ಸಾರಾಂಶ
ಸೋಮವಾರಪೇಟೆ- ಕೂತಿ- ಗಡಿಕಲ್ಲುವರೆಗಿನ ರಸ್ತೆ ಅಭಿವೃದ್ಧಿಗೆ ಈಗಾಗಲೇ 20 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಮುಂದಿನ ತಿಂಗಳು ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಮಂತರ್ ಗೌಡ ತಿಳಿಸಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಗ್ರಾಮಸ್ಥರು ಶಾಸಕ ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದರು.ಶಾಸಕರ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಸೋಮವಾರಪೇಟೆಯಿಂದ ಕೂತಿ ಮಾರ್ಗದ ರಸ್ತೆಯ ಅಗಲೀಕರಣ, ಸಿ. ಮತ್ತು ಡಿ. ಜಾಗದ ಸಮಸ್ಯೆ, ಬಸ್ ವ್ಯವಸ್ಥೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ಸೋಮವಾರಪೇಟೆ- ಕೂತಿ- ಗಡಿಕಲ್ಲುವರೆಗಿನ ರಸ್ತೆ ಅಭಿವೃದ್ಧಿಗೆ ಈಗಾಗಲೇ 20 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗಿದೆ. ಮುಂದಿನ ತಿಂಗಳು ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಮಂತರ್ ಗೌಡ ತಿಳಿಸಿದರು.ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ನಿವಾರಿಸಲು ಯಡೂರಿನಿಂದ ಪ್ರತ್ಯೇಕ ಫೀಡರ್ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಸಲ್ಲಿಸಿದರು. ರಾಮನಾಥಪುರದಿಂದ ಸೋಮವಾರಪೇಟೆ, ಕೂತಿ, ವನಗೂರು ಕೂಡುರಸ್ತೆ, ಸುಬ್ರಹ್ಮಣ್ಯ ಮಾರ್ಗದಲ್ಲಿ ನೂತನ ಬಸ್ ಸೇವೆ ಒದಗಿಸಬೇಕು. ಸಿ ಮತ್ತು ಡಿ ಜಾಗದ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದರು.
ಸಿ. ಮತ್ತು ಡಿ. ಲ್ಯಾಂಡ್ ಸಮಸ್ಯೆ ಬಹೆಗರಿಸಲು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ಅಂತೆಯೇ ಫಾರಂ ನಂಬರ್ 53 ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಮಿತಿ ರಚನೆಯಾದ ತಕ್ಷಣ ವಿಲೇವಾರಿ ಮಾಡಲಾಗುವುದು. ಬಸ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ಸಮಸ್ಯೆ ನಿವಾರಣೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಮಂತರ್ ಗೌಡ ಹೇಳಿದರು.ಪ್ರಮುಖರಾದ ಐ.ಎಚ್. ನಿಂಗಪ್ಪ, ಬಸವರಾಜ್, ಎಡದಂಟೆ ಲವ, ಕೂತಿ ಗ್ರಾಮಾಧ್ಯಕ್ಷ ಹೆಚ್.ಎಂ. ಜಯರಾಮ್, ಮಾಜೀ ಅಧ್ಯಕ್ಷ ಎಚ್.ಡಿ. ಮೋಹನ್, ಕೆ.ಟಿ. ಜೋಯಪ್ಪ, ಸುರೇಶ್ ಚಕ್ರವರ್ತಿ ಸೇರಿದಂತೆ ಗ್ರಾಮಸ್ಥರು ಇದ್ದರು.