ಪ್ರತಿಯೊಬ್ಬರೂ ಧ್ಯಾನ ಮತ್ತು ಯೋಗದ ಕಡೆಗೆ ಹೆಚ್ಚು ಒತ್ತು ನೀಡಬೇಕು: ಡಾ.ಡಿ. ನಟರಾಜು

| Published : Apr 25 2025, 11:50 PM IST

ಪ್ರತಿಯೊಬ್ಬರೂ ಧ್ಯಾನ ಮತ್ತು ಯೋಗದ ಕಡೆಗೆ ಹೆಚ್ಚು ಒತ್ತು ನೀಡಬೇಕು: ಡಾ.ಡಿ. ನಟರಾಜು
Share this Article
  • FB
  • TW
  • Linkdin
  • Email

ಸಾರಾಂಶ

ನಾವು ನಮ್ಮ ಗುರಿ ಸಾಧಿಸುವ ಭರದಲ್ಲಿ ಎಡವಿ ಬೀಳುತ್ತಿದ್ದು, ಇದು ನಮ್ಮ ಜೀವನದ ಮೇಲೆ ನಂಬಲಸಾಧ್ಯವಾದ ಆಘಾತಕಾರಿ ಪರಿಣಾಮವನ್ನುಂಟು ಮಾಡುತ್ತಿದೆಯಾದ್ದರಿಂದ ಪ್ರತಿಯೊಬ್ಬ ನೌಕರರು ಉಲ್ಲಾಸದಾಯಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂಬುದು ನಮ್ಮ ಸಂಘದ ಅಭಿಲಾಷೆಯಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಒತ್ತಡದ ಕಾರ್ಯ ನಿರ್ವಣೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದ್ದು, ಪ್ರತಿಯೊಬ್ಬರೂ ಧ್ಯಾನ ಮತ್ತು ಯೋಗದ ಕಡೆಗೆ ಹೆಚ್ಚು ಒತ್ತು ನೀಡಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಮತ್ತು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಡಿ.ನಟರಾಜು ಹೇಳಿದರು.

ತಾಲೂಕು ಸರ್ಕಾರಿ ನೌಕರರ ಸಂಘ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಕೆ.ಆರ್.ನಗರ ಶಾಖೆಯ ಸಹಯೋಗದಲ್ಲಿ ತಾಲೂಕು ಸರ್ಕಾರಿ ನೌಕರರಿಗೆ ಏರ್ಪಡಿಸಿದ್ದ ಒತ್ತಡ ಮುಕ್ತ ಜೀವನ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಒತ್ತಡಯುಕ್ತ ಜೀವನವನ್ನು ನಾವು ನಮ್ಮ ಅರಿವಿಗೆ ಬಂದೋ ಬಾರದೆಯೋ ಅದನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದು, ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದು, ನಾಗಾಲೋಟದಿಂದ ಓಡುತ್ತಿರುವ ನಮ್ಮ ಜೀವನ ಇದಕ್ಕೆ ಕಾರಣವಾಗಿದ್ದು ಇದು ಚಿಂತಿಸಬೇಕಾದ ವಿಚಾರ ಎಂದರು.

ನಾವು ನಮ್ಮ ಗುರಿ ಸಾಧಿಸುವ ಭರದಲ್ಲಿ ಎಡವಿ ಬೀಳುತ್ತಿದ್ದು, ಇದು ನಮ್ಮ ಜೀವನದ ಮೇಲೆ ನಂಬಲಸಾಧ್ಯವಾದ ಆಘಾತಕಾರಿ ಪರಿಣಾಮವನ್ನುಂಟು ಮಾಡುತ್ತಿದೆಯಾದ್ದರಿಂದ ಪ್ರತಿಯೊಬ್ಬ ನೌಕರರು ಉಲ್ಲಾಸದಾಯಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂಬುದು ನಮ್ಮ ಸಂಘದ ಅಭಿಲಾಷೆಯಾಗಿದೆ ಎಂದರು.

