ದೇವನಹಳ್ಳಿ: ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ನಿಯಮ ಮೀರಿದರೆ ತಕ್ಕ ದಂಡ ತೆರಬೇಕಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾದೀಶರು, ಬೆಂ.ಗ್ರಾ. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳಾದ ಶ್ರೀಶೈಲ ಭಿಮಸೇನ ಬಾಗಡಿ ತಿಳಿಸಿದರು
ದೇವನಹಳ್ಳಿ: ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ನಿಯಮ ಮೀರಿದರೆ ತಕ್ಕ ದಂಡ ತೆರಬೇಕಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾದೀಶರು, ಬೆಂ.ಗ್ರಾ. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳಾದ ಶ್ರೀಶೈಲ ಭಿಮಸೇನ ಬಾಗಡಿ ತಿಳಿಸಿದರು.
ತಾಲೂಕಿನ ಆವತಿಯ ಅನಂತ ವಿದ್ಯಾನಿಕೇತನ ಶಾಲೆಯಲ್ಲಿ ಬೆಂ.ಗ್ರಾ. ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಸಾರಿಗೆ ಇಲಾಖೆ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದ್ವಿಚಕ್ರ ವಾಹನ ಸವಾರರು ಐಎಸ್‌ಐ ಇರುವ ಹೆಲ್ಮೆಟ್‌ಗಳನ್ನೆ ಧರಿಸಿದರೆ ಪ್ರಾಣ ರಕ್ಷಣೆ ಮಾಡಿಕೊಳ್ಳಬಹುದು. ಅಪಘಾತವಾದ ವ್ಯಕ್ತಿಗಳಿಗೆ ಯಾವುದೇ ಆಸ್ಪತ್ರೆಯಲ್ಲಾದರೂ ತುರ್ತು ಚಿಕಿತ್ಸೆ ನೀಡಬೇಕು. ಅಪಘಾತಕ್ಕೀಡಾದ ವ್ಯಕ್ತಿಯನ್ನು ಸಾರ್ವಜನಿಕರು ಮೊದಲು ಆಸ್ಪತ್ರೆಗೆ ಸೇರಿಸಬೇಕು. ನಿಮ್ಮ ಮೇಲೆ ಯಾವುದೇ ಕೇಸ್ ದಾಖಲಿಸುವುದಿಲ್ಲ. ಮಾನವೀಯತೆ ಮೆರೆದು ಜೀವ ಉಳಿಸುವಂತೆ ಸಲಹೆ ಮಾಡಿದರು.ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಮಾತನಾಡಿ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ತಪ್ಪದೆ ಹೆಲ್ಮೆಟ್ ಧರಿಸಬೇಕು ಎಂದರು.
ದಕ್ಷಿಣ ಅಪರ ಸಾರಿಗೆ ಆಯುಕ್ತರಾದ ಎಂ.ಪಿ.ಲೋಕೇಶ್ವರಿ ಮಾತನಾಡಿ, ವಾಹನ ಚಲಾಯಿಸುವವರು ಕಡ್ಡಾಯವಾಗಿ ಚಾಲನಾ ಪರವಾನಗಿ ವಿಮೆ ಹೊಂದಿರಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಅಪ್ರಾಪ್ತ ವಯಸ್ಸಿನ ಮಕ್ಕಳು ಅಪಘಾತ ಮಾಡಿದರೆ ಅವರ ತಂದೆ-ತಾಯಿಗೆ ಶಿಕ್ಷೆ ವಿಧಿಸಲಾಗುವುದು ಎಂದರು.ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಬಿ.ಸುಧೀರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಇಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನದ ನೋಂದಣಿ ಪ್ರಮಾಣ ಪತ್ರ, ವಿಮೆ ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಯಾವಾಗಲೂ ಜೊತೆಯಲ್ಲಿರಬೇಕು. ಕುಡಿದು ವಾಹನ ಚಾಲನೆ, ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಚಿತ್ರಕಲೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಬಹುಮಾನ ವಿತರಿಸಲಾಯಿತು. ಅಪರ ಸಾರಿಗೆ ಆಯುಕ್ತರಾದ ಎಂ.ಪಿ.ಓಂಕಾರೇಶ್ವರಿ, ವಕೀಲರ ಸಂಘದ ಅಧ್ಯಕ್ಷ ಮುನಿರಾಜು, ಅನಂತ ವಿದ್ಯಾನಿಕೇತನ ಶಾಲೆ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಕಾರ್ಯದರ್ಶಿ ಎ.ವಿ.ಕೆಂಪೇಗೌಡ, ವಕೀಲರಾದ ಮೂರ್ತಿ.ಎಂ, ಭರತ್, ಹಿರಿಯ ಮೋಟಾರು ನಿರೀಕ್ಷಕ ನರಸಿಂಹಮೂರ್ತಿ, ಮೋಟಾರು ನಿರೀಕ್ಷಕರಾದ ಅರುಣ, ಸಿಂಧು, ಶ್ವೇತಾ, ದಂಡಪಾಣಿ, ರಾಮಕೃಷ್ಣ, ನಾಗೇಶ್ ಇತರರು ಉಪಸ್ಥಿತರಿದ್ದರು.