ಸಾರಾಂಶ
ಮುಂಡರಗಿ: ಪ್ರತಿಯೊಬ್ಬ ವ್ಯಕ್ತಿ ಆರೋಗ್ಯವಾಗಿರಬೇಕಾದರೆ ಕ್ರೀಡೆ ಅತ್ಯಂತ ಅವಶ್ಯ. ಹೀಗಾಗಿ ಪ್ರತಿಯೊಬ್ಬರೂ ನಿತ್ಯ ಒಂದು ಗಂಟೆಯಾದರೂ ಕ್ರೀಡೆಯಲ್ಲಿ ತೊಡಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.
ಮಂಗಳವಾರ ತಾಲೂಕು ಅನ್ನದಾನೀಶ್ವರ ಕ್ರೀಡಾಂಗಣದಲ್ಲಿ ಜಿಪಂ, ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಕ್ರೀಡೆಗಳು ಮಕ್ಕಳನ್ನು ಇನ್ನಷ್ಟು ಕ್ರಿಯಾಶೀಲರನ್ನಾಗಿ ಮಾಡುತ್ತವೆ. ಈಗಾಗಲೇ ತಾಲೂಕಿನ ಜಾಲವಾಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ವಾಲಿಬಾಲ್ ಪಂದ್ಯಾವಳಿಯಲ್ಲಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದೇ ರೀತಿ ಪಟ್ಟಣದ ವಿ.ಜಿ. ಲಿಂಬಿಕಾಯಿ ಶಾಲೆ, ಎಸ್.ಎಫ್.ಎಸ್. ಶಾಲೆ, ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಚೆಸ್ ಪಂದ್ಯದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆ ಎಲ್ಲ ಮಕ್ಕಳಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಅಭಿನಂದಿಸುವೆ. ದೈಹಿಕ ಶಿಕ್ಷಣ ಶಿಕ್ಷಕರು ಪ್ರಾಮಾಣಿಕವಾದ ನಿರ್ಣಯಗಳನ್ನು ಕೊಡುವ ಮೂಲಕ ಸೂಕ್ತವಾದ ನಿರ್ಧಾರ ಪ್ರಕಟಿಸಬೇಕು ಎಂದರು.
ಸರ್ಕಾರ ಪಟ್ಟಣಕ್ಕೆ ಸರ್ಕಾರಿ ಪ್ರೌಢಶಾಲೆ ಬೇಕೆನ್ನುವ ಬಹುವರ್ಷಗಳ ಮನವಿಗೆ ಸ್ಪಂದಿಸಿ ಎರಡು ಶಾಲೆಗಳನ್ನು ಮಂಜೂರು ಮಾಡಿದ್ದು, ಅದರಲ್ಲಿ ಶಾಸಕರ ಮಾದರಿ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ ಮಂಜೂರಾದ ಶಾಲೆಗೆ ಹಿಂದೆ ಶಾಲಾ ಕಟ್ಟಡಕ್ಕೆ ಶ್ರೀಮಠವು ಜಮೀನು ದಾನ ನೀಡಿದ ಹಿನ್ನೆಲೆ ಅನ್ನದಾನೀಶ್ವರ ಸರ್ಕಾರಿ ಪ್ರೌಢಶಾಲೆ ಎಂದು ನಾಮಕರಣ ಮಾಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರಿ ಆಸ್ಪತ್ರೆಗೂ ಜಮೀನು ದಾನ ಮಾಡಿರುವುದರಿಂದ ಅದಕ್ಕೂ ಶ್ರೀಗಳ ಹೆಸರಿಡಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿಲಾಗಿದೆ ಎಂದರು.ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳ ಶಾರೀರಿಕ ಆರೋಗ್ಯ ಉತ್ತಮವಾಗಿರಲು ಆಟ, ವ್ಯಾಯಾಮ ಹಾಗೂ ಯೋಗ ಅತ್ಯವಶ್ಯ. ಪ್ರಧಾನಿ ನರೇಂದ್ರ ಮೋದಿಯವರು ಖೇಲೋ ಇಂಡಿಯಾದ ಮೂಲಕ ಅನೇಕ ಕ್ರೀಡಾಪಟುಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಶ್ರೀಮಠವು 1918ರಲ್ಲಿ ಕನ್ನಡ ಶಾಲೆ ಕಟ್ಟಡಕ್ಕೆ 1 ಎಕರೆ, ನಂತರ ಸರ್ಕಾರಿ ಆಸ್ಪತ್ರೆ ಕಟ್ಟಡಕ್ಕೆ ಮೂರು ಎಕರೆ, ಕಸಾಪ ಭವನ, ವಿಜ್ಞಾನ ಭವನ, ತಾಲೂಕು ಕ್ರೀಡಾಂಗಣ, ರುದ್ರಭೂಮಿ ಸೇರಿ ಸುಮಾರು ₹3 ಕೋಟಿ ಕಿಮ್ಮತ್ತಿನ ಜಮೀನು ದಾನ ಮಾಡಿದ್ದು, ಶಾಸಕರು ಸರ್ಕಾರಿ ಪ್ರೌಢಶಾಲೆಗೆ ಹೆಸರಿಡಲು ಶಿಫಾರಸು ಮಾಡಿರುವುದು ಖುಷಿ ತಂದಿದೆ ಎಂದರು.ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ಜ್ಯೋತಿ ಹಾನಗಲ್, ಪ್ರಹ್ಲಾದ ಹೊಸಮನಿ ವಿವಿಧ ಕ್ರೀಡಾಕೂಟಗಳನ್ನು ಉದ್ಘಾಟಿಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಆನಂದಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ, ಬಸವರಾಜ ಬಿಳಿಮಗ್ಗದ, ದೇವು ಹಡಪದ, ಯಲ್ಲಪ್ಪ ಗಣಾಚಾರಿ, ಅಶೋಕ ಚೂರಿ, ಪ್ರಭಾವತಿ ಬೆಳವಣಕಿಮಠ, ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ,ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಶಿವಕುಮಾರ ಸಜ್ಜನರ, ಎ.ಡಿ. ಬಂಡಿ, ಎಂ.ಎನ್. ಕುಕನೂರ, ಎಸ್.ಸಿ. ಹರ್ತಿ, ಎಲ್.ಬಿ. ಹುಡೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣೀಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈ.ಶಿ. ಜಿ.ಬಿ. ಗೊಲ್ಲರಟ್ಟಿ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))