ಸಾರಾಂಶ
ಅಫಜಲ್ಪುರ ತಾಲೂಕಿನ 28 ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿನ ಸರ್ಕಾರಿ ಜಮೀನುಗಳು, ಗೋಮಾಳಗಳಲ್ಲಿ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಸಸಿಗಳನ್ನು ನೆಡುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು.
ಕನ್ನಡಪ್ರಭ ವಾರ್ತೆ ಚವಡಾಪುರ
ವರ್ಷದಿಂದ ವರ್ಷಕ್ಕೆ ಪರಿಸರ ನಾಶದ ಪ್ರಮಾಣ ಹೆಚ್ಚುತ್ತಿದೆ. ನಮಗೆಲ್ಲ ಆಮ್ಲಜನಕ ನೀಡುವ ಮರಗಿಡಗಳಿಗೆ ನಾವು ಕೊಡಲಿ ಪೆಟ್ಟು ಹಾಕುತ್ತಿರುವುದು ನಿಜಕ್ಕೂ ಘೋರ ದುರಂತ ತಂದದೊಡ್ಡಲಿದೆ. ಹಸಿರು ಉಳಿದರೆ ನಮ್ಮೆಲ್ಲರ ಉಸಿರು ಖಾತ್ರಿಯಾಗಿರಲಿದೆ ಎಂದು ತಾ.ಪಂ ಇಒ ವೀರಣ್ಣ ಕವಲಗಿ ಹೇಳಿದರು.ಅಫಜಲ್ಪುರ ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ತಾಲೂಕು ಪಂಚಾಯ್ತಿ, ಸಾಮಾಜಿಕ ಅರಣ್ಯ ವಲಯ ಅಫಜಲ್ಪುರ ಹಾಗೂ ಗ್ರಾಮ ಪಂಚಾಯಿತಿ ಬಳೂರ್ಗಿ ಇವರ ಸಹಯೋಗದಲ್ಲಿ ನಡೆದ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬರು ಉತ್ತಮ ನಾಳೆಗಾಗಿ ಇಂದು ಸಸಿಗಳನ್ನು ನೆಟ್ಟು ಬೆಳೆಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಅರಣ್ಯ ಇಲಾಖೆ ಅಧಿಕಾರಿಗಳಾದ ಸಂತೋಷ ಇಂಡಿ ಹಾಗೂ ಶಿವಗುಂಡಪ್ಪ ಮಾತನಾಡಿ, ಅರಣ್ಯ ಇಲಾಖೆ ಪ್ರತಿವರ್ಷ ಮಳೆಗಾಲದಲ್ಲಿ ಅರಣ್ಯೀಕರಣ ಕಾರ್ಯಕ್ರಮಗಳನ್ನು ಎಲ್ಲೆಡೆ ಹಮ್ಮಿಕೊಳ್ಳುವ ಮೂಲಕ ಗಿಡಮರಗಳನ್ನು ನೆಡುವ ಕೆಲಸ ಮಾಡುತ್ತಿದೆ ಎಂದರು.ತಾ.ಪಂ ಸಹಾಯಕ ನಿರ್ದೇಶಕ ರಮೇಶ ಪಾಟೀಲ ಮಾತನಾಡಿ, ತಾಲೂಕಿನ 28 ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿನ ಸರ್ಕಾರಿ ಜಮೀನುಗಳು, ಗೋಮಾಳಗಳಲ್ಲಿ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಸಸಿಗಳನ್ನು ನೆಡುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು. ಗಿಡಮರಗಳು ಎಲ್ಲಾ ಜೀವಿಗಳಿಗೂ ಅತ್ಯವಶ್ಯಕ ಆಮ್ಲಜನಕ ನೀಡುವುದರಿಂದ ಅವುಗಳನ್ನು ನಾವೆಲ್ಲರೂ ರಕ್ಷಣೆ ಮಾಡಲೇಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹಾಂತೇಶ ಸಾಲಿಮಠ, ಗಸ್ತು ಅರಣ್ಯ ಪಾಲಕ ಆನಂದ ಸೇರಿದಂತೆ ಅನೇಕರು ಇದ್ದರು.