ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಶಿಕ್ಷಕರು ಮಕ್ಕಳಿಗೆ ಪಠ್ಯ ವಿಷಯಗಳ ಜೊತೆಯಲ್ಲೇ ಮಾನವೀಯ, ನೈತಿಕ ಮೌಲ್ಯಗಳನ್ನು ಕಲಿಸಿಸಬೇಕು ಎಂದು ಹುಲ್ಲೇಕೆರೆ ಬಸವೇಶ್ವರ ವಿದ್ಯಾವರ್ಧಕ ಸಂಘದ ನಿಕಟಪೂರ್ವ ಕಾರ್ಯದರ್ಶಿ ಎಚ್.ಎನ್.ಮಹದೇವಯ್ಯ ಹೇಳಿದರು. ತಾಲೂಕಿನ ದೊಂಬರನಹಳ್ಳಿ ಶ್ರೀಸೋಮೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾವಂತ ಮಕ್ಕಳಿಗೆ ಉಚಿತ ನೋಟ್ ಬುಕ್, ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಲಿತ ವಿದ್ಯೆ ಕೇವಲ ನಿಮ್ಮ ತುತ್ತಿನ ಚೀಲ ತುಂಬಿಸಲು ಮಾತ್ರ ಸೀಮಿತವಾಗದೆ ಸಮಾಜದಲ್ಲಿ ನೊಂದವರ, ಅಸಹಾಯಕರ, ಬಡವರ, ಕೂಲಿ ಕಾರ್ಮಿಕರ ಶ್ರಮಿಕರ ನೋವಿಗೆ ಧ್ವನಿಯಾಗಬೇಕು. ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಿಸುವವರ ಸಂಖ್ಯೆ ತುಂಬಾ ಕ್ಷೀಣಿಸುತ್ತಿದೆ. ಕನ್ನಡ ಶಾಲೆಗಳ ಉಳಿವಿಗೆ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಸರ್ಕಾರ ಕಳೆದ ೮ ವರ್ಷಗಳಿಂದ ಹೊಸ ನೇಮಕಾತಿಗೆ ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆ ಹಿನ್ನೆಡೆಯಾಗಿದೆ ಎಂದರು.ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹುಲ್ಲೇಕೆರೆ ಗ್ರಾಮದ ಸಮಾಜ ಸೇವಕ ಎಚ್.ಬಿ.ಗಂಗಾಧರಯ್ಯ ಉಚಿತ ನೋಟ್‌ಬುಕ್ ವಿತರಿಸಿದರು. ಹುಲ್ಲೇಕೆರೆ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ಬಿ.ಪ್ರಸನ್ನ, ಸೌಜನ್ಯ ಪ್ರಸನ್ನ, ಎಸ್‌ಡಿಎಂಸಿ ಅಧ್ಯಕ್ಷ ಎಚ್.ಬಿ.ರಂಗಸ್ವಾಮಿ, ಮುಖ್ಯ ಶಿಕ್ಷಕ ಬಿ.ಎಸ್.ಶಾಂತರಾಜು, ಭೋಜಣ್ಣ, ಸಿದ್ದಣ್ಣ, ಧನಂಜಯ್ಯ, ನಿವೃತ್ತ ಶಿಕ್ಷಕರಾದ ಎಸ್.ಆರ್.ವಿಜಯಕುಮಾರ್, ಡಿ.ಆರ್.ನರಸಿಂಹಮೂರ್ತಿ, ಶಿಕ್ಷಕರುಗಳಾದ ದೊಡ್ಡಮನೆ ಕೀರ್ತಿ, ವೈ.ಜಿ.ಕೃಷ್ಣ, ಡಾ.ಪಾಂಡುರಂಗಯ್ಯ, ನಾಗೇಶ್, ತಿಲೋತ್ತಮ ನಾಯಕ್, ರಮೇಶ್, ಅನಿಲ್, ರವಿ ಇದ್ದರು.