ಸಾರಾಂಶ
ಡಾ. ಅಂಬೇಡ್ಕರ್‌ರು ಬರೆದಿರುವ ಪ್ರತಿಯೊಂದು ಪುಸ್ತಕಗಳು ಅಮೂಲ್ಯ ಗ್ರಂಥಗಳಾಗಿವೆ. ದೇಶದ ಪ್ರಗತಿ, ಸಮಾಜದ ಸುಧಾರಣೆಗಾಗಿ ಅವರ ಬರವಣಿಗೆ ಇಂದಿಗೂ ಪ್ರಸ್ತುತವಾಗಿವೆ
ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆಯ ವಿವಿಧ ಸಂಘಟನೆಗಳಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ 134 ನೇ ಜಯಂತ್ಯುತ್ಸವವನ್ನು ಶುಕ್ರವಾರ ಇಲ್ಲಿನ ಸಿಬಿಟಿ ನಿಲ್ದಾಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ. ಎಂ.,ಡಾ. ಅಂಬೇಡ್ಕರ್‌ರು ಬರೆದಿರುವ ಪ್ರತಿಯೊಂದು ಪುಸ್ತಕಗಳು ಅಮೂಲ್ಯ ಗ್ರಂಥಗಳಾಗಿವೆ. ದೇಶದ ಪ್ರಗತಿ, ಸಮಾಜದ ಸುಧಾರಣೆಗಾಗಿ ಅವರ ಬರವಣಿಗೆ ಇಂದಿಗೂ ಪ್ರಸ್ತುತವಾಗಿವೆ. ಇಂತಹ ಗ್ರಂಥಗಳನ್ನು ಅಧ್ಯಯನ ಮಾಡಿ ವಾಸ್ತವ ಅರಿತುಕೊಳ್ಳಬೇಕು. ದೇಶಕ್ಕಾಗಿ, ದೇಶದ ಜನರಿಗಾಗಿ ಏನಾದರೂ ಕೊಡುಗೆ ನೀಡಬೇಕು ಎನ್ನುವ ಕಾರಣಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡು ಮಹಾನ್ ವ್ಯಕ್ತಿಯಾದರು. ಅವರ ಅಧ್ಯಯನ ಹಾಗೂ ಸಾಧನೆ ಪ್ರತಿಯೊಬ್ಬರರಿಗೂ ಪ್ರೇರಣೆಯಾಗಿದೆ ಎಂದರು.ಅಂಬೇಡ್ಕರ್‌ರು ನೀಡಿದ ಕಾರ್ಮಿಕ ಕಾಯ್ದೆಗಳನ್ನು ಇಂದಿಗೂ ಕಾರ್ಮಿಕರ ಅಭ್ಯುದಯಕ್ಕೆ ತಳಹದಿಯಾಗಿದೆ ಎಂದರು.
ಕವಿವಿ ಹಿರಿಯ ಪ್ರಾಧ್ಯಾಪಕ ಡಾ. ಎಸ್.ವೈ. ಮುಗಳಿ ಉಪನ್ಯಾಸ ನೀಡಿ, ಚಾತುರವರ್ಣ ವ್ಯವಸ್ಥೆಯನ್ನು ಅಂಬೇಡ್ಕರ್ ಬಲವಾಗಿ ವಿರೋಧಿಸಿದ್ದರು. ಸ್ವಾತಂತ್ರ್ಯ ಹಾಗೂ ಸಮಾನತೆಗಾಗಿ ಹೋರಾಡಿದವರು. ಆದರೆ ಅಂಬೇಡ್ಕರ್‌ರು ದಲಿತರಿಗಾಗಿಯೇ ಹೋರಾಟ ಮಾಡಿದರು, ಅವರಿಗಾಗಿಯೇ ಮೀಸಲಾತಿ ನೀಡಿದರು ಎಂದು ತಪ್ಪಾಗಿ ಬಿಂಬಿಸುತ್ತಿರುವುದು ದೊಡ್ಡ ದುರಂತವಾಗಿದೆ. ಮಹಿಳೆಯರಿಗೆ ಯಾವುದೇ ಸ್ವಾತಂತ್ರ್ಯ, ಹಕ್ಕುಗಳು ಹಾಗೂ ಸ್ಥಾನಮಾನಗಳು ಇಲ್ಲದ ಕಾರಣ ಮನಸ್ಮೃತಿಯಲ್ಲಿ ದಹಿಸಿದರು.ಪರಿಶಿಷ್ಟರು ಮಾತ್ರ ಶೂದ್ರರು ಎಂದು ಬಿಂಬಿಸಿ ಅವರಿಗಾಗಿಯೇ ಮಾತ್ರ ಅಂಬೇಡ್ಕರ್ ಹೋರಾಟ ಮಾಡಿದ್ದಾರೆ ಎಂದು ಸಾಕಷ್ಟು ಜನರ ನಂಬಿದ್ದಾರೆ. ಲಿಂಗಾಯತರು, ಒಕ್ಕಲಿಗರು, ಕುರುಬರು ಸೇರಿದಂತೆ ಕೆಲ ಜಾತಿಯ ಎಲ್ಲರೂ ಶೂದ್ರರು. ಇವರೆಲ್ಲರ ಪರವಾಗಿ ಅಂಬೇಡ್ಕರ್ ಹೋರಾಟ ಮಾಡಿದ್ದಾರೆ. ಹಲವು ಮೀಸಲಾತಿ ಕಲ್ಪಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಡಾ. ಎಚ್.ರಾಮನಗೌಡರ ಮಾತನಾಡಿ, ಡಾ.ಅಂಬೇಡ್ಕರ್ ತಾವು ಎದುರಿಸಿದ ಸಮಸ್ಯೆಗಳನ್ನೇ ಸಾಧನೆಯ ಮೆಟ್ಟಿಲುಗಳನ್ನಾಗಿಸಿಕೊಂಡು ಸಾಮಾನ್ಯ ವ್ಯಕ್ತಿಯೊಬ್ಬ ಅಸಾಮಾನ್ಯ ಶಕ್ತಿಯಾಗಿ ಹೇಗೆ ಬೆಳೆಯಬಹುದು ಎಂಬುದಕ್ಕೆ ಅತ್ಯುತ್ತಮ ನಿದರ್ಶನ. ಇಂದು ನಾವೆಲ್ಲರೂ ಗೌರವಯುತ ಬದುಕನ್ನು ಕಟ್ಟಿಕೊಳ್ಳಲು ಜಗತ್ತಿನಲ್ಲಿಯೇ ಶ್ರೇಷ್ಠವಾದ ಸಂವಿಧಾನ ನೀಡಿ ದೇವಮಾನವರಾದರು ಎಂದು ಹೇಳಿದರು.ಹಿರಿಯ ಅಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಪಿ.ವೈ. ನಾಯಕ, ವಿವಿಧ ಸಂಘಟನೆಗಳ ಪ್ರಮುಖರಾದ ಗಂಗಾಧರ ಕಮಲದಿನ್ನಿ, ರಂಗಣ್ಣ ತಳವಾರ, ಡಿ.ಪ್ರಸಾದ, ಆರ್.ಎಫ್. ಕವಳಿಕಾಯಿ, ಅಧಿಕಾರಿಗಳಾದ ಎಂ.ಬಿ.ಕಪಲಿ, ಆರ್.ಎಂ.ರಾಜೇಂದ್ರ, ಎಸ್.ಎ. ಬೀಳಗಿ ಸೇರಿದಂತೆ ಇನ್ನಿತರರಿದ್ದರು.