ಸಾರಾಂಶ
ಶಿರ್ವ: ಪದವಿ ಪಡೆದು ಮಾನವೀಯತೆ ಕಳೆದುಕೊಂಡಾಗ ಸಂಘರ್ಷಕ್ಕೆ ಕಾರಣವಾಗುತ್ತದೆ. ಆದ್ದರಿಂದ ನಮ್ಮ ಮಕ್ಕಳಿಗೆ ಪರಂಪರೆಯ ಜೊತೆಗೆ ಆಧ್ಯಾತ್ಮದ ಒಲವು ಮೂಡಿಸಬೇಕು ಎಂದು ಚಿಂತಕ ಬಾರ್ಕೂರು ದಾಮೋದರ ಶರ್ಮಾ ಹೇಳಿದ್ದಾರೆ.
ಸೋಮವಾರ ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ವತಿಯಿಂದ ೭ ದಿನಗಳ ಪರ್ಯಂತ ಪೇಟೆಯಲ್ಲಿ ಜರುಗುತ್ತಿರುವ ಸಾರ್ವಜನಿಕ ಗಣೇಶೋತ್ಸವ ಸಮಾರಂಭದಲ್ಲಿ ಹಿರಿಯ ಸಾಧಕರನ್ನು, ಪ್ರತಿಭಾ ಸಂಪನ್ನರನ್ನು ಗೌರವಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.ಭಾರತ ದೇವಭೂಮಿ, ಧರ್ಮಭೂಮಿ, ಕರ್ಮಭೂಮಿ ಹಾಗೂ ಪುಣ್ಯಭೂಮಿ. ಇಲ್ಲಿರುವ ಪ್ರತೀಯೊಂದು ಶಕ್ತಿಸನ್ನಿಧಾನಗಳೂ ಪವಿತ್ರ, ಧರ್ಮದೈವಗಳ, ದೇವಸ್ಥಾನಗಳ ಭೂಮಿಯಲ್ಲಿ ನಾವಿದ್ದೇವೆ. ಮಕ್ಕಳಲ್ಲಿ ಧರ್ಮಕ್ಷೇತ್ರಗಳ ಬಗ್ಗೆ ಶ್ರದ್ಧೆ ಬೆಳೆಸಿ ಎಂದರು.ಮುಖ್ಯ ಅತಿಥಿಗಳಾಗಿ ಬಂಟಕಲ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಟೋನಿ ಮೋನಿಸ್ ಶುಭ ಹಾರೈಸಿದರು. ಖ್ಯಾತ ಶನಿಕಥಾ ಭಾಗವತ ಶ್ಯಾಮರಾಯ ರಾವ್, ಪ್ರಗತಿಪರ ಕೃಷಿಕ ಸುಂದರ ಪೂಜಾರಿ, ವಿಠಲ ಶೆಟ್ಟಿ ಹೇರೂರು, ಹಿರಿಯ ವ್ಯಾಪಾರಿ ವಿಶ್ವನಾಥ ಪಾಟ್ಕರ್ ಬಂಟಕಲ್ಲು, ನಿವೃತ್ತ ಶಿಕ್ಷಕ ರಿಚ್ಚಾರ್ಡ್ ಸಲ್ಡಾನ್ಹಾ ಇವರನ್ನು ಸನ್ಮಾನಿಸಲಾಯಿತು. ಅಶೋಕ್ ಅರಸೀಕಟ್ಟೆ, ಗಣಪತಿ ಆಚಾರ್ಯ ಹೇರೂರು ವೇದಿಕೆಯಲ್ಲಿದ್ದರು.ಕಳೆದ ೨೧ ವರ್ಷಗಳಿಂದ ಶ್ರೀವಿನಾಯಕನ ವಿಗ್ರಹದ ಸಂಪೂರ್ಣ ವೆಚ್ಚ ಹಾಗೂ ೨೧ನೇ ವರ್ಷದಲ್ಲಿ ಒಂದು ಲಕ್ಷ ರು.ಗೂ ಅಧಿಕ ಮೌಲ್ಯದ ಬೆಳ್ಳಿಯ ಪ್ರಭಾವಳಿ ನೀಡಿದ ಬಂಟಕಲ್ಲು ಕೃಷ್ಣಛಾಯಾದ ಪ್ರಫುಲ್ಲಾ ಜಯ ಶೆಟ್ಟಿ, ಹಾಗೂ ಪ್ರಭಾವಳಿ ಶಿಲ್ಪಿ ಶ್ರೀಕಾಂತ್ ಆಚಾರ್ಯ ಬಾರ್ಕೂರು ಇವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಂಟಕಲ್ಲು ಮಾಧವ ಕಾಮತ್ ಕಳೆದ ೨೧ ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂಘದ ಸದಸ್ಯರನ್ನು ಸ್ಮರಣಿಕೆ ನೀಡಿ ಕೃತಜ್ಞತೆ ಸಲ್ಲಿಸಿದರು. ಗೌರವ ಅಧ್ಯಕ್ಷ ಶಂಕರ ನಾಯಕ್ ಬಂಟಕಲ್ಲು ಸ್ವಾಗತಿಸಿದರು. ಆಲ್ವಿನ್ ಸಲ್ಡಾನ್ಹಾ ಪರಿಚಯಿಸಿದರು. ಹೇರೂರು ಮಾಧವ ಆಚಾರ್ಯ ನಿರೂಪಿಸಿದರು. ಕಾರ್ಯದರ್ಶಿ ದಿನೇಶ್ ದೇವಾಡಿಗ ವಂದಿಸಿದರು.