ನಿಷ್ಪಕ್ಷಪಾತ ಮತದಾನಕ್ಕೆ ಎಲ್ಲರೂ ಮುಂದಾಗಿ

| Published : Mar 31 2024, 02:10 AM IST

ಸಾರಾಂಶ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ.7 ರಂದು ಮತದಾನ ನಡೆಯುವ ಸಂಬಂಧ ತಾಲೂಕು ಸ್ವೀಪ್ ಸಮಿತಿಯಿಂದ ರಾಮದುರ್ಗ ತಾಲೂಕು ಪಂಚಾಯತಿ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ, ದೇವದಾಸಿಯರ, ಅಂಗನವಾಡಿ ಕಾರ್ಯಕರ್ತೆಯರ ಜಾಗೃತಿ ಜಾಥಾಕ್ಕೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಬಸವರಾಜ ಐನಾಪೂರ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಲು ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಅಗತ್ಯವಿದೆ. ಮತದಾನದ ವೇಳೆ ನಿಷ್ಪಕ್ಷಪಾತವಾಗಿ ಮತದಾನ ಮಾಡಲು ಎಲ್ಲರೂ ಮನಸ್ಸು ಮಾಡುವಂತೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಬಸವರಾಜ ಐನಾಪೂರ ಹೇಳಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ.7 ರಂದು ಮತದಾನ ನಡೆಯುವ ಸಂಬಂಧ ತಾಲೂಕು ಸ್ವೀಪ್ ಸಮಿತಿಯಿಂದ ತಾಲೂಕು ಪಂಚಾಯತಿ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ, ದೇವದಾಸಿಯರ, ಅಂಗನವಾಡಿ ಕಾರ್ಯಕರ್ತೆಯರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಮತದಾರರು ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದರು.

ಅರ್ಹ ಮತದಾರರು ಯಾವುದೇ ಆಸೆ, ಆಮೀಷಗಳಿಗೆ ಬಲಿಯಾಗದೇ ನಿಮ್ಮ ಪ್ರತಿನಿಧಿ ಆಯ್ಕೆ ಮಾಡುವ ಸುವರ್ಣಾವಕಾಶವೇ ಮತದಾನ ಮಾಡುವುದಾಗಿದೆ. ಸರ್ಕಾರಿ ನೌಕರರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ದೇಶದ ಪ್ರತಿಯೊಬ್ಬರು ಮತದಾನ ಮಾಡಲು ಪ್ರೇರಣೆ ನೀಡಬೇಕು ಎಂದು ತಿಳಿಸಿದರು.

ಮತದಾನ ಜಾಗೃತಿ ಜಾಥಾ ತಾಲೂಕು ಪಂಚಾಯತಿಯಿಂದ ಅಂಬೇಡ್ಕರ್‌ ರಸ್ತೆ, ಹುತಾತ್ಮ ವೃತ್ತ ಮೂಲಕ ವೆಂಕಟೇಶ್ವರ ದೇವಸ್ಥಾನದವರೆಗೆ ನಡೆಯಿತು. ಜಾಥಾದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.