ಘಟಿಕೋತ್ಸವ ನೆಪದಲ್ಲಾದರೂ ಸುಧಾರಿಸುವುದೇ ವಿವಿ ಅವ್ಯವಸ್ಥೆ

| Published : Nov 29 2024, 01:01 AM IST

ಸಾರಾಂಶ

ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳಿಲ್ಲ. ಸ್ವಚ್ಛತೆಯಂತೂ ಮರೀಚಿಕೆ. ಘಟಿಕೋತ್ಸವ ನೆಪದಲ್ಲಾದರೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕೊಳಕು ತೊಳೆದುಕೊಳ್ಳುವುದೇ ಎಂಬುದು ಸ್ಥಳೀಯರ ಅಭಿಲಾಷೆಯಾಗಿದೆ.

ಬಸವರಾಜ ಹಿರೇಮಠ

ಶಿಗ್ಗಾಂವಿ: ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳಿಲ್ಲ. ಸ್ವಚ್ಛತೆಯಂತೂ ಮರೀಚಿಕೆ. ಘಟಿಕೋತ್ಸವ ನೆಪದಲ್ಲಾದರೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕೊಳಕು ತೊಳೆದುಕೊಳ್ಳುವುದೇ ಎಂಬುದು ಸ್ಥಳೀಯರ ಅಭಿಲಾಷೆಯಾಗಿದೆ.

ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಈಗ ೮ ಮತ್ತು ೯ನೇ ಘಟಿಕೋತ್ಸವದ ಆಚರಣೆಯ ತಯಾರಿಯಲ್ಲಿದೆ. ಕಾರ್ಯಕ್ರಮ ಡಿಸೆಂಬರ್ ೨ರಂದೇ ನಿಗದಿಯಾಗಿದೆ. ಅಂದು ವಿವಿ ಅಂಗಳಕ್ಕೆ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ರಾಜ್ಯಪಾಲರಾದ ಥಾವರ್ ಚಂದ ಗೆಹಲೋತ್‌, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಬಂದಿಳಿಯಲಿದ್ದಾರೆ. ಆದರೆ, ಇಲ್ಲಿನ ಅವ್ಯವಸ್ಥೆ ಆ ನೆವಕ್ಕಾದರೂ ಸರಿಯಾಗಬಹುದಾ ಎಂಬ ನಿರೀಕ್ಷೆಗಳು ಹೆಚ್ಚಾಗಿವೆ.

ರಂಗಮಂದಿರ ಬಳಕೆ ಇಲ್ಲ

ವಿಶ್ವವಿದ್ಯಾಲಯದ ರೂಪರೇಷೆಗಳಲ್ಲಿ ಸಾಕಷ್ಟು ಹಣ ವ್ಯಯ ಮಾಡಿ ವಿಶಾಲವಾದ ಬಯಲು ರಂಗಮಂದಿರ ನಿರ್ಮಾಣ ಮಾಡಿದ್ದಾರೆ. ಆದರೆ, ಅದರ ಬಳಕೆ ಮಾತ್ರ ಶೂನ್ಯ. ಶೈಕ್ಷಣಿಕ ಭವನ ಹಾಗೂ ಆಡಳಿತ ಭವನದಲ್ಲಿರುವ ಶೌಚಾಲಯಗಳನ್ನಂತೂ ಕಣ್ಣು ತೆರೆದು ನೋಡುವ ಹಾಗಿಲ್ಲ. ಗಬ್ಬು ವಾಸನೆ, ಒಡೆದ ಪೈಪ್‌, ಕೈ ತೊಳೆಯುವ ಸಿಂಕ್‌ನಲ್ಲಿ ಗಲೀಜು, ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯಿಂದ ಕೂಡಿದೆ. ಸಭಾಭವನ ಬಳಕೆ ಇಲ್ಲ

ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣದಲ್ಲಿ ಖರ್ಚು ಮಾಡಿ ನಿರ್ಮಾಣವಾದ ಬೃಹತ್ ಗಾತ್ರದ ವಿಸ್ತೀರ್ಣವುಳ್ಳ ಸಭಾಭವನ ಕಾಮಗಾರಿ ಪೂರ್ಣಗೊಂಡು ಬಳಕೆ ಇಲ್ಲದೆ ಬಿಕೋ ಎನ್ನುತ್ತಿದೆ. ಹೊರಗಿನಿಂದ ನೋಡುಗರಿಗೆ ಸುಂದರವಾಗಿ ಕಾಣುವ ಕಟ್ಟಡ ಒಳಗಿನಿಂದ ಪಾಳು ಬಿದ್ದ ಗೋದಾಮು ಆಗಿದೆ. ಬಳಕೆ ಭಾಗ್ಯ ಕೂಡಿ ಬರಲಿ, ಇದು ಪ್ರತಿಭೆ ಹೊರ ಹಾಕುವ ವೇದಿಕೆಯಾಗಲಿ ಎನ್ನುವುದು ವಿದ್ಯಾರ್ಥಿಗಳ ಆಶಯವಾಗಲಿದೆ.

ಸುಗಮವಾದ ರಸ್ತೆ ಇಲ್ಲ

ಇನ್ನೇನು ಘಟಿಕೋತ್ಸವ ಕೇವಲ ಮೂರು ದಿನಗಳ ಬಾಕಿ ಉಳಿದಿದೆ. ರಾಜ್ಯಪಾಲರು ಬಂದರೆ ಸುಗಮವಾಗಿ ಸಾಗಿ ಬರಲು ವಿವಿ ಪ್ರವೇಶ ದ್ವಾರದಲ್ಲಿ ಸರಿಯಾದ ರೀತಿಯ ರಸ್ತೆ ಇಲ್ಲ. ಕಚ್ಚಾ ರಸ್ತೆಯಲ್ಲಿಯೇ ಸಾಗಿ ಬರುವ ಸ್ಥಿತಿ ಇದೆ.

