ಭವ್ಯ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದು ತಾಲೂಕು ತಹಸೀಲ್ದಾರ್ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ಕಿರಣ್ ಜಿ ಗೌರಯ್ಯ ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಭವ್ಯ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದು ತಾಲೂಕು ತಹಸೀಲ್ದಾರ್ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ಕಿರಣ್ ಜಿ ಗೌರಯ್ಯ ಕರೆ ನೀಡಿದ್ದಾರೆ.

ಅವರು ಕುಶಾಲನಗರದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನ ಆವರಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿ ಮಾತನಾಡಿದರು. ರಾಷ್ಟ್ರೀಯ ದಿನಗಳು ಕೇವಲ ಭಾಷಣಕ್ಕೆ ಸೀಮಿತವಾಗಬಾರದು. ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಕರ್ತವ್ಯ ನಿರ್ವಹಿಸಬೇಕು. ಯುವ ಪೀಳಿಗೆಗೆ ಸಂದೇಶ ನೀಡಿ ಜಾಗೃತಿ ಮೂಡಿಸಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಂತಾಗಬೇಕು. ಸರ್ವಾಂಗೀಣ ಪ್ರಗತಿ ಕಂಡಿರುವ ನಮ್ಮ ದೇಶ ಆರ್ಥಿಕವಾಗಿ ಬಲಿಷ್ಠವಾಗಿದೆ ಎಂದ ಕಿರಣ್ ಗೌರಯ್ಯ ಹೇಳಿದರು. ಸ್ವಚ್ಛ ಪರಿಸರದೊಂದಿಗೆ ಮುಂದಿನ ಪೀಳಿಗೆಗೆ ಸಮೃದ್ಧ ನಾಡನ್ನು ಹಸ್ತಾಂತರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.ಮುಖ್ಯ ಭಾಷಣಕಾರರಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹಂಡ್ರಂಗಿ ನಾಗರಾಜು ಮಾತನಾಡಿ, ಗಣರಾಜ್ಯೋತ್ಸವ ದಿನದ ಮಹತ್ವದ ಮತ್ತು ವಿಶೇಷತೆಗಳನ್ನು ತಿಳಿ ಹೇಳಿದರು. ಎಲ್ಲರ ಕರ್ತವ್ಯ:

ಸಂವಿಧಾನದ ಆಶೋತ್ತರಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯವಾಗಿದೆ. ಸತ್ಯದ ಅನ್ವೇಷಣೆ ಮೂಲಕ ದೇಶ ಕಟ್ಟುವ ಕೆಲಸ ಆಗಬೇಕಿದೆ. ಸಂವಿಧಾನ ಭಾರತೀಯರ ನಂಬಿಕೆಯ ಗ್ರಂಥವಾಗಿದ್ದು ಅದರಂತೆ ನಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿಪಿ ಶಶಿಧರ್ ಮಾತನಾಡಿ, ಪ್ರಜಾ ಪ್ರಭುತ್ವದ ಘನತೆಯನ್ನು ಕಾಪಾಡುವ ಹೊಣೆ ಎಲ್ಲರ ಮೇಲಿದೆ ದೇಶದ ಭವಿಷ್ಯ ರೂಪಿಸಬೇಕಾದ ಯುವ ಪೀಳಿಗೆ ಈ ವಿಷಯದಲ್ಲಿ ಮೌನ ತಾಳಿರುವುದು, ಪ್ರಜೆಗಳು ಮಾನಸಿಕವಾಗಿ ಭ್ರಷ್ಟಾಚಾರದತ್ತ ಮುಖ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ತಮ್ಮ ಪ್ರತಿನಿಧಿಗಳ ಆಯ್ಕೆ ಸಂದರ್ಭ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವ ಕೆಲಸ ಆಗಬೇಕಾಗಿದೆ ಎಂದರು. ಸನ್ಮಾನ ಗೌರವ:

ಇದೇ ಸಂದರ್ಭ ಕುಶಾಲನಗರದ ಸಾಧಕರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಸೈನಿಕರಾದ ಹಾನರಿ ಕ್ಯಾಪ್ಟನ್ ಪಿ ಈ ಮುತ್ತಣ್ಣ, ನಾಟಿ ವೈದ್ಯೆ ಅಯಿನಮಂಡ ಲೀಲಾವತಿ ಗಣಪತಿ, ಪೌರಕಾರ್ಮಿಕರಾದ ಗೌರಮ್ಮ ಮತ್ತು ರಾಷ್ಟ್ರೀಯ ಕ್ರೀಡಾಪಟುಗಳಾದ ಬ್ರಿಜೇಶ್, ಮುಕುಂದ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಅವರ ಉತ್ತಮ ಕಾರ್ಯ ವೈಖರಿ ಗಮನಿಸಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭ ವೇದಿಕೆಯಲ್ಲಿ ಸೋಮವಾರಪೇಟೆ ಉಪ ವಿಭಾಗದ ಡಿ ವೈ ಎಸ್ ಪಿ ಚಂದ್ರಶೇಖರ್, ಪುರಸಭೆ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್, ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಬಿ ಆರ್, ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ ಪಿ ಚಂದ್ರಕಲಾ, ಪುರಸಭೆ ಆರೋಗ್ಯ ಅಧಿಕಾರಿ ಉದಯ್ ಕುಮಾರ್, ಅಧಿಕಾರಿಗಳು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸದಸ್ಯರು ಮತ್ತಿತರರು ಇದ್ದರು.ಕಾರ್ಯಕ್ರಮಕ್ಕೆ ಮುನ್ನ ಪೊಲೀಸ್ ಎನ್‌ ಸಿ ಸಿ ತಂಡಗಳು, ಶಾಲಾ ಕಾಲೇಜು ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪೆರೇಡ್ ಕಮಾಂಡರ್ ಆಗಿ ಏ ಎಸ್ ಐ ಎಸ್ ಎಸ್ ಶ್ರೀನಿವಾಸ್ ಅವರು ಕಾರ್ಯನಿರ್ವಹಿಸಿದರು.ಪಥಸಂಚಲದಲ್ಲಿ ಪಾಲ್ಗೊಂಡ ತಂಡದ ನಾಯಕರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.ಶಿಕ್ಷಕರು ವಿದ್ಯಾರ್ಥಿಗಳು ನಾಡಗೀತೆ ರೈತ ಗೀತೆ ಹಾಡಿದರು. ಮಹೇಶ್ ಅಮೀನ್ ಅವರು ವಂದೇ ಮಾತರಂ ಗೀತೆಯನ್ನು ಹಾಡಿದರು. ಲೋಕೇಶ್ ತಂಡದಿಂದ ಕ್ರಾಂತಿ ಗೀತೆ, ಶಿಕ್ಷಕಿಯರಾದ ತುಳಸಿ ಮತ್ತು ಭವ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕರಾದ ನವೀನ್ ಕುಮಾರ್ ಸ್ವಾಗತಿಸಿ ಸಿಂಧೂರಿ ವಂದಿಸಿದರು.ನಂತರ ಶಾಲಾ-ಕಾಲೇಜು ವಿದ್ಯಾರ್ಥಿಗಳ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.