ಕನ್ನಡಪ್ರಭ ವಾರ್ತೆ ಮೈಸೂರು
ಶಿಕ್ಷಣದಲ್ಲಿ ದ್ವಿಭಾಷಾ ನೀತಿ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಯಾರೋ ಕೆಲವರು ವಿರೋಧ ಮಾಡಿದರು ಎಂಬ ಕಾರಣಕ್ಕೆ ನಾವು ಹಿಂದೆ ಸರಿಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿಯಾಗಬೇಕು ಎಂಬುದು ಅಭಿಪ್ರಾಯ. ಶಿಕ್ಷಣದಲ್ಲಿ ದ್ವಿಭಾಷಾ ನೀತಿ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಯಾರೋ ಕೆಲವರು ವಿರೋಧ ಮಾಡಿದರು ಎಂದು ನಾವು ಹಿಂದೆ ಸರಿಯುವುದಿಲ್ಲ. ಎಲ್ಲಾ ದೃಷ್ಟಿಕೋನದಲ್ಲಿ ಪರಾಮರ್ಶಿಸಿ, ಸರ್ಕಾರ ಈ ನಿರ್ಧಾರ ಮಾಡಿದೆ. ಎಲ್ಲರೂ ಈ ನಿರ್ಧಾರವನ್ನ ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ಈ ವರ್ಷದಿಂದಲೇ ಪರೀಕ್ಷೆಯಲ್ಲಿ ಇದು ಜಾರಿಯಾಗಲಿದೆ. ಹಾಗಂತ, ಹಿಂದಿ ಕಲಿಯಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ, ಹಿಂದಿ ಕಡ್ಡಾಯ ಬೇಡ ಎಂದು ಹೇಳುತ್ತಿದ್ದೇನೆ. ನಾನು ಓದುವಾಗ ಹಿಂದಿ ಕಡ್ಡಾಯ ಇರಲಿಲ್ಲ. ಹೀಗಾಗಿ, ನಾನು ಹಿಂದಿ ಓದಲೇ ಇಲ್ಲ. ಸುಮ್ಮನೆ ಹೇರಿಕೆಯಾಗಬಾರದು ಎಂದರು.ಇದೇ ವೇಳೆ, ಶಾಸಕರಿಗೆ 2 ಐಪಿಎಲ್ ಟಿಕೆಟ್ ನೀಡಿರುವ ಕುರಿತು ಪ್ರತಿಕ್ರಿಯಿಸಿ, ಶಾಸಕರು 2 ಐಪಿಎಲ್ ಟಿಕೆಟ್ ಕೇಳಿದ್ದರು. ಮೊದಲು ಒಂದು ಕೊಡುತ್ತಿದ್ದರು, ಈಗ ಎರಡು ಟಿಕೆಟ್ ಕೊಟ್ಟಿದ್ದಾರೆ. ಇಷ್ಟ ಇದ್ದವರು ಹೋಗಬಹುದು, ಬೇಡ ಎಂದರೆ ಬಿಡಬಹುದು. ಇದರಲ್ಲಿ ತಪ್ಪು-ಸರಿ ಪ್ರಶ್ನೆ ಬರುವುದಿಲ್ಲ ಎಂದು ಹೇಳಿದರು.
ನಾನು ಏನೂ ಕೆಲಸ ಇಲ್ಲ ಅಂದರೆ ಮಾತ್ರ ಕ್ರಿಕೆಟ್ ನೋಡಲು ಹೋಗುತ್ತೇನೆ. ಇಲ್ಲ ಅಂದ್ರೆ ಹೋಗುವುದಿಲ್ಲ. ನನಗೆ ಕ್ರಿಕೆಟ್ ಅಂದರೆ ಇಷ್ಟ. ಆದರೆ, ಕೆಲಸ ಇದ್ದಾಗ ನೋಡುವುದಿಲ್ಲ. ನನಗೆ 9 ತಾರೀಖಿನವರೆಗೂ ಚುನಾವಣಾ ಕೆಲಸಗಳು ಇದೆ. ಅಲ್ಲಿವರೆಗೆ ಯಾವ ಮ್ಯಾಚ್ ಗಳನ್ನೂ ನೋಡಲು ಹೋಗುವುದಿಲ್ಲ. ಆಮೇಲೆ ಬೇಕಾದ್ರೆ ನೋಡೋಣ ಎಂದರು.