ಕನ್ನಡಪ್ರಭ ವಾರ್ತೆ ಹೊನ್ನಾವರ

ಮಂಕಿ ಬ್ಲಾಕ್ ವ್ಯಾಪ್ತಿಯ ಬೂತ್ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಬಿಎಲ್ಎ-2 ಮತ್ತು ಮುಖಂಡರ ತರಬೇತಿ ಕಾರ್ಯಾಗಾರ ಪಟ್ಟಣದ ಮಾಜಿ ಸಚಿವರ ಕಾರ್ಯಾಲಯದಲ್ಲಿ ಜರುಗಿತು.

ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಎಸ್ಐಆರ್ ಅಭಿಯಾನದ ಜಿಲ್ಲಾ ಉಸ್ತುವಾರಿ ಭೀಮಣ್ಣ ನಾಯ್ಕ ಮಾತನಾಡಿ, ಇಡೀ ದೇಶದಲ್ಲಿ ಯಾರು ಈಗ ಮತದಾರರು ಇಲ್ಲ, ಹೊಸದಾಗಿ ಮತಪಟ್ಟಿ ಪರಿಸ್ಕರಿಸಲಾಗುವುದು. ಮತದಾರ ಚೀಟಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಯಾವ ಯೋಜನೆ ಪಡೆಯಲು ಸಾಧ್ಯವಿಲ್ಲ. 2014ರಿಂದ ಮತದಾರ ಪಟ್ಟಿ ಪರಿಷ್ಕರಣೆ ಆಗಬೇಕಿತ್ತು. ಬಿಜೆಪಿಯ ಸರ್ಕಾರದ ಹುನ್ನಾರದಿಂದ ಹಿಂದುಳಿದ ವರ್ಗದವರ, ಕಾರ್ಮಿಕರ, ಕೂಲಿಕಾರರು ಸೇರಿದಂತೆ ಅನೇಕ ಮತದಾರರನ್ನು ಮತದಾರ ಪಟ್ಟಿಯಿಂದ ಕೈ ಬಿಡುವಂತಾಗಿದೆ. ಇವರೆಲ್ಲರೂ ಮತದಾರ ಪಟ್ಟಿಯಿಂದ ಬಿಟ್ಟು ಹೋಗದಂತೆ ನಾವು ನೋಡಿಕೊಳ್ಳಬೇಕು ಎಂದರು.

ಮಾಜಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಇದೇ ತಿಂಗಳ 29ರ ಒಳಗೆ ಎಲ್ಲರೂ ಮತದಾರ ಪಟ್ಟಿ ಪರಿಷ್ಕರಣೆಗೆ ಸಿದ್ದರಾಗಿರಬೇಕು. ಜೂ. 30ಕ್ಕೆ ಮತದಾರ ಪಟ್ಟಿ ಪರಿಷ್ಕರಣೆ ಆರಂಭವಾಗುತ್ತದೆ. 2000 ಮತ್ತು 2022 ಇಸವಿಯ ಮತಪಟ್ಟಿಯಲ್ಲಿದ್ದರೆ ಡಿಲೀಟ್ ಆಗುವವರು ಯಾರು ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಮತ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಎಲ್ಲವೂ ವ್ಯತ್ಯಾಸವಾಗುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರದ ಯಾವುದೇ ಸೌಲಭ್ಯ ದೊರೆಯುವುದಿಲ್ಲ. ದಾಖಲೆಗಳನ್ನು ಸ್ಪಷ್ಟವಾಗಿ ದಾಖಲಿಸಿ ಜಾಗೃತರಾಗಿರಿ. ಬಿಎಲ್ಓ 2 ಗಳು ತುಂಬಾ ಜವಾಬ್ದಾರಿಯಿಂದ ಯಾವುದೇ ವ್ಯಕ್ತಿಯ ಮತ ವಂಚನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ನೀವು ಒಂದೊಮ್ಮೆ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ನಿಮ್ಮ ಸಾಮರ್ಥ್ಯ ತಿಳಿಯುತ್ತದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಮಾತನಾಡಿ, ಕೂಲಿಕಾರರು, ರೈತರು, ಕಾರ್ಮಿಕರ ಮತಗಳು ಮತದಾರರ ಪಟ್ಟಿಯಿಂದ ವಂಚಿತರಾಗುವುದನ್ನು ತಪ್ಪಿಸಲು ಎಐಸಿಸಿ, ಕೆಪಿಸಿಸಿ ಅಧ್ಯಕ್ಷರು ಸೂಕ್ತ ನಿರ್ದೇಶನ ನೀಡಿ ಯಾರ ಮತವು ವಂಚನೆಯ ಆಗದಂತೆ ನೋಡಿಕೊಳ್ಳಲು ಮಾರ್ಗದರ್ಶನ ನೀಡಿದ್ದಾರೆ. ಮಂಕಿ ಬ್ಲಾಕ್ ನಲ್ಲಿ 108 ಬಿ ಎಲ್ ಓ 2 ನೇಮಿಸಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಬಿಳುವ ಮತವನ್ನು ಡಿಲೀಟ್ ಮಾಡುವುದು ಬಿಜೆಪಿ ಸರ್ಕಾರದ ಹುನ್ನರವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲರಿಗೂ ಮತದಾನದ ಹಕ್ಕು ನೀಡುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಬೇಕು ಎಂದರು.


ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ್ ಮಾತನಾಡಿದರು. ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಮತದಾನ ಪರಿಷ್ಕರಣೆ ಕುರಿತು ಕಾರ್ಯಗಾರದ ತರಬೇತಿ ನೀಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಸತೀಶ ನಾಯ್ಕ,ತಾಲೂಕ ಅಧ್ಯಕ್ಷ ಅಣ್ಣಪ್ಪ ನಾಯ್ಕ್ ,ಕಾಂಗ್ರೆಸ್ ಮುಖಂಡರಾದ ಕೃಷ್ಣ ಗೌಡ ಹೊನ್ನಾವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ನಾಯ್ಕ, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಬೀನಾ ವೈದ್ಯ ಉಪಸ್ಥಿತರಿದ್ದರು.