ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರತಿಯೊಬ್ಬ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳು ಅವಶ್ಯಕ ಹಾಗೂ ಕಾನೂನಿನ ಅರಿವು ಬಹಳ ಮುಖ್ಯವಾಗಿರುತ್ತದೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಶಶಿಧರ ಎಂ.ಗೌಡ ಹೇಳಿದರು.ಸವದತ್ತಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಕಾರ್ಮಿಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಸರ್ಕಾರಿ ಆದರ್ಶ ಮಹಾವಿದ್ಯಾಲಯ ಯಡ್ರಾಂವಿಯಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯು ಮಕ್ಕಳನ್ನು ಎಲ್ಲ ರೀತಿಯ ಉದ್ಯೋಗಗಳಲ್ಲಿ ತೊಡಗಿಸುವುದನ್ನು ನಿಷೇಧಿಸುತ್ತದೆ. ಹದಿಹರೆಯದವರನ್ನು ಅಪಾಯಕಾರಿ ಉದ್ಯೋಗಗಳಲ್ಲಿ ಮತ್ತು ಪ್ರಕ್ರಿಯೆಯಲ್ಲಿ ತೊಡಗಿಸುವುದನ್ನು ನಿಷೇಧಿಸುತ್ತದೆ. ಇಂತದೇ ವಿಷಯದೊಂದಿಗೆ ಈ ಕಾಯ್ದೆ ಸಂಬಂಧ ಹೊಂದಿರುತ್ತದೆ ಎಂದು ತಿಳಿಸಿದರು.ನ್ಯಾಯವಾದಿ ಎ.ಎಂ.ಭಾಗೋಜಿಕೊಪ್ಪ ಉಪನ್ಯಾಸ ನೀಡಿ, ಈ ಕಾಯ್ದೆಯು ದೇಶ ವ್ಯಾಪಿಯಾಗಿದೆ. ಹದಿಹರೆಯದವರು ಎಂದರೆ ಯಾವುದೇ ವ್ಯಕ್ತಿ 14 ವರ್ಷ ಪೂರ್ಣಗೊಂಡಿರುವ ಮತ್ತು 18 ವರ್ಷ ಪೂರ್ಣಗೊಳಿಸದವರು. ಯಾವುದೇ ಮಗುವನ್ನು ಯಾವುದೇ ಉದ್ಯೋಗಕ್ಕೆ ನೇಮಿಸಿಕೊಳ್ಳಬಾರದು ಅಥವಾ ಯಾವುದೇ ಕೆಲಸ ಅಥವಾ ಪ್ರಕ್ರಿಯೆಯಲ್ಲಿ ದುಡಿಯಲು ಅನುಮತಿ ನೀಡಬಾರದು ಎಂದು ವಿವರಿಸಿದರು.ಕಾರ್ಮಿಕ ನೀರೀಕ್ಷ ಮಹೇಶ ಬಾಗೋಜಿ ಮಾತನಾಡಿ, ಹದಿಹರೆಯದವರನ್ನು ಅಪಾಯಕಾರಿ ಉದ್ಯೋಗಗಳಲ್ಲಿ ಮತ್ತು ಪ್ರಕ್ರಿಯೆಯಲ್ಲಿ ತೊಡಗಿಸಿರುವುದು ಯಾರಿಗಾದರೂ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ತಿಳಿಸಿ. ಮಾಹಿತಿ ನೀಡಿದವರ ಹೆಸರು ಹಾಗೂ ವಿಳಾಸವನ್ನು ಯಾರೂ ಕೇಳಿವುದಿಲ್ಲ ಅದು ಗೌಪ್ಯವಾಗಿರುತ್ತದೆ. ಹೀಗಾಗಿ ಯಾರು ಭಯಪಡದೇ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಲು ಕೈಜೊಡಿಸಿ ಎಂದು ಕೋರಿದರು.ಶಾಲೆಯ ಪ್ರಾಚಾರ್ಯ ಆರ್.ಎಫ್. ಮಾಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾನೂನು ಅರಿವು ನೆರವು ಕಾರ್ಯಕ್ರಮದಿಂದ ನೆರದಿರುವ ಎಲ್ಲರಿಗೂ ಸಾಮಾನ್ಯ ಕಾನೂನುಗಳ ಬಗೆಗೆ ತಿಳುವಳಿಕೆ ಮೂಡುತ್ತದೆ. ಆದ್ದರಿಂದ ಇಂತಹ ಕಾನೂನು ಅರಿವು ನೆರವು ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನ್ಯಾಯವಾದಿಗಳಾದ ಎಸ್.ಎಸ್.ಕಾಳಪ್ಪನವರ, ಎ.ಡಿ.ಏಣಗಿ, ಎಸ್.ವೈ.ಶಿಬಾರಗಟ್ಟಿ ಹಾಗೂ ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪ್ರವೀಣಕುಮಾರ ಬನಕಾರ ಸ್ವಾಗತಿಸಿದರು. ಐ.ಬಿ.ನೇಸರಗಿ ನಿರೂಪಿಸಿದರು. ಎಂ.ಆರ್.ಮುದ್ದನ್ನವರ ವಂದಿಸಿದರು.