ತಹಸೀಲ್ದಾರ್ ಜೆ. ಸುರೇಂದ್ರ ಮೂರ್ತಿ ಮಾತನಾಡಿ, ಒತ್ತಡ ಮುಕ್ತ ಜೀವನ ನಿರ್ವಹಣೆಗಾಗಿ ನಮ್ಮ ಪ್ರತಿನಿತ್ಯದ ಜೀವನಶೈಲಿಯನ್ನು ಬದಲಾಯಿಸಿ ಕೊಳ್ಳಬೇಕಲ್ಲದೆ, ಪ್ರತಿನಿತ್ಯ ಬೆಳಗ್ಗೆ 5ಕ್ಕೆ ಏಳುವ ಮೂಲಕ ಯೋಗ, ವ್ಯಾಯಾಮ, ಧ್ಯಾನ ಮತ್ತು ಆಟಗಳಿಗೆ ಅತಿ ಹೆಚ್ಚು ಒತ್ತು ನೀಡಿ ನಂತರ ನಮ್ಮ ಕೆಲಸದಲ್ಲಿ ತೊಡಗಿಸಿಕೊಂಡರೆ ಒತ್ತಡದಿಂದ ಪಾರಾಗಬಹುದು ಎಂದು ಸಲಹೆ ನೀಡಿದರು.

ಸಾಲಿಗ್ರಾಮ ತಾಲೂಕು ತಹಸೀಲ್ದಾರ್ ಎನ್.ಎಸ್. ನರಗುಂದ್, ತಾಪಂ ಇಓ ಎ.ಎನ್. ರವಿ, ಬಿಇಓ ಆರ್. ಕೃಷ್ಣಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಬಿ.ಕೆ. ರಂಗನಾಥ್ ಹಾಗೂ ಬಿ.ಕೆ. ಯೋಗೀಶ್ವರಿ ಮಾತನಾಡಿದರು.

ಬ್ರಹ್ಮಕುಮಾರಿ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕೆ.ಆರ್. ನಗರ ತಾಲೂಕು ಶಾಖೆಯ ರಾಜಯೋಗಿನಿ ಅಮೃತ ಅಕ್ಕ, ಸಿಡಿಪಿಓ ಅಣ್ಣಯ್ಯ, ಡಾ. ಅಶೋಕ್, ಡಾ. ಶಿವಶಂಕರ್, ಡಾ. ತೇಜಮಣಿ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಬಿ.ಜೆ. ಮಹೇಶ್, ಖಜಾಂಚಿ ಹರೀಶ್, ರಾಜ್ಯ ಪರಿಷತ್ ಸದಸ್ಯ ಯಶವಂತ ಕುಮಾರ್, ಗೌರವಾಧ್ಯಕ್ಷ ಶಂಕರೇಗೌಡ, ಗೌರವ ಸಲಹೆಗಾರ ರಾಜಶೇಖರ್, ಉಪಾಧ್ಯಕ್ಷರಾದ ರಮೇಶ್, ಶಶಿಧರ್, ಕಾನೂನು ಸಲಹೆಗಾರರಾದ ಡಾ. ಹರೀಶ್, ಶಶಿಕಾಂತ್, ಪದಾಧಿಕಾರಿಗಳಾದ ಎಸ್‌.ಎಂ. ಗಂಗಾಧರ್, ಸತೀಶ್ ಕುಮಾರ್, ಬಿ.ಎಲ್‌. ಮಹದೇವ್, ರವಿಕುಮಾರ್, ರಘು, ಪಾರ್ವತಿ, ಪೂರ್ಣಿಮಾ, ಶ್ರೀತುಳಸಿ ,ಜಯಲಕ್ಷ್ಮಿ, ಶಿಕ್ಷಣ ಇಲಾಖೆಯ ಅನುಪಾಲನಾಧಿಕಾರಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರು ಆರೋಗ್ಯ ಇಲಾಖೆ, ಇನ್ನಿತರ ಇಲಾಖೆಯ ನೂರಾರು ನೌಕರರು ಶಿಬಿರದಲ್ಲಿ ಭಾಗವಹಿಸಿದ್ದರು.