ಪ್ರತಿ ಬಾರಿ ಇವರ ಸ್ಪರ್ಧೆ ಪಕ್ಕಾ, 16 ವರುಷಗಳ ಲೆಕ್ಕ!

| Published : Apr 24 2024, 02:21 AM IST

ಸಾರಾಂಶ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 9 ಅಭ್ಯರ್ಥಿಗಳು ಇದ್ದಾರೆ. ಅವರಲ್ಲೊಬ್ಬರು ಸುಪ್ರೀತ್‌ ಕುಮಾರ್‌ ಪೂಜಾರಿ. ಇವರ ವಿಶೇಷತೆ ಎಂದರೆ ಕಳೆದ ಒಂದೂವರೆ ದಶಕದಿಂದ ನಿರಂತರವಾಗಿ ಎಂಪಿ, ಎಂಎಲ್‌ಎ ಎಲೆಕ್ಷನ್‌ ಸ್ಪರ್ಧೆ ಮಾಡುತ್ತಿದ್ದಾರೆ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ಚುನಾವಣೆ ಬಂತೆಂದರೆ ಅನೇಕ ಘಟಾನುಘಟಿಗಳಿಗೇ ಟಿಕೆಟ್‌ ಸಿಗಲ್ಲ, ಆದರೆ ಅಭ್ಯರ್ಥಿಗಳ ಲಿಸ್ಟ್‌ನಲ್ಲಿ ಇವರ ಹೆಸರು ಮಾತ್ರ ಕಾಯಂ. ಮತಯಂತ್ರದಲ್ಲಿ ‘ಸುಪ್ರೀತ್‌ ಕುಮಾರ್‌ ಪೂಜಾರಿ’ ಎಂಬ ಹೆಸರು ಅಚ್ಚಾಗೋದು ಪಕ್ಕಾ. ಯಾವುದೇ ಎಂಪಿ, ಎಂಎಲ್‌ಎ ಚುನಾವಣೆ ಬರಲಿ, ಇವರ ಸ್ಪರ್ಧೆ ಮಾತ್ರ ತಪ್ಪೋದೆ ಇಲ್ಲ!

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 9 ಅಭ್ಯರ್ಥಿಗಳು ಇದ್ದಾರೆ. ಅವರಲ್ಲೊಬ್ಬರು ಸುಪ್ರೀತ್‌ ಕುಮಾರ್‌ ಪೂಜಾರಿ. ಇವರ ವಿಶೇಷತೆ ಎಂದರೆ ಕಳೆದ ಒಂದೂವರೆ ದಶಕದಿಂದ ನಿರಂತರವಾಗಿ ಎಂಪಿ, ಎಂಎಲ್‌ಎ ಎಲೆಕ್ಷನ್‌ ಸ್ಪರ್ಧೆ ಮಾಡುತ್ತಿದ್ದಾರೆ.

ಒಂದೆಡೆ ಪಕ್ಷ, ಮತ್ತೊಂದೆಡೆ ಪಕ್ಷೇತರ:

ಪ್ರತಿ ಚುನಾವಣೆಯಲ್ಲೂ ಒಂದಿಲ್ಲೊಂದು ಪಕ್ಷದಿಂದ ಸ್ಪರ್ಧಿಸುವ ಸುಪ್ರೀತ್‌ ಕುಮಾರ್‌ ಪೂಜಾರಿ ಈ ಬಾರಿ ದ.ಕ.ದಲ್ಲಿ ಪಕ್ಷೇತರರಾಗಿ ನಿಂತಿದ್ದರೆ, ಉಡುಪಿಯಲ್ಲಿ ಜನಹಿತ ಪಕ್ಷದಿಂದ ಏಕಕಾಲದಲ್ಲಿ ಸ್ಪರ್ಧೆಗಿಳಿದಿದ್ದಾರೆ. ಇವರು ಮೊದಲ ಬಾರಿ (2008) ಸ್ಪರ್ಧೆಗೆ ಇಳಿದದ್ದು ಜೆಡಿಯು ಪಕ್ಷದಿಂದ. ನಂತರದ ಚುನಾವಣೆಗಳಲ್ಲಿ ಹಿಂದುಸ್ತಾನ್‌ ಜನತಾ ಪಾರ್ಟಿ, ಲೋಕತಾಂತ್ರಿಕ ಜನತಾದಳ, ಜನಹಿತ, ಜೆಡಿಯು ಪಕ್ಷದಿಂದ ಸ್ಪರ್ಧಿಸಿದ್ದಾರೆ. ಈ ಬಾರಿ ಜೆಡಿಯು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುರುವುದರಿಂದ ಇವರಿಗೆ ಟಿಕೆಟ್‌ ಸಿಕ್ಕಿಲ್ಲ. ಹಾಗಾಗಿ ದ.ಕ.ದಲ್ಲಿ ಪಕ್ಷೇತರರಾಗಿ ನಿಂತಿದ್ದಾರೆ. ಕರಾವಳಿಯಲ್ಲಿ ಮಾತ್ರವಲ್ಲ, ಬೆಂಗಳೂರು, ಶಿಕಾರಿಪುರ, ಕಾರವಾರ, ಹೆಬ್ಬಾಳದಲ್ಲೂ ಸ್ಪರ್ಧೆ ಮಾಡಿದ್ದಾರೆ.

