ಸಾರಾಂಶ
ಮುಳಗುಂದ: ನಿತ್ಯ ಬದುಕಿನಲ್ಲಿ ಸಾಮಾನ್ಯ ಕಾನೂನುಗಳ ಬಳಕೆ ಇದ್ದು, ಅವುಗಳ ಬಗ್ಗೆ ಪ್ರತಿಯೊಬ್ಬ ನಾಗರಿಕನು ತಿಳಿದು, ಅರಿತುಕೊಂಡು ನಡೆಯಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಹೇಳಿದರು.ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪಪಂ ಹಾಗೂ ಪಟ್ಟಣ ಮಾರಾಟ ಸಮಿತಿ ಸಹಯೋಗದಲ್ಲಿ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬೈಕ್, ವಾಹನಗಳ ಚಾಲನೆ ಮಾಡುವವರು ಕಡ್ಡಾಯವಾಗಿ ಲೈಸೆನ್ಸ್ ಹೊಂದಬೇಕು, ವಾಹನಗಳಿಗೆ ವಿಮಾ ಮತ್ತು ರಜಿಸ್ಟರ್ ತಪ್ಪದೆ ಮಾಡಿಸಿರಬೇಕು. ಇನ್ನೂ ಸಾಲ ಪಡೆಯುವಾಗ ಚೆಕ್ ಕೊಡುವವರು ಜಾಗೃತಿ ವಹಿಸಿ ವ್ಯವಹರಿಸುವದು ಮುಖ್ಯವಾಗಿದೆ. ಬಾಲ್ಯ ವಿವಾಹವು ಕಾನೂನಿಗೆ ವಿರುದ್ಧ ಎಂದು ತಿಳಿದಿದ್ದರೂ ಸಹ ಕೆಲವು ಬಾಲ್ಯ ವಿವಾಹ ಮಾಡಲು ಮುಂದಾಗುತ್ತಾರೆ, ಇದರಿಂದ ಕಾನೂನು ಕ್ರಮಕ್ಕೆ ಒಳಗಾಗುವುದಲ್ಲದೆ ಮಕ್ಕಳ ಭವಿಷ್ಯವನ್ನ ಹಾಳು ಮಾಡುತ್ತಾರೆ. 2015ರಲ್ಲಿ ಕರ್ನಾಟಕದಲ್ಲಿ ಬಾಲ್ಯ ವಿವಾಹ ಕಾಯ್ದೆಗೆ ತಿದ್ದುಪಡಿ ತಂದು ಮತ್ತಷ್ಟು ಕಠಿಣಗೊಳಿಸಿದೆ. ಹೀಗಾಗಿ ಸಾಮಾನ್ಯ ಜನರು ಕಾನೂನು ತಿಳಿದುಕೊಂಡು ನಡೆಯಬೇಕು ಎಂದರು.
ವಕೀಲ ಎನ್.ಬಿ. ನದಾಫ್ ಮಾತನಾಡಿ, 2014ರಲ್ಲಿ ಸರ್ಕಾರವು ಬೀದಿ ಬದಿ ವ್ಯಾಪಾರಿಗಳಿಗೆ ಜೀವನೋಪಾಯ ಸಂರಕ್ಷಣೆ ಕಾಯ್ದೆ ಜಾರಿಗೆ ತಂದಿದೆ. ಅದರಲ್ಲಿ ಅವರ ಹಕ್ಕು ಮತ್ತು ಕರ್ತವ್ಯಗಳನ್ನ ಸ್ಪಷ್ಟವಾಗಿ ತಿಳಿಸಿದೆ. ಬೀದಿ ಬದಿ ವ್ಯಾಪಾರಿಗಳು ತಮ್ಮ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳಬೇಕು. ಅದೆ ರೀತಿ ತಮ್ಮ ಕರ್ತವ್ಯಗಳನ್ನು ಸಹ ಪಾಲನೆ ಮಾಡುವದು ಮುಖ್ಯವಾಗಿದೆ. ಬೀದಿ ಬದಿ ವ್ಯಾಪಾರಿಗಳು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.ಈ ವೇಳೆ ಪಪಂ ಸದಸ್ಯರಾದ ಕೆ.ಎಲ್. ಕರೇಗೌಡ್ರ, ಮಹಾದೇವಪ್ಪ ಗಡಾದ, ಬಸವರಾಜ ಹಾರೋಗೇರಿ, ಉಮಾ ಮಟ್ಟಿ, ನೀಲಮ್ಮ ಅಸುಂಡಿ, ಮಲ್ಲಪ್ಪ ಚವ್ಹಾಣ, ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಸಮುದಾಯ ಸಂಘಟನಾಧಿಕಾರಿ ವಾಣಿಶ್ರೀ ನಿರಂಜನ, ಬೀದಿಬದಿ ವ್ಯಾಪಾರ ಸಮಿತಿ ಸದಸ್ಯರಾದ ಭೀಮಪ್ಪ ಕೋಳಿ, ಮಹಾಂತವ್ವ ಭಜಂತ್ರಿ, ದಾದಾಖಲಂದ ಮುಜಾವರ, ಜಗದೀಶ ಸಿದ್ದನಗೌಡ್ರ, ಮಾಬೂಸಾಬ ಅಬ್ಬುನವರ, ಕಾಳಿಂಗಪ್ಪ ಇಟಗಿ, ಆನಂದ ಜೈನರ, ಸುಜಾತ ಮುಳಗುಂದ, ರತ್ನವ್ವ ಭಜಂತ್ರಿ ಮೊದಲಾದವರು ಇದ್ದರು.