ಸಾರಾಂಶ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೮೯ ಕ್ಕಿಂತ ಹೆಚ್ಚು ಅಂಕ ಪಡೆದ ೧೭ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಪಡೆದ ೭ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಸನ್ಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಗ್ರಾಮೀಣ ಪ್ರದೇಶದ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳು ಶೇ.೮೯ ಕ್ಕೂ ಹೆಚ್ಚು ಅಂಕ ಪಡೆದು, ತಾಲೂಕಿನ ಜನತೆ ಗುರುತಿಸುವಂತಹ ಶಿಕ್ಷಣ ನೀಡಿ, ಅವರ ಮುಂದಿನ ಉನ್ನತ ಶಿಕ್ಷಣಕ್ಕೆ ಪೂರಕ ಬುನಾದಿ ಹಾಕಿ ಕೊಡುವಲ್ಲಿ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಬಿಇಒ ಸೋಮಲಿಂಗೇಗೌಡ ಅಭಿನಂದಿಸಿದರು.ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿಶಾಲೆ ಸಭಾಂಗಣದಲ್ಲಿ ನರಸೀಪುರ ದೊಡ್ಡಮನೆ ಸುಜನಾ ಚಾ. ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ,ಜುಬಿಲಿ ಎಜುಕೇಶನ್ ಟ್ರಸ್ಟ್ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಏಳು ವರ್ಷಗಳಿಂದ ತಾಲೂಕಿನ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಗುರುತಿಸಿ, ಉತ್ತೇಜಿಸುವ ಟ್ರಸ್ಟ್‌ಗಳ ಕಾರ್ಯ ಶ್ಲಾಘನೀಯವೆಂದರು.
ಹಾಸನ ಜಿಲ್ಲೆ ಕೆನರಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಲತಾ ಸರಸ್ಪತಿ ಮಾತನಾಡಿ,ಇಂದು ನಾವೆಲ್ಲ ಹಲವಾರು ಕ್ಷೇತ್ರದಲ್ಲಿ ಸಾಧಕರನ್ನು ಕಾಣಬಹುದಾಗಿದೆ, ಅಂತಹ ಸಾಧಕರಿಗೆ ಉತ್ತಮ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಿದ ಶಿಕ್ಷಕರ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲವೆಂದು ತಿಳಿಸಿದರು.ಕೆನರಾ ಬ್ಯಾಂಕ್ ಜುಬಿಲಿ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಕೆ.ಅನಂತರಾಮ್, ಟ್ರಸ್ಟ್ ಸದಸ್ಯರಾದ ಅನಂತಮೂರ್ತಿ ಹಾಗೂ ಎನ್.ಎಸ್.ಪ್ರಕಾಶ್ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೮೯ ಕ್ಕಿಂತ ಹೆಚ್ಚು ಅಂಕ ಪಡೆದ ೧೭ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಪಡೆದ ೭ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಸನ್ಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು.ಇಸಿಒ ಸುರೇಶ್ ನಾಯಕ್, ಟ್ರಸ್ಟ್ ಸದಸ್ಯೆ ಹಾಗೂ ನಿ. ಶಿಕ್ಷಕಿ ಶೈಲಜಾ, ನರಸಿಂಹಯ್ಯ, ಇತರರು ಇದ್ದರು.