ನರಸಿಂಹರಾಜಪುರನಮ್ಮ ದೇಶಕ್ಕೆ ದೊಡ್ಡ ಇತಿಹಾಸವಿದ್ದು ವೈರಿಗಳು ನಮ್ಮ ದೇಶದ ಮೇಲೆ ಕತ್ತಿ ಹಿಡಿದು ಯುದ್ದಕ್ಕೆ ಬಂದಾಗಲೂ ನಮ್ಮ ಜ್ಞಾನ, ಸಂಸ್ಕಾರ, ವೇದಾಂತ, ಭಗವದ್ಗೀತೆಯೇ ನಮ್ಮನ್ನು ಕಾಪಾಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀ ಆದಿತ್ಯ ಹರಿಹರಪುರ ತಿಳಿಸಿದರು.

- ಬಿ.ಎಚ್.ಕೈಮರದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ನಮ್ಮ ದೇಶಕ್ಕೆ ದೊಡ್ಡ ಇತಿಹಾಸವಿದ್ದು ವೈರಿಗಳು ನಮ್ಮ ದೇಶದ ಮೇಲೆ ಕತ್ತಿ ಹಿಡಿದು ಯುದ್ದಕ್ಕೆ ಬಂದಾಗಲೂ ನಮ್ಮ ಜ್ಞಾನ, ಸಂಸ್ಕಾರ, ವೇದಾಂತ, ಭಗವದ್ಗೀತೆಯೇ ನಮ್ಮನ್ನು ಕಾಪಾಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀ ಆದಿತ್ಯ ಹರಿಹರಪುರ ತಿಳಿಸಿದರು.

ಶನಿವಾರ ಬಿ.ಎಚ್.ಕೈಮರದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ತಾಲೂಕು ಹಿಂದೂ ಸಮಾಜೋತ್ಸವ ಸಮಿತಿ ಆಶ್ರಯದಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ರಾಯಾಯಣ, ಮಹಾಭಾರತ ಕಾಲದಿಂದಲೂ ಹಿಂದೂ ಸ್ಥಾನಕ್ಕೆ ಯಾರಿಂದಲೂ ಹಾನಿ ಮಾಡಲು ಸಾಧ್ಯವಾಗಿಲ್ಲ. ಬೇರೆ ದೇಶದಿಂದ ಬಂದವರಿಗೂ ಭಾರತ ದೇಶ ಆಶ್ರಯ ನೀಡಿದೆ. ಇಲ್ಲಿ ವಾಸ ಮಾಡುವ ಎಲ್ಲರೂ ಹಿಂದೂಗಳೇ ಆಗಿದ್ದಾರೆ. ಭಾರತ ದೇಶದ ಉದ್ದಗಲಕ್ಕೂ ನಮ್ಮ ಸಂಸ್ಕೃತಿ ಒಂದೇ ಆಗಿ ರುವುದರಿಂದ ನಮ್ಮನ್ನು ಒಗ್ಗೂಡಿಸಿದೆ. ದೇಶದ ಯಾವ ಭಾಗಕ್ಕೆ ಹೋದರೂ ರಾಮ, ಕೃಷ್ಣ ಸಿಗುತ್ತಾರೆ. ಏಕ ಸಂಸ್ಕೃತಿಯೇ ನಮಗೆ ಶಕ್ತಿ ನೀಡಿದೆ ಎಂದರು.

