ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ: ದಾಕ್ಷಾಯಿಣಿಬಾಯಿ

| Published : Jul 08 2024, 12:33 AM IST

ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ: ದಾಕ್ಷಾಯಿಣಿಬಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರದ 3ನೇ ಅಂಗನವಾಡಿಯಲ್ಲಿ ನಡೆದ ಸಮಾರಂಭದಲ್ಲಿ ಶಿಶು ಅಭಿವೃದ್ಧಿ ಇಲಾಖೆ ನ.ರಾ.ಪುರ ವಲಯ ಮೇಲ್ವೀಚಾರಕಿ ದಾಕ್ಷಾಯಿಣಿಬಾಯಿ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.

ಕನ್ನಡಪ್ರಭವಾರ್ತೆ ನರಸಿಂಹರಾಜಪುರ

ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಮೇಲ್ವೀಚಾರಕಿಯಾಗಿ 4 ವರ್ಷದ ನನ್ನ ಸೇವಾ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಸಿಕ್ಕಿದೆ ಎಂದು ವರ್ಗಾವಣೆಗೊಂಡಿರುವ ಶಿಶು ಅಭಿವೃದ್ಧಿ ಇಲಾಖೆ ನ.ರಾ.ಪುರ ವಲಯ ಮೇಲ್ವೀಚಾರಕಿ ದಾಕ್ಷಾಯಿಣಿಬಾಯಿ ತಿಳಿಸಿದರು.

ಪಟ್ಟಣದ 3 ನೇ ಅಂಗನವಾಡಿಯಲ್ಲಿ ನಡೆದ ಸಮಾರಂಭದಲ್ಲಿ ತಮಗೆ ನೀಡಿದ ಬೀಳ್ಕೊಡುಗೆ ಸನ್ಮಾನ ಸ್ವೀಕಾರ ಮಾಡಿ ಮಾತನಾಡಿ, ನಾನು ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಂತರ ಭಡ್ತಿ ಹೊಂದಿ ಮೇಲ್ವಿಚಾರಕಳಾಗಿ ಕೆಲಸ ಮಾಡುತ್ತಿದ್ದೇನೆ. ಅಂಗನವಾಡಿ ಕಾರ್ಯಕರ್ತೆಯರ ಕಷ್ಟ, ಸುಖಗಳ ಬಗ್ಗೆ ನನಗೆ ಅರಿವಿದೆ. 4 ವರ್ಷಗಳ ನನ್ನ ಸೇವಾ ಅವಧಿಯಲ್ಲಿ ನನ್ನ ಸಹೋದ್ಯೋಗಿಗಳು, ಅಂಗನವಾಡಿ ಕಾರ್ಯಕರ್ತೆಯರು ತುಂಬಾ ಸಹಕಾರ ನೀಡಿದ್ದಾರೆ. ಮುಂದೆ ಬರುವ ಮೇಲ್ವಿಚಾರಕರಿಗೂ ಇದೇ ರೀತಿ ಸಹಕಾರ ನೀಡಬೇಕು. ನನ್ನ ಮುಂದಿನ ಸೇವಾ ಅವಧಿಯಲ್ಲೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.

ಸಿಂಸೆ ಅಂಗನವಾಡಿ ಕಾರ್ಯಕರ್ತೆ ರತ್ನಾ ಮಾತನಾಡಿ, ವರ್ಗಾವಣೆ ಎಂಬುದು ಸರ್ಕಾರಿ ನೌಕರರರಿಗೆ ಸಹಜ ಪ್ರಕ್ರಿಯೆ. ಕಳೆದ 4 ವರ್ಷಗಳಿಂದ ನ.ರಾ.ಪುರ ವಲಯ ಮೇಲ್ವೀಚಾರಕಿಯಾದ ದಾಕ್ಷಾಯಿಣಿಬಾಯಿ ಅವರು ಎಲ್ಲರನ್ನೂ ಸರಿದೂಗಿಸಿಕೊಂಡು ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ಷ್ಮವಾಗಿ ಸಲಹೆ ನೀಡುತ್ತಿದ್ದರು. ಅವರ ಜೊತೆ ಕೆಲಸ ಮಾಡಿದ ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ ಖುಷಿ ತಂದಿದೆ. ಅವರು ತರೀಕೆರೆಗೆ ವರ್ಗಾವಣೆಗೊಂಡಿದ್ದು ಅಲ್ಲೂ ತಮ್ಮ ಸೇವೆ ಇದೇ ರೀತಿ ಮುಂದುವರಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತೆಯರಾದ ಶಿವರತ್ನ, ಮಧು ಮಾಲತಿ, ಕವಿತ, ಉಷಾ, ಶೃತಿ, ಗೀತಾ ಮುಂತಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ರತ್ನಮ್ಮ ಸ್ವಾಗತಿಸಿದರು. ಈ ಸಂದರ್ಭದಲ್ಲಿ ನ.ರಾ.ಪುರ ವಲಯದ 33 ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು.