ಎಲ್ಲರಲ್ಲೂ ದಿವ್ಯ ಶಕ್ತಿ ಇದೆ, ಕೀಳರಿಮೆ ಬೇಡ: ಡಾ.ಸಕ್ರೀ ನಾಯ್ಕ

| Published : May 14 2025, 12:14 AM IST

ಎಲ್ಲರಲ್ಲೂ ದಿವ್ಯ ಶಕ್ತಿ ಇದೆ, ಕೀಳರಿಮೆ ಬೇಡ: ಡಾ.ಸಕ್ರೀ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರಲ್ಲೂ ದಿವ್ಯ ಶಕ್ತಿಯಿದ್ದು ಯಾರೂ ಸಹ ತಮ್ಮನ್ನು ಕೀಳು, ಕ್ಷುಲ್ಲಕ ಎಂದು ಕೀಳರಿಮೆ ಮಾಡಿಕೊಳ್ಳಬಾರದು ಎಂದು ಶಿವಮೊಗ್ಗ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸಕ್ರೀ ನಾಯ್ಕ ಕಿವಿಮಾತು ಹೇಳಿದರು.

ಸರ್ಕಾರಿ ಕಾಲೇಜಿನಲ್ಲಿ ವಿವಿಧ ವೇದಿಕೆಗಳ ಸಮಾರೋಪ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಪ್ರತಿಯೊಬ್ಬರಲ್ಲೂ ದಿವ್ಯ ಶಕ್ತಿಯಿದ್ದು ಯಾರೂ ಸಹ ತಮ್ಮನ್ನು ಕೀಳು, ಕ್ಷುಲ್ಲಕ ಎಂದು ಕೀಳರಿಮೆ ಮಾಡಿಕೊಳ್ಳಬಾರದು ಎಂದು ಶಿವಮೊಗ್ಗ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸಕ್ರೀ ನಾಯ್ಕ ಕಿವಿಮಾತು ಹೇಳಿದರು.

ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ 2024–25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೋವರ್ಸ್– ರೇಂಜರ್ಸ್, ಯುವ ರೆಡ್ ಕ್ರಾಸ್ ಹಾಗೂ ವಿವಿಧ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಿದರು.

ಎಲ್ಲರಲ್ಲೂ ಪೂರ್ಣ ಪ್ರಮಾಣದ ಅನಂತ ಜ್ಞಾನವಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವಿದ್ಯೆ ವಿನಯ ತಂದುಕೊಡುತ್ತದೆ. ವಿದ್ಯೆ ಎಲ್ಲಕ್ಕಿಂತೂ ಶ್ರೇಷ್ಠ. ಪರಿಶ್ರಮ ಪಟ್ಟರೆ ಉತ್ತಮವಾದುದನ್ನು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಶ್ರೇಷ್ಠ ವ್ಯಕ್ತಿಗಳ ಭೇಟಿಯೂ ಸಾಧ್ಯ. ಪ್ರತಿಯೊಬ್ಬರು ತಮ್ಮ ತಂದೆ, ತಾಯಿಯನ್ನ ಗೌರವ ನೀಡಿ ಪೋಷಿಸಬೇಕು. ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಲೋಹಿಯರಂತಹ ಮಹಾನ್ ವ್ಯಕ್ತಿಗಳು ಹುಟ್ಟಿದ ದೇಶದಲ್ಲಿ ಸಾಮಾಜಿಕ, ಸಮಾನತೆಯತ್ತ ನಾವು ಸಾಗಬೇಕಾಗಿದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ, ಈ ಕಾಲೇಜಿನ ಇತಿಹಾಸದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಪಡೆದಿದ್ದಾರೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ್ದಾರೆ. ಪೋಷಕರು ಮಕ್ಕಳ ಬಗ್ಗೆ ಅಪಾರ ಭರವಸೆ ಇಟ್ಟುಕೊಂಡು ಪದವಿ ವ್ಯಾಸಂಗಕ್ಕೆ ಕಳುಹಿಸಿದ್ದು ಮಕ್ಕಳು ಶಿಕ್ಷಣದ ಮೂಲಕ ಗುರುತಿಸಿ ಕೊಳ್ಳಬೇಕು ಎಂದರು.

ಅತಿಥಿಯಾಗಿದ್ದ ಪಪಂ ಅಧ್ಯಕ್ಷೆ ಜುಬೇದಾ ಮಾತನಾಡಿ, ಪದವಿ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳು ತಮಗೆ ಇಷ್ಟವಾದ ಕ್ಷೇತ್ರ ಆಯ್ಕೆ ಮಾಡಿ ಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಉತ್ತಮ ಪ್ರಜೆಗಳಾಗಿ ಹೆತ್ತ ತಂದೆ, ತಾಯಿ, ಗುರು, ಹಿರಿಯರಿಗೆ ಗೌರವ ನೀಡಬೇಕು. ಕಾಲೇಜಿಗೆ ತಮ್ಮದೆ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಜಿಪಂ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ಪ್ರತಿಯೊಬ್ಬರು ತಾವು ಓದಿದ ಕಾಲೇಜಿಗೆ ಅಳಿಲು ಸೇವೆ ಮಾಡಬೇಕು. ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕಾಗಿ ಶಿಕ್ಷಣ ಪಡೆಯದೆ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಬೇಕು ಎಂದರು .

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಧನಂಜಯ ಮಾತನಾಡಿ, ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಶಾಲೆ, ಸಮಾಜ, ಗುರುಗಳು, ಸ್ನೇಹಿತರು ಪ್ರಭಾವ ಬೀರಲಿದ್ದು ಆದರ್ಶವ್ಯಕ್ತಿ, ಬಲಾಢ್ಯವ್ಯಕ್ತಿಯಾಗಿ ರೂಪುಗೊಳ್ಳಲು ಇವೆಲ್ಲವೂ ಪ್ರೇರಣೆ. ಕಠಿಣ ಶ್ರಮದಿಂದ ಮಾತ್ರ ಹಣ, ಅಂತಸ್ತು, ಹೆಸರು ಸಂಪಾದನೆ ಮಾಡಲು ಸಾಧ್ಯ ಎಂದರು.

ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಜೆ.ಮಂಜುನಾಥ್, ಯುವರೆಡ್ ಕ್ರಾಸ್ ಸಂಚಾಲಕ ಬಿ.ಅಶೋಕ ಕುಮಾರ, ಕ್ರೀಡಾ ಸಂಚಾಲಕ ಎಂ.ಎಚ್.ವಿಶ್ವನಾಥ್, ವಿದ್ಯಾರ್ಥಿನಿ ಸಂಧ್ಯಾ ಇದ್ದರು.