‘ದೇಶದಲ್ಲಿರೋದು ಕೇವಲ ಕಾಂಗ್ರೆಸ್‌, ಬಿಜೆಪಿ ಪಕ್ಷಗಳಷ್ಟೇ ಅಲ್ಲ. ಈ ಪಕ್ಷಗಳ ಮೇಲೆಯೇ ಜನರು ಅವಲಂಬಿತರಾಗಬಾರದು. ಇತರ ಹತ್ತಾರು ಪಕ್ಷಗಳಿದ್ದು, ಅವುಗಳ ಹೆಸರು ಕೂಡ ಜನರಿಗೆ ಗೊತ್ತಾಗಬೇಕು. ಇಂಥ ಪಕ್ಷಗಳಿಗೂ ಜನರು ಅಧಿಕಾರ ನೀಡಬೇಕು’ ಎನ್ನುತ್ತಾರೆ ಸುಪ್ರೀತ್‌ ಕುಮಾರ್‌.ಗೆದ್ದೇ ಗೆಲ್ಲುವೆ ಒಂದು ದಿನ:

2014ರ ಲೋಕಸಭೆ ಚುನಾವಣೆಯಲ್ಲಿ ಸುಪ್ರೀತ್‌ ಅವರು 657 ಮತ ಪಡೆದು ಕೊನೆ ಸ್ಥಾನದಲ್ಲಿದ್ದರು. 2019ರಲ್ಲಿ 948 ಓಟು ಗಳಿಕೆ ಮಾಡಿದ್ದರು. ಆದರೂ ಛಲ ಬಿಡದೆ ಅದೇ ಹುಮ್ಮಸ್ಸಿನಿಂದ ಈಗಲೂ ಸ್ಪರ್ಧೆ ಮಾಡುತ್ತಲೇ ಇದ್ದಾರೆ. ಓಟು ಬೀಳೋದು ಮುಖ್ಯ ಅಲ್ಲ, ಸ್ಪರ್ಧಿಸೋದು ಮುಖ್ಯ ಎನ್ನುವ ಅವರು, ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ. ಈ ಬಾರಿಯಂತೂ ಗೆಲುವಿನ ವಿಶ್ವಾಸದಿಂದಲೇ ಕೆಲಸ ಮಾಡುತ್ತಿದ್ದಾರೆ.

ಹಾಲು, ಪೇಪರ್‌ ಹಂಚೋರಿಂದ ಪ್ರಚಾರ:

ದೊಡ್ಡ ಪಕ್ಷಗಳು ಕೋಟ್ಯಂತರ ರು. ಚುನಾವಣೆಗೆ ಖರ್ಚು ಮಾಡುತ್ತಾರೆ. ಆದರೆ ನಾನು ಖರ್ಚು ಮಾಡಲ್ಲ. ದುಡಿದ ಹಣವನ್ನು ಕೂಡಿಟ್ಟು ಚುನಾವಣಾ ಡೆಪಾಸಿಟ್‌ ಕಟ್ಟುತ್ತೇನೆ. ನನ್ನ ಗೆಳೆಯರ ಬಳಗ ನನ್ನ ಪರವಾಗಿ ತಮ್ಮ ಲೆವೆಲ್‌ನಲ್ಲಿ ಪ್ರಚಾರ ಮಾಡುತ್ತಾರೆ. ಮನೆ ಮನೆ ಪ್ರಚಾರಕ್ಕೂ ಬರುತ್ತಾರೆ. ದೊಡ್ಡ ಕ್ಷೇತ್ರವಾದ್ದರಿಂದ ಎಲ್ಲೆಡೆ ತಲುಪಲು ಸಾಧ್ಯವಾಗಲ್ಲ. ಹಾಗಾಗಿ ಹಾಲು, ಪೇಪರ್‌ ಮನೆ ಮನೆಗೆ ಹಂಚುವವರ ಬಳಿ ಕರಪತ್ರ ನೀಡಿ ಮನೆ ಮನೆಗೆ ಹಾಕಿಸುತ್ತೇನೆ ಎನ್ನುತ್ತಾರವರು.ಉದ್ಯೋಗ ಸೃಷ್ಟಿ, ಮದುವೆ ಹಾಲ್‌ ಉಚಿತ

ಪ್ರಸ್ತುತ ಕರಾವಳಿಯ ಯುವಕರಿಗೆ ಇಲ್ಲಿ ಉದ್ಯೋಗ ಸಿಗುತ್ತಿಲ್ಲ. ಬಂದರು, ವಿಮಾನ ನಿಲ್ದಾಣ, ದೊಡ್ಡ ಕಂಪೆನಿಗಳಿದ್ದರೂ ಅಲ್ಲಿ ಸ್ಥಳೀಯರಿಗೆ ಸಿಗೋದು ಸೆಕ್ಯೂರಿಟಿ, ಕಸ ಗುಡಿಸುವ ಕೆಲಸಗಳು ಮಾತ್ರ. ಉದ್ಯೋಗ ಸಿಗದೆ ಸಣ್ಣಪುಟ್ಟ ವ್ಯಾಪಾರಕ್ಕೆ ಇಳಿಯುತ್ತಿದ್ದಾರೆ. ಅನೇಕರು ಕೂಲಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ಶಿಕ್ಷಣವಂತರು ಬೇರೆ ಊರಿಗೆ ವಲಸೆ ಹೋಗಿದ್ದರಿಂದ ಕರಾವಳಿಯಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ನಾನು ಗೆದ್ದರೆ ಯುವಕರಿಗೆ ಕರಾವಳಿಯಲ್ಲೇ ಉದ್ಯೋಗಕ್ಕೆ ಮೊದಲ ಆದ್ಯತೆ. ನಂತರದ ಆದ್ಯತೆಯಾಗಿ ಬಡವರಿಗೆ ಉಚಿತವಾಗಿ ವಿವಾಹ ಸಭಾಂಗಣಗಳನ್ನು ಕಟ್ಟಿಸಿಕೊಡುವ ಉದ್ದೇಶವಿದೆ ಎಂದು ಸುಪ್ರೀತ್‌ ಕುಮಾರ್‌ ಪೂಜಾರಿ ಹೇಳುತ್ತಾರೆ.