ಸಾರಾಂಶ
ಬಳ್ಳಾರಿ: ಬಡವರು ಸ್ವಂತ ಸೂರು ಹೊಂದಬೇಕು ಎನ್ನುವ ಆಶಯದಿಂದಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿಯಲ್ಲಿ ನಡೆದ ಕ್ಯಾಬಿನೆಟ್‌ನಲ್ಲಿ ವಸತಿ ಇಲಾಖೆಗೆ ₹500 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅಂತೆಯೇ ಫೆಬ್ರವರಿಯಲ್ಲಿ 36,789 ಮನೆಗಳನ್ನು ನೀಡಿದ್ದೇವೆ. ಮುಂದಿನ ತಿಂಗಳಲ್ಲಿ 38,200 ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಇಲ್ಲಿನ ಡಾ.ರಾಜ್ ಕುಮಾರ್ ರಸ್ತೆಯಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ಜರುಗಿದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಸ್ಪಂದನಾ ಸಭೆಯಲ್ಲಿ ಬಹುತೇಕ ಮನೆ, ನಿವೇಶನ ಬೇಡಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹೆಚ್ಚು ಅರ್ಜಿಗಳು ಸ್ವೀಕಾರವಾಗುತ್ತಿವೆ. ರಾಜ್ಯದ ಪ್ರತಿಯೊಂದು ತಾಲೂಕಿನ ವರ್ಷಕ್ಕೆ 1ಸಾವಿರ ಮನೆ ನಿರ್ಮಿಸಿ ಹಂಚಿಕೆ ಮಾಡುವ ಚಿಂತನೆ ನಡೆದಿದೆ ಎಂದರು.
ರೈತರು ಭಯಪಡಬೇಡಿ: ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ಕಳೆದ ವಾರ ತುಂಡಾದ ಹಿನ್ನೆಲೆ ಕಳೆದ 5 ದಿನಗಳಿಂದ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಶುಕ್ರವಾರ ಮೊದಲ ಹಂತದ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಉಳಿದ ನಾಲ್ಕು ಹಂತದ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯನಡೆಯುತ್ತಿದೆ. ರೈತರು ಆತಂಕ ಪಡಬಾರದು. ರೈತರ ಹಿತ ಕಾಯುವ ದಿಸೆಯಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಇದೇ ವೇಳೆ ಬಿಜೆಪಿ ನಾಯಕರ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವ ಜಮೀರ್ ಅಹ್ಮದ್, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಮಟ್ಟದಲ್ಲಿ ಸ್ಥಾನ ಗಳಿಸದ್ದನ್ನು ಕಂಡು ಹಲವರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಹೇಳುತ್ತಿದ್ದರು. ಆದರೆ, ರಾಜ್ಯದ ಬಡಜನರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿತಂದಿದ್ದು, ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳದೇ ಜನ ಸಾಮಾನ್ಯರ ಸುಸ್ಥಿರ ಜೀವನ ಸುಧಾರಣೆ ಮಾಡುವ ಉದ್ದೇಶದಿಂದ ಈ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು.
ಜನಸ್ಪಂದನಾ ಸಭೆಯಲ್ಲಿ ಅತಿಥಿ ಉಪನ್ಯಾಸಕರ ನೇಮಕ, ಕಟ್ಟಡ ದುರಸ್ತಿ, ವಸತಿ ನಿರ್ಮಾಣ, ಕುಡಿವ ನೀರು, ರಸ್ತೆ, ವಿದ್ಯುತ್ ಹಾಗೂ ವಿವಿಧ ಇಲಾಖೆಗಳಿಗೆ ಸಂಬಮಂಧಿಸಿದಂತೆ ಒಟ್ಟು 232 ಅರ್ಜಿಗಳು ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದವು. ಕೆಲವು ಅರ್ಜಿಗಳನ್ನು ಸಚಿವರು, ಜಿಲ್ಲಾಧಿಕಾರಿ ಸ್ಥಳದಲ್ಲಿಯೇ ಪರಿಹರಿಸಿದರು. ಉಳಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡಲೇ ಬಗೆಹರಿಸುವಂತೆ ನಿರ್ದೇಶನ ನೀಡಿದರು.
ಬಳಿಕ ಸಚಿವರು ಅಂಗವಿಕಲರ ಬಳಿಗೆ ತೆರಳಿ ಅಹವಾಲು ಸ್ವೀಕರಿಸಿ, ಅವರ ಜೀವನ ನಿರ್ವಹಣೆಗಾಗಿ ವೈಯಕ್ತಿಕ ಧನಸಹಾಯ ನೀಡಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿಸ್ವ ಸಹಾಯ ಸಂಘದ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ಚೆಕ್ ವಿತರಣೆ ಮಾಡಿದರು. ಬಳಿಕ ಸಮಾಜ ಕಲ್ಯಾಣ ಇಲಾಖೆಯ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ 2023-24 ಸಾಲಿನ ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರದ ವಾಹನಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ಶಾಸಕರಾದ ಜೆ.ಎನ್.ಗಣೇಶ್, ನಾರಾ ಭರತ್ ರೆಡ್ಡಿ, ಡಾ.ಬಾಬು ಜಗಜೀವನ್ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ, ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಎಡಿಸಿ ಮೊಹಮ್ಮದ್ ಝುಬೇರ್, ಡಿಎಂಎಫ್ ವಿಶೇಷಾಧಿಕಾರಿ ಮಂಜುನಾಥ್, ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ.ಸುಕುಂ, ಹುಮಾಯುನ್ ಖಾನ್, ಕಾಂಗ್ರೆಸ್ ನಗರ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಇತರರಿದ್ದರು.
ಜಿಲ್ಲಾಡಳಿತದಿಂದ ಏರ್ಪಡಿಸಿದ ಜಿಲ್ಲಾಮಟ್ಟದ ಜನ ಸ್ಪಂದನಾ ಸಭೆಯ ಉದ್ಘಾಟನೆಯ ಕಾರ್ಯಕ್ರಮದಲ್ಲಿಸಚಿವರು, ಶಾಸಕರೊಂದಿಗೆ ಕಾಂಗ್ರೆಸ್‌ನ ಹಲವು ಮುಖಂಡರು ವೇದಿಕೆ ಹಂಚಿಕೊಂಡಿದ್ದು ನಾನಾ ಚರ್ಚೆಗೆ ಗ್ರಾಸವಾಗಿತ್ತು. ವೇದಿಕೆ ಮೇಲಿದ್ದ ಶಾಸಕರು, ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಪಕ್ಷದ ಮುಖಂಡರನ್ನು ವೇದಿಕೆಗೆ ಕರೆಯುವ ದೃಶ್ಯ ಸಾಮಾನ್ಯವಾಗಿತ್ತು.
ಕೆಡಿಪಿ ಸಭೆ ಮುಂದೂಡಿಕೆ:
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಇಲ್ಲಿನ ಜಿಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆ ಮುಂದೂಡಲಾಯಿತು.