ಸಾರಾಂಶ
ಕಾಲರಾ ತಡೆಗಟ್ಟಲು ಆರೋಗ್ಯ ಇಲಾಖೆಯಿಂದ 326 ಕುಡಿಯುವ ನೀರಿನ ಸಂಗ್ರಹಗಾರಗಳನ್ನು ಪರಿಶೀಲನೆ ನಡೆಸಲಾಗಿದೆ. 276 ಸಂಗ್ರಹಗಾರಗಳ ನೀರು ಯೋಗ್ಯವಾಗಿದ್ದು 51 ನೀರು ಸಂಗ್ರಹ ಘಟಕಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದ್ದು ಈ ಬಗ್ಗೆ ಅಗತ್ಯಕ್ರಮಕ್ಕೆ ಗ್ರಾಮ ಪಂಚಾಯ್ತಿಗಳಿಗೆ ಮಾಹಿತಿ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಎಲ್ಲ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಏಜೆನ್ಸಿಗಳು ಇಎಸ್‌ಐ, ಪಿಎಫ್ ಪಾವತಿಸುತ್ತಿದೆಯೇ ಎಂದು ಪರಿಶೀಲಿಸಬೇಕು. ನೌಕರರ ಇಎಸ್‌ಐ, ಪಿಎಫ್ ನಿರ್ವಹಿಸದೇ ಎಜೆನ್ಸಿಗಳು ಜಿಲ್ಲೆಯಲ್ಲಿ 4-5 ಕೋಟಿಯಷ್ಟು ವಂಚನೆ ಮಾಡಿವೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಜಿಲ್ಲಾ ಪಂಚಾಯ್ತಿ ಡಿಆರ್‌ಡಿಎ ಯೋಜನಾ ನಿರ್ದೇಶಕರು ಹಾಗೂ ತಾಲೂಕು ಪಂಚಾಯ್ತಿ ಆಡಳಿತಾಧಿಕಾರಿ ಕುಮಲಯ್ಯ ಸೂಚಿಸಿದರು.ನಗರದ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗುರುಮಠಕಲ್ ಹೊಸ ತಾಲೂಕು ಆಗಿರುವುದರಿಂದ ಅಧಿಕಾರಿಗಳಿಗೆ ಉತ್ತಮ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಹಾಗಾಗಿ ಸರಿಯಾಗಿ ಕಾರ್ಯನಿರ್ವಹಿಸಿ ಸಮಗ್ರ ಪ್ರಗತಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಗುರುಮಠಕಲ್ ವ್ಯಾಪ್ತಿಯಲ್ಲಿ ಆನೆಕಾಲು ರೋಗ, ಕ್ಷಯ ಹಾಗೂ ಕುಷ್ಠ ರೋಗದ ಕುರಿತು ಗ್ರಾಮ ಸಭೆಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಡೆಂಘೀ, ಮಲೇರಿಯಾ ಇತರೆ ಸಾಂಕ್ರಾಮಿಗಳ ರೋಗಗಳ ಹರಡದಂತೆ ಮುನ್ನೆಚ್ಚರಿಕೆ ಕ್ರಮವಹಿಸಲು ತಿಳಿಸಿದರು.ಸಭೆಯಲ್ಲಿ ತಾಲೂಕಿನಲ್ಲಿ ಸುಮಾರು 65 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ ಎಂದು ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಮಾಹಿತಿ ನೀಡಿದರು.
ಈ ವೇಳೆ ಕಟ್ಟಡ ನಿರ್ಮಾಣ ಕಾಮಗಾರಿಗಳ ಸ್ಥಿತಿಗತಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. 2021-22ರಲ್ಲಿ ಕೆಲವು ಕಡೆ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ ಆದರೇ ಇನ್ನು ಕಾಮಗಾರಿ ಆರಂಭವಾಗಿಲ್ಲ. ಇದಕ್ಕೆ ಸಂಬಂಧಿಸಿ ಅಧಿಕಾರಿಗಳು ಕಾರಣದೊಂದಿಗೆ ಅನುದಾನ ಹಿಂತುರುಗಿಸಬೇಕು ಇಲ್ಲವೇ ಕಾಮಗಾರಿ ಮಾಡಬೇಕು. ಒಂದು ವಾರದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಿವರ ಸಲ್ಲಿಸಲು ಸೂಚನೆ ನೀಡಿದರು.ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸೂಕ್ತ ನಿರ್ವಹಣೆಯಾಗಬೇಕು. ಕುಡಿಯುವ ನೀರು ಸರಬರಾಜು ಇಲಾಖೆಯಿಂದ ಗ್ರಾಮ ಪಂಚಾಯ್ತಿ ನಿರ್ವಹಣೆಗೆ ಒಪ್ಪಿಸಬೇಕು. ಇಲ್ಲವೇ ಸಮರ್ಪಕವಾಗಿ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಸೂಚಿಸಿದರು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಕುಮಾರ, ಯೋಜನಾಧಿಕಾರಿ ಭಾರತಿ ಸಜ್ಜನ್, ರಾಮಚಂದ್ರ ಬಸೂದೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.