ಸಾರಾಂಶ
ಅಂತಾರಾಷ್ಟ್ರೀಯ ಸಾಕ್ಷರತಾ ದಿನ । ಸಾಕ್ಷರತಾ ಧ್ವಜಾರೋಹಣ, ಸಾಕ್ಷರತಾ ಪ್ರಮಾಣವಚನ
ಕನ್ನಡಪ್ರಭ ವಾರ್ತೆ ಹಾಸನಅಕ್ಷರ ಕಲಿಸುವ ಕೆಲಸವನ್ನು ಸರ್ಕಾರದ ಇಲಾಖೆ ಮಾಡುವುದರ ಜತೆಗೆ ಸಂಘಟನೆಗಳು, ಎಲ್ಲಾ ಸಂಘ ಸಂಸ್ಥೆಗಳು ಕೈಜೋಡಿಸಿ ಅಕ್ಷರ ಕಲಿತವರು ಕಲಿಯದವರಿಗೆ ಕಲಿಸೋಣ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ವಾರ್ತಾ ಭವನದ ಆವರಣದಲ್ಲಿ ಲೋಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಸಾಕ್ಷರತಾ ಸಮಿತಿ ಜಂಟಿಯಾಗಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಕಾರ್ಯಕ್ರಮದಲ್ಲಿ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ ಹಾಗೂ ಸಾಕ್ಷರತಾ ಪ್ರಮಾಣವಚನ ಬೋಧಿಸಿ ಮಾತನಾಡಿದರು.ನಮ್ಮ ಜಿಲ್ಲೆಯಲ್ಲಿ ಇನ್ನು ಕೂಡ ಯಾರು ಅನಕ್ಷರಸ್ಥರಿದ್ದಾರೆ ಅವರನ್ನು ಗುರುತಿಸುವ ಕಾರ್ಯ ಈಗ ಪ್ರಾರಂಭವಾಗಲಿದೆ. ಈ ಬಗ್ಗೆ ತಯಾರಿಗೆ ಸಭೆಗಳು ನಡೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ೭೯ ರಿಂದ ೮೦ ರಷ್ಟು ಅಂದಾಜು ಮಾಡಲಾಗಿದೆ. ರಾಜ್ಯದಲ್ಲೂ ಕೂಡ ಶೇಕಡ ೮೦ ಪರ್ಸೆಂಟ್ ಇರಬಹುದು. ಈ ಜಿಲ್ಲೆಯಲ್ಲಿ ಯಾರು ಅನಕ್ಷರಸ್ಥರು ಇದ್ದಾರೆ ಅವರಿಗೆ ಅಕ್ಷರ ಕಲಿಸುವ ಕೆಲಸವನ್ನು ಸರ್ಕಾರದಿಂದ ಇಲಾಖೆ ಮಾಡುವುದರ ಜತೆಗೆ ಸಂಘಟನೆಗಳು, ಎಲ್ಲಾ ಸಂಘ ಸಂಸ್ಥೆಗಳು ಕೈಜೋಡಿಸಿ ಅಕ್ಷರ ಕಲಿತವರಿಗೆ ಕಲಿಯದವರಿಗೆ ಕಲಿಸೋಣ ಎಂದು ಈ ಮೂಲಕ ಪ್ರಮಾಣವನ್ನು ಕೂಡ ಮಾಡಲಾಗಿದೆ ಎಂದು ಹೇಳಿದರು.
ಎಲ್ಲರೂ ಕಟಿಬದ್ಧರಾಗಿ ಯಾರು ಅಕ್ಷರವನ್ನು ಇನ್ನೂ ಕಲಿತಿಲ್ಲ ಎಂದು ಗುರುತಿಸಿ. ಅಕ್ಷರ ತಿಳಿದವರಲ್ಲಿ ತಿಳುವಳಿಕೆ ಇದೆ. ಅಕ್ಷರ ಕಲಿಯದವರಲ್ಲಿ ಇನ್ನು ಕೂಡ ಮೂಢನಂಬಿಕೆಗಳು, ಅಂಧಕಾರ, ಕಂದಾಚರಣೆ ಇವೆಲ್ಲಾ ಇರುತ್ತದೆ. ಇವನ್ನೆಲ್ಲಾ ಹೋಗಲಾಡಿಸುವುದಕ್ಕೆ ನಾವು ಅಕ್ಷರ ಕಲಿಸಬೇಕು ಎಂದು ಕಿವಿಮಾತು ಹೇಳಿದರು.ಪ್ರಸ್ತುತ ಜನಾಂಗ ಎಲ್ಲಾ ಕಲಿಯುತ್ತಿದೆ. ಆದರೆ ಇಷ್ಟು ಮಾತ್ರ ಸಾಕಾಗುವುದಿಲ್ಲ. ಅಕ್ಷರ ಎಂದರೆ ಧೈರ್ಯ, ದೃಢತೆ, ಬದ್ಧತೆ ಮತ್ತು ಪ್ರಾಮಾಣಿಕತೆಗೆ ಅದು ಪ್ರತೀಕವಾಗಿದೆ. ಅಕ್ಷರ ಕಲಿತಿದ್ದರೆ ಒಳ್ಳೆಯ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು. ನಮ್ಮ ಹಾಸನ ಜಿಲ್ಲೆಯಲ್ಲಿ ಇನ್ನೂ ಯಾರು ಅನಕ್ಷರಸ್ಥರಾಗಿದ್ದಾರೆ ಅವರಿಗೆ ನಾವು ಕಲಿಸುವ ಪ್ರಯತ್ನ ಮಾಡೋಣ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಮಾತನಾಡಿ, ರಾಜ್ಯದಲ್ಲಿ ಒಟ್ಟಾರೆ ೭೭.೨೭ ಪರ್ಸೇಂಟ್ ಸಾಕ್ಷರತೆಯನು ಹೊಂದಿದೆ. ೧೯೭೮-೭೯ ರಲ್ಲಿ ಒಂದು ಸಾಕ್ಷರತಾ ಆಂದೋಲನ ಪ್ರಾರಂಭವಾಗಿದ್ದು, ಈ ವರ್ಷ ನಾವು ೩೦ ಸಾವಿರ ಜನರಿಗೆ ಹಾಸನ ಜಿಲ್ಲೆಯಲ್ಲಿ ಸಾಕ್ಷರತೆಯನ್ನು ಅನುಕೂಲ ಮಾಡಿಕೊಟ್ಟಿದ್ದೇವೆ. ಅವರೆಲ್ಲಾ ಸಾಕ್ಷರರಾಗಿದ್ದಾರೆ. ಗ್ರಾಮೀಣ ಪ್ರದೇಶದ ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರು ೨೨೩ ಜನರನ್ನು ಅಕ್ಷರ ಕಲಿಯುವುದಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದರು.ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಸಾಕ್ಷರತೆಯ ಹಾಡನ್ನು ಹಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕಿ ಮೀನಾಕ್ಷಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ, ಎಸ್.ಎಸ್. ಪಾಷಾ, ಶಬ್ಬೀರ್ ಅಹಮದ್, ಬಿ.ಟಿ. ಮಾನವ ಸೇರಿ ಇತರರು ಹಾಜರಿದ್ದರು.