ಸಾರಾಂಶ
-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹೇಳಿಕೆ । ಪಿಸಿಪಿಎನ್ ಡಿಟಿ ಸಲಹಾ ಸಮಿತಿ ಪುನರಚನೆ
ಕನ್ನಡಪ್ರಭವಾರ್ತೆ, ಚಿತ್ರದುರ್ಗಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರುಪಾಯಿ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ಪಿ.ಸೇಣುಪ್ರಸಾದ್ ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಲಹಾ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ 1994ರ ಪ್ರಕಾರ ಭ್ರೂಣ ಲಿಂಗಪತ್ತೆಯು ಶಿಕ್ಷಾರ್ಹ ಅಪರಾಧ. ಹೆಣ್ಣು ಭ್ರೂಣ ಹತ್ಯೆ ಕುರಿತು ಮಾಹಿತಿ ನೀಡಿ ಯಶಸ್ವಿಗೊಂಡ ಗುಪ್ತಕಾರ್ಯಾಚರಣೆಯ ಮಾಹಿತಿದಾರರಿಗೆ ಈ ಮೊದಲು ನೀಡಲಾಗುತ್ತಿದ್ದ ಐವತ್ತು ಸಾವಿರ ರುಪಾಯಿ ಮೊತ್ತವನ್ನು ಲಕ್ಷ ರು. ಗೆ ಏರಿಸಲಾಗಿದೆ. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.ಗರ್ಭಿಣಿಯರ ಸ್ಕ್ಯಾನಿಂಗ್ ವೇಳೆ ಸ್ಕ್ಯಾನಿಂಗ್ ಕೊಠಡಿಯೊಳಗೆ ಗರ್ಭಿಣಿಯರ ಕುಟುಂಬ ವರ್ಗ ಹಾಗೂ ಇತರೆ ಸಹಾಯಕರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರ ಜೊತೆಗೆ ಸ್ಕ್ಯಾನಿಂಗ್ ಯಂತ್ರಕ್ಕೆ ಹೆಚ್ಚುವರಿಯಾಗಿ ಕಂಪ್ಯೂಟರ್ ಮಾನಿಟರ್ ಅಳವಡಿಸುವುದನ್ನು ಸಹ ನಿಷೇಧಿಸಲಾಗಿದೆ. ಈ ಬಗ್ಗೆ ಮಾಹಿತಿ ಫಲಕವನ್ನು ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಪ್ರದರ್ಶಿಸಬೇಕು. ಈ ಅಂಶಗಳನ್ನು ಎಲ್ಲಾ ಸ್ಕ್ಯಾನಿಂಗ್ ಸೆಂಟರ್ ಗಳು ಪಾಲಿಸುವಂತೆ ಸಭೆ ಸೂಚಿಸಿತು.
ಪಿಸಿಪಿಎನ್ ಡಿಟಿ (ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರ ವಿಧಾನಗಳು, ಲಿಂಗ ಆಯ್ಕೆ ನಿಷೇಧ) ಕಾಯ್ದೆ ಅನುಸಾರ ಸಲಹಾ ಸಮಿತಿಯನ್ನು ಪುನರ್ ರಚಿಸಲಾಗಿದ್ದು, ಅಧ್ಯಕ್ಷರಾಗಿ ಚಿತ್ರದುರ್ಗದ ಖಾಸಗಿ ನರ್ಸಿಂಗ್ ಹೋಂನ ತಜ್ಞ ವೈದ್ಯೆ ಡಾ. ಸೌಮ್ಯ, ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಪ್ರಸಾದ್, ಸದಸ್ಯರುಗಳಾಗಿ, ಡಾ. ದೇವರಾಜು, ಡಾ.ಸತ್ಯನಾರಾಯಣ, ಕಾನೂನು ಸಲಹೆಗಾರರಾಗಿ ವಕೀಲ ಉಮೇಶ್, ಸರ್ಕಾರೇತರ ಸ್ವಯಂ ಸೇವಾ ಸಂಘದ ಮೀನಾಕ್ಷಿ, ಗಾಯಿತ್ರಿ ಶಿವರಾಂ, ಜಿ.ಎಸ್.ಗೌಡ ಸೇರಿದಂತೆ ಜಿಲ್ಲಾ ವಾರ್ತಾಧಿಕಾರಿ, ಸರ್ಕಾರಿ ಅಭಿಯೋಜಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಡಿಹೆಚ್ಒ ಮಾಹಿತಿ ನೀಡಿದರು.ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಮಾತೃತ್ವ ಮೆಟರ್‍ನಿಟಿ ಮತ್ತು ಫರ್ಟಿಲಿಟಿ ಸೆಂಟರ್ ಗೆ ಹೊಸ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ತೆರೆಯಲು ಅನುಮತಿ ನೀಡಲಾಯಿತು. ಹೊಸದುರ್ಗದ ಮಾರುತಿ ನರ್ಸಿಂಗ್ ಹೋಂ, ಚಿತ್ರದುರ್ಗ ನಗರದ ಗುರು ಕೊಟ್ಟೂರೇಶ್ವರ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ಗಳ ನೊಂದಣಿಗಳನ್ನು ಪುನಃ ನವೀಕರಿಸಲಾಯಿತು. ಹೊಸದುರ್ಗದ ಶಾರದಾ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್, ಹಿರಿಯೂರಿನ ಸಾಯಿ ಶ್ರೀನಿವಾಸ ಡಯೋಗ್ನೋಸಿಸ್ ಸೆಂಟರ್‌ಗಳ ವಿಳಾಸ ಬದಲಾವಣೆಗೆ ಅನುಮತಿ ನೀಡಲಾಯಿತು. ನಗರದ ಪಶುಸಂಗೋಪನೆ ಇಲಾಖೆಯ ಪಾಲಿ ಕ್ಲಿನಿಕ್, ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ನೋಂದಣಿ ಅವಧಿ ಮುಕ್ತಾಯವಾಗಿದ್ದು, ನವೀಕರಿಸಿಕೊಳ್ಳುವಂತೆ ಪಶು ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಹಿರಿಯೂರಿನ ಬಾಲಾಜಿ ನರ್ಸಿಂಗ್ ಹೋಂ ಮತ್ತು ಡೆಂಟಲ್ ಕ್ಲಿನಿಕ್ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ಅವರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ ಖರೀದಿಸಿದ ನಂತರ ಹೊಸದಾಗಿ ನೋಂದಣಿ ಮಾಡಬೇಕು. ಬಸವೇಶ್ವರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಪ್ರಾತ್ಯಕ್ಷಿತೆಗಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ ಬಳಸಲು ರಾಜ್ಯ ಮಟ್ಟದಲ್ಲಿ ಅನುಮತಿ ಪಡೆಯಲು ತಿಳಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು. ವೇದಾಂತ ಆಸ್ಪತ್ರೆಯವರು ಹೊಸದಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ಆರಂಭಿಸಲು ಸಲ್ಲಿಸಿದ ಅರ್ಜಿಯನ್ನು ತಜ್ಞ ರೇಡಿಯಾಲಜಿಸ್ಟ್ ಇಲ್ಲದ ಕಾರಣ ಅರ್ಜಿಯನ್ನು ತಿರಸ್ಕರಿಸಲಾಯಿತು.ಸಭೆಯಲ್ಲಿ ಪಿಸಿಪಿಎನ್‍ಡಿಟಿ ಸಲಹಾ ಸಮಿತಿ ಅಧ್ಯಕ್ಷೆ ಡಾ.ಎಸ್.ಸೌಮ್ಯ, ಸದಸ್ಯರಾದ ಡಾ.ಸತ್ಯನಾರಾಯಣ, ಎಂ.ಉಮೇಶ್, ಕೆ.ಪಿ.ಮೀನಾಕ್ಷಿ ಇದ್ದರು.
----------ಪೋಟೋ ಕ್ಯಾಪ್ಸನ್
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ನಡೆದ ಪಿಸಿಪಿಎನ್ ಡಿಟಿ ಸಲಹಾ ಸಮಿತಿ ಸಭೆಯಲ್ಲಿ ಡಿಹೆಚ್ಒ ಡಾ.ಜಿ.ಪಿ.ಸೇಣುಪ್ರಸಾದ್ ಮಾತನಾಡಿದರು.----------
ಫೋಟೋ ಫೈಲ್ ನೇಮ್- 7 ಸಿಟಿಡಿ1-