ತುರಾತುರಿಯಲ್ಲಿ ಕಮಾನ್ ನಿರ್ಮಾಣ

ಘಟಿಕೋತ್ಸವದ ಬೆನ್ನಲ್ಲೇ ಅಧಿಕಾರಿಗಳು ವಿವಿ ಮುಂಭಾಗದಲ್ಲಿ ಪ್ರವೇಶ ದ್ವಾರ ನಿರ್ಮಾಣ ಮಾಡಿಸುತ್ತಿರುವುದು ಹಾಗೂ ಕಮಾನದ ಎರಡು ಕಡೆಯ ಕಟ್ಟಡ ಕಾಮಗಾರಿ ಆರಂಭಿಸಿದ್ದು, ಸಿಮೆಂಟ್ ಕಾಂಕ್ರಿಟ್ ಕ್ಯೂರಿಂಗ್ ಆಗಲು ಕನಿಷ್ಠ ೨೧ ದಿನಗಳಾದರೂ ಸಮಯ ಬೇಕಾಗುತ್ತದೆ. ನಿಯಮನುಸಾರ ಟೆಂಡರ್ ಕರೆದು ಕಾಮಗಾರಿ ನೀಡದೆ ಕಾರ್ಯಕ್ರಮಕ್ಕೆ ೧೫ ದಿನಗಳ ಮೊದಲು ಕಾಮಗಾರಿ ಆರಂಭಿಸಿ ತರಾತುರಿ ಮುಗಿಸುತ್ತಿರುವುದು ದೂರದೃಷ್ಟಿ ಇಲ್ಲದ ಕಳಪೆ ಕಾಮಗಾರಿ ಎಂಬುದು ಇಲ್ಲಿ ಗಮನಾರ್ಹ ಸಂಗತಿ.

ಕುಡಿಯುವ ನೀರು ಪೂರೈಕೆ ಇಲ್ಲ

ಸಿಬ್ಬಂದಿ ಬಳಕೆಗೆ ಸಿಬ್ಬಂದಿ ವಸತಿಗೃಹ ನೀಡಲಾಗಿದೆ. ಆದರೆ, ಅಲ್ಲಿ ವಾಸ ಮಾಡುವ ಸಿಬ್ಬಂದಿ ಕುಡಿಯುವ ನೀರು ತರಲು ಬೇರೆಡೆ ಹೋಗಬೇಕಿದೆ. ಕುಡಿಯಲು ನೀರು ಅಗತ್ಯ ಸೌಕರ್ಯ ಸಿಬ್ಬಂದಿಗೆ ನಿರಂತರವಾಗಿ ಕುಡಿಯುವ ನೀರು ದೊರೆಯುವಂತಾಗಲಿ. ಕೆಲಸದ ಮಧ್ಯ ನೀರಿಗಾಗಿ ಹಾತೊರೆಯುವ ಬವಣೆ ಬಗೆ ಹರಿಯಲಿ.

ವಿವಿ ವಿದ್ಯಾರ್ಥಿಗಳಿಗೆ ಕಚೇರಿ ಸಿಬ್ಬಂದಿಗೆ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದರೆ, ಅವ್ಯವಸ್ಥೆಯಿಂದ ಕೂಡಿದ್ದು ಹೆಸರಿಗಷ್ಟೆ ಫಿಲ್ಟರ್‌ ಆದರೆ, ಅದರಲ್ಲಿ ನೀರು ಬರುವುದು ಮಾತ್ರ ವಿರಳ.

ಶೈಕ್ಷಣಿಕ ಕಟ್ಟಡ, ಆಡಳಿತ ಕಟ್ಟಡ ಸೇರಿದಂತೆ ವಿಶ್ವವಿದ್ಯಾಲಯದಲ್ಲಿ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಇರುವ ತಾಲೂಕಿನ ವಿವಿ ವಿಶ್ವಕ್ಕೆ ಮಾದರಿಯಾಗಬೇಕೇ ವಿನಃ ಕಳಪೆ ಎಂಬ ಕೆಟ್ಟ ಹೆಸರು ಜಿಲ್ಲೆಗೆ, ತಾಲೂಕಿಗೆ, ಈ ಭಾಗದ ಮಹಾನ್ ಮೇದಾವಿ, ಸಂತ ಶರಣರ ಹೆಸರಿಗೆ ತೊಡಕು ಹಾಕಿಕೊಳ್ಳದಿರಲಿ. ಈ ಕ್ಷೇತ್ರ ಮತ್ತು ವಿವಿ ಹೆಸರು ವಿರಾಜಮಾನವಾಗಲಿ.ಸ್ವಚ್ಛತೆಗೆ ಆದ್ಯತೆ

ಮುಖ್ಯ ದ್ವಾರದಿಂದ ವಿವಿಗೆ ಬರುವ ರಸ್ತೆಯನ್ನು ಮುಂಬರುವ ದಿನಗಳಲ್ಲಿ ಸರ್ಕಾರದ ಎನ್‌ಆರ್‌ಜಿಎ ಯೋಜನೆಯಲ್ಲಿ ಸುಸಜ್ಜಿತ ರೀತಿಯಲ್ಲಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಮುಂದಾಗುತ್ತೇವೆ. ವಿಶ್ವವಿದ್ಯಾಲಯದ ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ.

ಪ್ರೊ ಟಿ.ಎಂ. ಭಾಸ್ಕರ್ ಕುಲಪತಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ.