ಎಲ್ಲರೂ ಕೆಂಪೇಗೌಡರ ತತ್ವಾದರ್ಶ ಅಳವಡಿಸಿಕೊಳ್ಳಿ

| Published : Jul 08 2024, 12:34 AM IST

ಸಾರಾಂಶ

ಟ್ರಹಳ್ಳಿ ಗ್ರಾಮ ಧಾರ್ಮಿಕ, ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ ಎಂದು ನಿಟ್ರಹಳ್ಳಿ ಆದಿಲಕ್ಷ್ಮೀ ಸಂಸ್ಥಾನದ ನೀಲಕಂಠ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ನಿಟ್ರಹಳ್ಳಿ ಗ್ರಾಮ ಧಾರ್ಮಿಕ, ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ ಎಂದು ನಿಟ್ರಹಳ್ಳಿ ಆದಿಲಕ್ಷ್ಮೀ ಸಂಸ್ಥಾನದ ನೀಲಕಂಠ ಸ್ವಾಮೀಜಿ ತಿಳಿಸಿದರು.

ತಾಲೂಕಿನ ನಿಟ್ರಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಂಪೇಗೌಡರು ಬೆಂಗಳೂರು ಕಟ್ಟಿದ ರೂವಾರಿ. ಈ ಜಯಂತಿ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗದೇ ಇಡೀ ಗ್ರಾಮವೇ ಹಬ್ಬದ ರೀತಿ ಆಚರಿಸುತ್ತಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ಕೆಂಪೇಗೌಡರ ಜಯಂತಿ ಆಚರಿಸುತ್ತಿದ್ದು, ಇಂತಹ ಕಾರ್ಯಕ್ರಮಕ್ಕೆ ಒಂದು ದಿನ ತ್ಯಾಗ ಮಾಡಬೇಕು ಎಂದರು.

ಮನುಷ್ಯ ತಪ್ಪು-ಒಪ್ಪುಗಳನ್ನು ಒಳಗೆ ಇಟ್ಟುಕೊಳ್ಳದೆ ಮುಕ್ತವಾಗಿ ಜನರ ಮದ್ಯ ಬೆರೆತು ಸಂಘಟಿಸಬೇಕು. ಇಂದಿನ ಮಕ್ಕಳಿಗೆ ಪೂರ್ವಜರ ಇತಿಹಾಸ ತಿಳಿಸಿದಾಗ ಆ ಮಕ್ಕಳು ದೇಶಕ್ಕೆ ಮಾದರಿಯಾಗಿ ಬೆಳೆಯುತ್ತಾರೆ. ಮಹನೀಯರ ಚರಿತ್ರೆಯನ್ನು ಇಂದಿನ ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು. ಭಾರತದಲ್ಲಿ ಇತಿಹಾಸ ಸೃಷ್ಠಿಸಿದ ಇಂತಹ ಮಹಾನ್‌ ವ್ಯಕ್ತಿಯ ಋಣ ತಿರೀಸಲು ಸಾಧ್ಯವಿಲ್ಲ. ಇಂದಿನ ಮಕ್ಕಳು ಅವರ ಆದರ್ಶ ಪಾಲಿಸಬೇಕು ಎಂದರು.

ಮುಖಂಡ ರಘು ಪ್ರಸಾದ್‌ ಮಾತನಾಡಿ, ರಾಜ್ಯದಲ್ಲಿ ನೆಲೆ ಕಂಡು ಕೊಳ್ಳಲು ಮುಖ್ಯ ರೂವಾರಿ ನಾಡಪ್ರಭು ಕೆಂಪೇಗೌಡರು. ಅವರು ಮಾಡಿದ ಅಭಿವೃದ್ಧಿ ಕೆಲಸಗಳಿಂದ ನಾವುಗಳೆಲ್ಲಾ ಜೀವನ ನಡೆಸುತ್ತಿದ್ದೇವೆ. ಅವರು ಕಟ್ಟಿ ಬೆಳಸಿದ ಬೆಂಗಳೂರು ಅದೇಷ್ಟೋ ಕುಟುಂಬಗಳಿಗೆ ಆಸರೆಯಾಗಿದೆ. ನಮ್ಮೂರ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.

ಮುಖಂಡ ನಂಜುಂಡರಾಧ್ಯ ಮಾತನಾಡಿ, ಬೆಂಗಳೂರಿಗೆ ಕಾರ್ಖಾನೆ, ಉದ್ಯೋಗ, ಕುಡಿವ ನೀರು, ರಸ್ತೆಗಳ ಅಭಿವೃದ್ಧಿಗೆ ಭದ್ರ ಭೂನಾದಿ ಹಾಕಿದ ಮಹಾನ್‌ ವ್ಯಕ್ತಿಯ ಕಾರ್ಯಕ್ರಮ ಅವೀಸ್ಮರಣೀಯ. ಇವರ ದೂರದೃಷ್ಠಿಯ ಕಾರ್ಯಕ್ರಮಗಳು ಹಳ್ಳಿಯಲ್ಲಿ ನಡೆದಾಗ ಅವರ ಬಗ್ಗೆ ಯುವ ಪೀಳಿಗೆ ತಿಳಿಯಲು ಸಾಧ್ಯವಿದೆ ಎಂದು ಹೇಳಿದರು.

ಜಯಂತಿ ಪ್ರಯುಕ್ತ ಗ್ರಾಮದ ಮಹಿಳೆಯರು ನೀಲಿ ಬಣ್ಣದ ವಸ್ತ್ರ ತೊಟ್ಟು ಪೂರ್ಣಕುಂಭ ಕಳಸ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮರವಣಿಗೆ ಮೂಲಕ ತೆರಳಿದರು. ಅನ್ನಸಂತಪ್ರಣೆ, ಪ್ರಸಾದ ವಿತರಿಸಲಾಯಿತು. ಮೆರವಣಿಗೆಯುದ್ದಕ್ಕೂ ತೊಗಲುಗೊಂಬೆ, ಡೊಳ್ಳು ಕುಣಿತ ನಡೆಯಿತು. ಒಕ್ಕಲಿಗರ ಸಂಘದ ಅಧ್ಯಕ್ಷ ಎನ್‌.ಡಿ.ವೆಂಕಟೇಶ್‌, ಮುಖಂಡರಾದ ನಾಗಭೂಷಣ್‌, ಪೋಸ್ಟ್‌ ಅಶ್ವತ್ಥ್‌, ರವಿಕುಮಾರ್‌, ರಾಘವೇಂದ್ರ, ನರಸಿಂಹರಾಜು, ರಘು ಪ್ರಸಾದ್‌, ಶ್ರೀನಿವಾಸಯ್ಯ, ರಂಗರಾಯಪ್ಪ, ಪ್ರಸನ್ನಕುಮಾರ್‌ ಇದ್ದರು.