1925 ರಲ್ಲಿ ಭಾರತ ದೇಶವನ್ನು ಒಗ್ಗೂಡಿಸಬೇಕು ಎಂದು ಡಾ. ಕೇಶವ ಬಲಿರಾಂ ಹೆಡಗೆ ವಾರ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಹುಟ್ಟು ಹಾಕಿದ್ದರು. ಈಗ ಬಹುತೇಕ ಭಾರತದ ಎಲ್ಲಾ ಹಳ್ಳಿಗಳಲ್ಲೂ ಆರ್.ಎಸ್.ಎಸ್. ವ್ಯಾಪಿಸಿದೆ. ಸೆಪ್ಟಂಬರ್ ನಲ್ಲಿ ಪ್ರತಿ ಗ್ರಾಮದಲ್ಲೂ ಸಂಘದ ಶಾಖೆ ತೆರೆಯಲು ಚಿಂತನೆ ನಡೆಸಿದ್ದೇವೆ. ಆರ್.ಎಸ್.ಎಸ್.ಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ವರ್ಷ ರಾಜ್ಯದಲ್ಲಿ 3 ಸಾವಿರ ಹಿಂದೂ ಸಮಾವೇಶ ನಡೆಸಿದ್ದೇವೆ ಎಂದರು.

ತಾಲೂಕು ದೇವಸ್ಥಾನ ಸಂವರ್ಧನ ಸಮಿತಿ ಅಧ್ಯಕ್ಷ ವೇ.ಬ್ರ.ನೇರಳೆ ಪ್ರಕಾಶ್ ಭಟ್ ಧಾರ್ಮಿಕ ಉಪನ್ಯಾಸ ನೀಡಿ, ಪ್ರತಿಯೊಬ್ಬರೂ ಧಾರ್ಮಿಕ ವಿಚಾರ ತಿಳಿದಿರಬೇಕು. ದೇವಸ್ಥಾನಕ್ಕೆ ಹೋಗಿ ಶ್ರದ್ಧೆಯಿಂದ ದೇವರಲ್ಲಿ ಪ್ರಾರ್ಥಿಸಬೇಕು. ಶ್ರದ್ಧೆಯಿಂದ ಭಕ್ತಿ, ಭಕ್ತಿಯಿಂದ ಶಕ್ತಿ ಬರಲಿದೆ. ದೇವಾಲಯ ಜೀವನಾಡಿಯಾಗಿದೆ. ದೇಶದ ಎಲ್ಲಾ ಹಿಂದೂಗಳು ಒಟ್ಟಾಗಿ ದ್ದರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಾಧ್ಯವಾಯಿತು. ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು ಎಂದು ಕರೆ ನೀಡಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಅಧ್ಯಕ್ಷ ಎ.ಎನ್.ಕೃಷ್ಣಯ್ಯ ಮಾತನಾಡಿ, ತಾಲೂಕಿನ 9 ಸ್ಥಳದಲ್ಲಿ ಹಿಂದೂ ಸಮಾಜೋತ್ಸವ ನಡೆಸುತ್ತಿದ್ದೇವೆ. ಭಾನುವಾರ ಸಂಜೆ ಪಟ್ಟಣದ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ತಾಲೂಕಿನ ಕೊನೆ ಹಿಂದೂ ಸಮಾಜೋತ್ಸವ ನಡೆಯಲಿದೆ. ಅಖಂಡ ದೀಪೋತ್ಸವ ಹಾಗೂ ಬೃಹತ್ ಶೋಭಾ ಯಾತ್ರೆ ನಡೆಯಲಿದೆ ಎಂದರು.

ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಉಪಾಧ್ಯಕ್ಷೆ ಸುಜಾತಾ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ಕು.ದ್ರವ್ಯ, ಕು.ಅನು ಹಾಗೂ ಕು.ವರ್ಷಿಣಿ ಅವರನ್ನು ಗೌರವಿಸಲಾಯಿತು.

ಇದಕ್ಕೂ ಮೊದಲು ಬಿ.ಎಚ್.ಕೈಮರದ ಗಣಪತಿ ದೇವಸ್ಥಾನದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ಶೋಭಾ ಯಾತ್ರೆ ನಡೆಯಿತು. ಅನಿತ ಸ್ವಾಗತಿಸಿದರು. ಮಾಂತೇಜ್ ಕಾರ್ಯಕ್ರಮ ನಿರೂಪಿಸಿದರು.ಕಿರಣ್ ವಂದಿಸಿದರು.