ಸಾರಾಂಶ
ಮಾಗಡಿ: ಗಾಂಧೀಜಿ ಆಶಯದಂತೆ ಒಬ್ಬರು ಮತ್ತೊಬ್ಬರಿಗೆ ಸಹಕಾರಿಯಾಗಬೇಕು ಎಂದು ಡಾ.ಮಲಯ ಶಾಂತಮುನಿ ಶಿವಾಚಾರ್ಯ ಹೇಳಿದರು.
ಮಾಗಡಿ: ಗಾಂಧೀಜಿ ಆಶಯದಂತೆ ಒಬ್ಬರು ಮತ್ತೊಬ್ಬರಿಗೆ ಸಹಕಾರಿಯಾಗಬೇಕು ಎಂದು ಡಾ.ಮಲಯ ಶಾಂತಮುನಿ ಶಿವಾಚಾರ್ಯ ಹೇಳಿದರು.
ಪಟ್ಟಣದ ಡೂಮ್ ಲೈಟ್ ವೃತ್ತದಲ್ಲಿರುವ ಡಾ.ಶಿವಕುಮಾರ್ ಸ್ವಾಮೀಜಿ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಶಾಖೆಯಿಂದ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮಹಾತ್ಮ ಗಾಂಧೀಜಿ ಮೈಮೇಲೆ ಕೇವಲ ಒಂದು ತುಂಡುಬಟ್ಟೆ ಹಾಕಿಕೊಂಡು ಜೀವನ ನಡೆಸಿದ್ದಾರೆ. ಸರಳವಾಗಿ ಬದುಕಿ ಅಸಾಧಾರಣವಾದದ್ದನ್ನು ಸಾಧಿಸಿದ್ದಾರೆ ಎಂದರು. ಯುವಕರು ದುಶ್ಚಟಗಳಿಗೆ ದಾಸರಾಗಿ, ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕುಟುಂಬಗಳು ಆರ್ಥಿಕ ಹಿನ್ನಡೆ ಅನುಭವಿಸುತ್ತಿವೆ. ಯುವಕರಲ್ಲಿನ ದುಶ್ಚಟಗಳನ್ನು ಮುಕ್ತಗೊಳಿಸಲು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮುಖಾಂತರ ಮಹಾತ್ಮ ಗಾಂಧೀಜಿಯ ಕನಸನ್ನು ನನಸು ಮಾಡಲಾಗುತ್ತಿದೆ. ಮದ್ಯಪಾನ ಮುಕ್ತ ತಾಲೂಕನ್ನು ನಿರ್ಮಿಸಲು ನಾವೆಲ್ಲರೂ ಕೈಜೋಡಿಸಬೇಕೆಂದು ಸಲಹೆ ನೀಡಿದರು. ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮು ನೆಲ್ಲಿತ್ತಾಯ ಮಾತನಾಡಿ, ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಧರ್ಮಸ್ಧಳ ಸಂಸ್ಧೆಯು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದೆ. ಸಾವಿರಾರು ಕುಟುಂಬದ ಸದಸ್ಯರು ಕುಡಿತ ತ್ಯಜಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದರು.ಜನಜಾಗೃತಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕುಡಿತದ ದುಷ್ಪರಿಣಾಮಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿಕೊಡುವ ಉದ್ದೇಶದಿಂದ ಮದ್ಯಪಾನ ಮುಕ್ತ ಗ್ರಾಮ ಕಲ್ಪನೆಯ ಬಗ್ಗೆ ಪ್ರತಿಯೊಂದು ಹಳ್ಳಿಯಲ್ಲೂ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಜಯಕರ್ ಶೆಟ್ಟಿ, ಜನಜಾಗೃತಿ ಸಮಿತಿ ಅಧ್ಯಕ್ಷ ಚಿಕ್ಕಣ್ಣಯ್ಯ, ಉಪಾಧ್ಯಕ್ಷ ಮಾರಣ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ರಮ್ಯನರಸಿಂಹಮೂರ್ತಿ, ಪೊಲೀಸ್ ಆರಕ್ಷಕ ಬಸವರಾಜು, ಪುರಸಭಾ ಸದಸ್ಯರಾದ ಶಿವರುದ್ರಮ್ಮ ವಿಜಯ್ ಕುಮಾರ್ ಉಪಸ್ಥಿತರಿದ್ದರು.