ಪ್ರತಿಯೊಬ್ಬರಿಗೂ ಸರ್ಕಾರಿ ಯೋಜನೆಗಳ ಅರಿವು ಅವಶ್ಯ: ಡಾ.ಗಿರೀಶ

| Published : Jan 13 2025, 12:46 AM IST

ಸಾರಾಂಶ

ಸರ್ಕಾರ ಪ್ರಜೆಗಳ ರಕ್ಷಣೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅನೇಕ ಜನರಿಗೆ ಅದರ ಬಳಕೆಯ ವಿಧಾನ ಗೊತ್ತಿಲ್ಲ. ಅವುಗಳ ಅರಿವು ನೆರವು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ

ಕನ್ನಡಪ್ರಭ ವಾರ್ತೆ ಕೆರೂರ

ಸರ್ಕಾರ ಪ್ರಜೆಗಳ ರಕ್ಷಣೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅನೇಕ ಜನರಿಗೆ ಅದರ ಬಳಕೆಯ ವಿಧಾನ ಗೊತ್ತಿಲ್ಲ. ಅವುಗಳ ಅರಿವು ನೆರವು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದು ಬಾಗಲಕೋಟೆ ಬನಶಂಕರಿ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಡಾ.ಗಿರೀಶ ಮಾಸುರಕರ ಹೇಳಿದರು.

ಶನಿವಾರ ಕೆರೂರ ಸಮೀಪದ ಎಲ್‌.ಟಿ.1ರ ದುರ್ಗಾದೇವಿ ಗುಡಿಯಲ್ಲಿ ರೋಟರಿ ಸಂಸ್ಥೆ, ಸರ್ಚ್‌ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆ, ಇಸ್ಲಂ ವಿಜಂ ಫೌಂಡೇಶನ್‌ ಬಾಗಲಕೋಟೆ ಸಹಯೋಗದಲ್ಲಿ ಆಯೋಜಿಸಿದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಉಚಿತ ನೇತ್ರ ಚಿಕಿತ್ಸೆ ಅವಶ್ಯಕತೆ ಇರುವ ಫಲಾನುಭವಿಗಳಿಗೆ ಕನ್ನಡಕ ವಿತರಿಸಲಾಗುವುದು. ಶಸ್ತ್ರಚಿಕಿತ್ಸೆ ಅಗತ್ಯವಿರುವವರಿಗೆ ಫೌಂಡೇಶನದಿಂದ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು. ಫಲಾನುಭವಿಗಳು ಶಿಬಿರದ ಲಾಭ ಪಡೆಯಬೇಕು ಎಂದು ತಿಳಿಸಿದರು.

ಸರ್ಚ್‌ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ವೆಂಕಟೇಶ ಮುಖೆ ಮಾತನಾಡಿ, ಹಿಂದುಳಿದ ಸರ್ಕಾರಿ ಸೌಲಭ್ಯ ವಂಚಿತ ಗ್ರಾಮಗಳನ್ನು ಗುರುತಿಸುವ ಕಾರ್ಯ ಸಂಸ್ಥೆ ಮಾಡುತ್ತಿದೆ. ನರೇನೂರ ಎಲ್‌.ಟಿ.1 ಮತ್ತು 2 ಹಾಗೂ ಚಿಂಚಲಕಟ್ಟಿ ತಾಂಡ ಗುರುತಿಸಿದ್ದು ನೇತ್ರ ಸಮಸ್ಯೆಯಿರುವ 1500 ಜನರಿಗೆ ಚಿಕಿತ್ಸೆ ನೀಡಿ ಕನ್ನಡಕ ವಿತರಿಸಲಾಗಿದೆ. ಮುಂಬರುವ ದಿನಗಳಲ್ಲಿ ಅನೇಕ ಗ್ರಾಮಗಳನ್ನು ಗುರುತಿಸುವ ಕಾರ್ಯನಡೆದಿದೆ. ರಾಜ್ಯದ 8 ಜಿಲ್ಲೆಗಳಲ್ಲಿ 1 ರಿಂದ 10ನೇ ತರಗತಿ ಮಕ್ಕಳಿಗೆ ಉಚಿತ ತಪಾಸಣೆ ಮಾಡಿ ಉಚಿತ ಕನ್ನಡಕ ವಿತರಿಸುವ ಕಾರ್ಯವನ್ನು ಇಸ್ಲಂ ವಿಜಂ ಪೌಂಡೇಶನ್‌ ಮಾಡುತ್ತಿದೆ. ಈಗ ಯಾದಗಿರಿ ಜಿಲ್ಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ನಮ್ಮ ಸಂಸ್ಥೆಗಳು ನಿರಪೇಕ್ಷೆಯಿಂದ ಜನರ ಸೇವೆ ಮಾಡುತ್ತಿದ್ದು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಸಂತೋಷ ನಾವಲಗಿ, ಸಹಾಯಕ ನಿರ್ದೇಶಕಿ ಮಂಜುಳಾ ಮುಖೆ, ಸಚೀನ ಸೇಡಂಕರ, ಸಂತೋಷ ಮುರನಾಳ, ಮಲ್ಲಿಕಾರ್ಜುನ ಹದ್ಲಿ, ಮಲ್ಲಿನಾಥ ಹಿರೇಮಠ ಮೊದಲಾದವರಿದ್ದರು.