ಸಾರಾಂಶ
ದೇಶದಲ್ಲಿ ಹಿಂದುಳಿದ ವರ್ಗದವರು ಶೇ. 60ರಷ್ಟು ಜನಸಂಖ್ಯೆ ಹೊಂದಿದ್ದರೂ ಸರಿಯಾಗಿ ಮೀಸಲಾತಿ ಜಾರಿಯಾಗಿಲ್ಲ. ಇದಕ್ಕೆಲ್ಲ ಸಮಾಜವು ಸಂಘಟಿತವಾಗುವಲ್ಲಿ ತೋರಿದ ನಿರ್ಲಕ್ಷ್ಯ ಹಾಗೂ ಮುಖಂಡರು ಗಟ್ಟಿ ಧ್ವನಿ ಎತ್ತುವಲ್ಲಿ ವಿಫಲವಾಗಿರುವುದೇ ಪ್ರಮುಖ ಕಾರಣ.
ಹುಬ್ಬಳ್ಳಿ:
ದೇಶಕ್ಕೆ ಸ್ವಾತಂತ್ರ್ಯ ದೊರೆತು ಇಷ್ಟು ವರ್ಷವಾದರೂ ಇಂದಿಗೂ ಮೀಸಲಾತಿ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಎನ್.ಎಲ್. ನರೇಂದ್ರಬಾಬು ಆರೋಪಿಸಿದರು.ಅವರು ಇಲ್ಲಿನ ಕೇಶ್ವಾಪುರ ರಸ್ತೆಯ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕರ ಕಚೇರಿ ಎದುರಿನಲ್ಲಿ ಅಖಿಲ ಭಾರತ ಒಬಿಸಿ ರೈಲ್ವೆ ನೌಕರರ ಸಂಘದ (ಎಐಒಬಿಸಿಆರ್‌ಇಎ) ನವೀಕೃತ ವಲಯ ಕಚೇರಿ ಉದ್ಘಾಟನೆ ಹಾಗೂ ಬಿ.ಪಿ. ಮಂಡಲ 106ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ದೇಶದಲ್ಲಿ ಹಿಂದುಳಿದ ವರ್ಗದವರು ಶೇ. 60ರಷ್ಟು ಜನಸಂಖ್ಯೆ ಹೊಂದಿದ್ದರೂ ಸರಿಯಾಗಿ ಮೀಸಲಾತಿ ಜಾರಿಯಾಗಿಲ್ಲ. ಇದಕ್ಕೆಲ್ಲ ಸಮಾಜವು ಸಂಘಟಿತವಾಗುವಲ್ಲಿ ತೋರಿದ ನಿರ್ಲಕ್ಷ್ಯ ಹಾಗೂ ಮುಖಂಡರು ಗಟ್ಟಿ ಧ್ವನಿ ಎತ್ತುವಲ್ಲಿ ವಿಫಲವಾಗಿರುವುದೇ ಪ್ರಮುಖ ಕಾರಣವಾಗಿದೆ ಎಂದರು.ಕೌಶಲ್ಯ ಇರುವುದೇ ಹಿಂದುಳಿದ ವರ್ಗದವರಲ್ಲಿ. ಆದರೆ, ನಮ್ಮ ಭವಿಷ್ಯ ರೂಪಿಸುವ ನಾಯಕತ್ವದ ಕೊರತೆ ಇದೆ. ಸಮಾಜವು ಎಲ್ಲ ಕ್ಷೇತ್ರಗಳಲ್ಲಿ ಪ್ರವರ್ಧಮಾನಕ್ಕೆ ಬರಬೇಕು. ಸಮಾನತೆ, ಸಮಾನ ಅವಕಾಶ ಸಿಗಬೇಕು. ಹಿಂದುಳಿದವರೆಂದು ಕೈಕಟ್ಟಿ ಕುಳಿತರೆ ಆಗದು. ಸುಶಿಕ್ಷಿತರಾಗಿ ಸಂಘಟಿತರಾಗಬೇಕಿದೆ. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಬೇಕಿದೆ ಎಂದರು.
ಈ ವೇಳೆ ಎಐಒಬಿಸಿಆರ್‌ಇಎ ಪ್ರಧಾನ ಕಾರ್ಯದರ್ಶಿ ಗೋವರ್ಧನ ವೈ, ಹುಬ್ಬಳ್ಳಿ ವಿಭಾಗದ ಮುಖ್ಯ ಕಾರ್ಯಾಗಾರ ವ್ಯವಸ್ಥಾಪಕ ವಿಜಯ ಸಿಂಗ್ ಯಾದವ, ಅನಂತ ಗುರುಸ್ವಾಮಿ, ಜಿ.ಬಿ. ವೆಂಕಟರಾವ್, ಗೋಪಿನಾಥ, ರಾಜೇಶ ಸೇರಿದಂತೆ ಹಲವರಿದ್ದರು.