಗಳೇ, ರಾಜ್ಯದ 224 ಶಾಸಕರು ಸಮರ್ಪಕವಾಗಿ ಕೆಲಸ ಮಾಡಿದಾಗ ಮಾತ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಆದರೆ ಕೆಲವು ಸಚಿವರು ಮತ್ತು ಅಧಿಕಾರಿಗಳು ಇದಕ್ಕೆ ಅಡ್ಡಿಯಾಗುತ್ತಿದ್ದಾರೆ. ಕೂಡಲೇ ಅಂತಹ ಸಚಿವರ ಕಿವಿ ಹಿಂಡಿ, ಅವರಿಗೆ ಬುದ್ಧಿ ಹೇಳಿ ಕೆಲಸ ಮಾಡಿಸಿ ಎಂದು ಒತ್ತಾಯಿಸಿದರು.
ಭೂಮಿ ತಂತ್ರಾಂಶದ ಸಮಸ್ಯೆ, ಪಹಣಿ ತಿದ್ದುಪಡಿ, ಖಾತೆ ಬದಲಾವಣೆಯಂತಹ ಸಾಮಾನ್ಯ ಕೆಲಸಗಳಿಗೂ ರೈತರು ತಿಂಗಳುಗಟ್ಟಲೆ ಅಲೆಯುತ್ತಿದ್ದಾರೆ. ತಹಸೀಲ್ದಾರ್ ಮತ್ತು ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಧಿಕಾರಿಗಳ ಮೊಂಡುತನದಿಂದಾಗಿ ತ್ವರಿತವಾಗಿ ಕೆಲಸಗಳಾಗದೆ ಜನಸಾಮಾನ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಂತಾಗಿದೆ.ಅಧಿಕಾರಿಗಳು ಇವತ್ತು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ನಾವು ಹಿರಿಯ ಶಾಸಕರಾಗಿ ಹೋದರೂ ಸ್ಪಂದಿಸುತ್ತಿಲ್ಲ. ಅರವತ್ತೈದಕ್ಕೂ ಹೆಚ್ಚು ಶಾಸಕರು ಸಹಿ ಸಂಗ್ರಹಿಸಿ ಹಕ್ಕುಚ್ಯುತಿ ಮಂಡಿಸಿದರೂ ವರ್ಗಾವಣೆಯಾಗದ ಅಧಿಕಾರಿಗಳ ಹಿಂದೆ ಯಾರಿದ್ದಾರೆ? ವಿಶೇಷವಾಗಿ ಪ್ರಿನ್ಸಿಪಲ್ ಸೆಕ್ರೆಟರಿ ಮಟ್ಟದ ಅಧಿಕಾರಿಗಳ ಅಸಹಕಾರವು ತಾಲೂಕು ಮಟ್ಟದ ಅಧಿಕಾರಿಗಳ ಮೊಂಡುತನಕ್ಕೆ ಸಾಥ್ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.ಬುಧವಾರ ನಡೆದ ಶಾಸಕಾಂಗ ಸಭೆಯಲ್ಲಿ ಶಾಸಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾಗ, ಚಿಕ್ಕಮಗಳೂರು ಶಾಸಕ ತಮ್ಮಯ್ಯ (ರಾಜು ಗೌಡ) ಅವರು ನಾರಾಯಣಸ್ವಾಮಿ ವಿರುದ್ಧ ಮಾತನಾಡಿದ್ದಾರೆ ಎನ್ನಲಾಗಿದೆ. ನಾನೊಬ್ಬ ಹಿರಿಯ ಶಾಸಕನಾಗಿ ಕ್ಷೇತ್ರದ ಜನರ ಪರವಾಗಿ ಮಾತನಾಡಿದಾಗ ಅಡ್ಡಿಪಡಿಸಿದ್ದಕ್ಕೆ ಬೇಸರಗೊಂಡು ಸಭೆಯಿಂದ ಹೊರಬಂದೆ ಎಂದು ಅವರು ಸ್ಪಷ್ಟಪಡಿಸಿದರು.