ಸಾರಾಂಶ
ನಗರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ನಗರಸಭೆಯೊಂದಿಗೆ ಸ್ವಯಂ ಸೇವಾ ಸಂಘಗಳು, ವರ್ತಕರು ಹೆಚ್ಚಿನ ರೀತಿಯಲ್ಲಿ ಕೈಜೋಡಿಸಬೇಕು ಎಂದು ನಗರಸಭಾ ಅಧ್ಯಕ್ಷ ಸುರೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ನಗರಸಭೆಯೊಂದಿಗೆ ಸ್ವಯಂ ಸೇವಾ ಸಂಘಗಳು, ವರ್ತಕರು ಹೆಚ್ಚಿನ ರೀತಿಯಲ್ಲಿ ಕೈಜೋಡಿಸಬೇಕು ಎಂದು ನಗರಸಭಾ ಅಧ್ಯಕ್ಷ ಸುರೇಶ್ ತಿಳಿಸಿದರು.ನಗರದ ಭುವನೇಶ್ವರಿ ವೃತ್ತದಿಂದ ಡಿವಿಯೇಷನ್ ರಸ್ತೆ ಮಾರ್ಗದ ಸಂತೇಮರಹಳ್ಳಿ ಸರ್ಕಲ್ ವರೆಗೆ ನಡೆದ ಮೂರನೇ ವಾರದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ವಾರ ಚಾಮರಾಜನಗರದಲ್ಲಿ ಸ್ವಚ್ಛತಾ ಅಭಿಯಾನವನ್ನು ಸಂಘ ಸಂಸ್ಥೆಯ ಸಹಕಾರದಲ್ಲಿ ನಡೆಸಲಾಗುತ್ತಿದೆ. ನಗರದಲ್ಲಿರುವ ಸಾರ್ವಜನಿಕರು ನಗರವನ್ನು ಸ್ವಚ್ಛವಾಗಿಸಲು ಸಹಕರಿಸಬೇಕು. ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಗೆ ಮುಂದಾಗಬೇಕು ಎಂದರು.ನಗರಸಭೆ ವತಿಯಿಂದ ಈಗಾಗಲೇ ವಾರ್ಡ್‌ಗಳಲ್ಲಿ ಕಸದ ಡಬ್ಬಿಯನ್ನು ವಿತರಣೆ ಮಾಡಲಾಗುತ್ತಿದ್ದು, ನಿವಾಸಿಗಳು ಹಸಿ ಕಸ, ಒಣ ಕಸವನ್ನು ವಿಂಗಡಿಸಿ ನೀಡುವುದರಿಂದ ನಗರದ ಸ್ವಚ್ಛತೆ ಸಾಧ್ಯವಾಗುತ್ತದೆ. ನಗರಸಭೆ ಪೌರ ಕಾರ್ಮಿಕರೊಂದಿಗೆ ನಿವಾಸಿಗಳು ಸಹಕಾರ ನೀಡಿ, ಮನೆಗಳಲ್ಲಿ ಉತ್ಪತ್ತಿಯಾಗುವ ಒಣ ಕಸ, ಹಸಿ ಕಸವನ್ನು ಪ್ರತ್ಯೇಕ ಮಾಡಿ, ನಗರಸಭೆ ಗಾಡಿಗಳಿಗೆ ನೀಡಬೇಕು. ಇದರಿಂದ ಕಸದ ರಾಶಿಗಳು ಬೀಳುವುದು ತಪ್ಪುತ್ತದೆ. ಬೀದಿಯು ಸಹ ಸ್ವಚ್ಚವಾಗಿರುತ್ತದೆ ಎಂದರು.
ನಗರಸಭಾ ಪೌರಾಯುಕ್ತ ಎಸ್.ವಿ. ರಾಮದಾಸ್ ಮಾತನಾಡಿ, ನಗರವನ್ನು ಸ್ವಚ್ಛವಾಗಿಡಲು ಜನರು ಸಹಕರಿಸಬೇಕು. ಪರಿಸರ ಸ್ವಚ್ಛವಾಗಿದ್ದರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಜನರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮೂರನೇ ವಾರದ ಸ್ವಚ್ಚತಾ ಅಭಿಯಾನ ಯಶಸ್ವಿಯಾಗುತ್ತಿದೆ. ವರ್ತಕರು ಹಾಗೂ ವಿವಿದ ಸಂಘ ಸಂಸ್ಥೆಗಳ ಮುಖಂಡರ ಸಹಕಾರ ದೊರೆಯುತ್ತಿದೆ ಎಂದರು.ಈ ಸಂದರ್ಭದಲ್ಲಿ ವರ್ತಕರ ಸಂಘದ ಶಂಕರ್, ರೋಟರಿ ಅಧ್ಯಕ್ಷ ರಾಮಸಮುದ್ರ ನಾಗರಾಜು, ಜಯಸಿಂಹ, ವಾಣಿಜ್ಯ ಮಂಡಳಿಯ ಅಧ್ಯಕ್ಷ ವಿ. ಪ್ರಭಾಕರ್, ಚೇತನ್, ಸತೀಶ್, ವಿಶ್ವಾಸ್, ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜು, ನಾರಾಯಣ್, ಸಂತೋಷ್, ಇತರರು ಇದ್ದರು.