ಸಾರಾಂಶ
ಮುಂಡಗೋಡ: ದೇವರು ಉಚಿತವಾಗಿ ನೀಡಿರುವ ಪರಿಸರ ಉಳಿಸಿದರೆ ಆಸ್ಪತ್ರೆಗೆ ಲಕ್ಷಾಂತರ ರುಪಾಯಿ ವೆಚ್ಚ ಮಾಡುವುದು ತಪ್ಪುತ್ತದೆ. ಕೇವಲ ಭಾಷಣ ಮಾಡುವುದರಿಂದ ಪರಿಸರ ರಕ್ಷಣೆ ಮಾಡಲಾಗುವುದಿಲ್ಲ. ಬದಲಾಗಿ ಗಿಡಗಳನ್ನು ನೆಟ್ಟು ಅವುಗಳ ಪೋಷಣೆ ಮಾಡಬೇಕು ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಹಾಗೂ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪರಿಸರ ಮತ್ತು ಅರಣ್ಯ ರಕ್ಷಣೆ ಕೇವಲ ಅರಣ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಮಾತ್ರ ಸೀಮಿತವಲ್ಲ. ಪರಿಸರ ಉಳಿಸಬೇಕಿರುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ದೇಶದ ಅರಣ್ಯ ರಕ್ಷಣೆ ಕಾನೂನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು.ಪತ್ರಿಕಾರಂಗ ಹಿಂದಿನ ಪತ್ರಿಕಾ ಮಾಧ್ಯಮಕ್ಕೂ ತೀವ್ರ ವ್ಯತ್ಯಾಸವಿದೆ. ಇಂದಿನ ಸಾಮಾಜಿಕ ಜಾಲತಾಣದ ಪ್ರಭಾವದಿಂದ ಪತ್ರಿಕೆ ನಡೆಸುವುದು ಕಷ್ಟಸಾಧ್ಯವಾಗುತ್ತಿದೆ. ನೈಜ ಹಾಗೂ ಸ್ಪಷ್ಟ ವರದಿಗಳು ಪತ್ರಿಕೆಯಲ್ಲಿ ಸಿಗುತ್ತವೆ. ಹಾಗಾಗಿ ಪತ್ರಿಕೆಗಳ ಉಳಿವಿಗಾಗಿ ಹೆಚ್ಚು ಪತ್ರಿಕೆ ಓದುವ ಹವ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು. ಮುಂಡಗೋಡ ವಲಯ ಅರಣ್ಯಾಧಿಕಾರಿ ವಾಗೀಶ ಬಾಚಿನಕೊಪ್ಪ ಮಾತನಾಡಿ, ಪತ್ರಿಕೆ ಮತ್ತು ಪರಿಸರಕ್ಕೆ ಅವಿನಾಭಾವ ಸಂಬಂಧವಿದೆ. ಸಾರ್ವಜನಿಕರಲ್ಲಿ ಜಾಗೃತಿ ಬರಬೇಕಾದರೆ ಪತ್ರಿಕಾ ರಂಗದ ಪಾತ್ರ ಅತ್ಯಗತ್ಯವಾಗಿದ್ದು, ಪರಿಸರ ರಕ್ಷಣೆ ಜಾಗೃತಿ ಕಾರ್ಯಕ್ರಮದ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಿರುವುದು ವಿಶೇಷವಾಗಿದೆ. ಸಂವಿಧಾನದ ಪ್ರಕಾರ ನೈಸರ್ಗಿಕ ಸಂಪತ್ತು ರಕ್ಷಣೆ ಮಾಡುವುದು ಮೂಲಭೂತ ಕರ್ತವ್ಯವಾಗಿದೆ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ ಮಾತನಾಡಿ, ಭಾರತ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಪತ್ರಿಕಾ ರಂಗದ ಪಾತ್ರ ಮಹತ್ವದ್ದಾಗಿತ್ತು. ಪತ್ರಿಕಾ ವರದಿಯಿಂದ ಕ್ರಾಂತಿಗಳೇ ನಡೆದಿದ್ದು, ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದವು. ಇತ್ತೀಚಿನ ದಿನಗಳಲ್ಲಿ ಬಹು ಸಂಖ್ಯೆಯಲ್ಲಿ ಪರಿಣಾಮಕಾರಿ ವರದಿಗಳು ಪ್ರಕಟವಾಗುತ್ತಿವೆ. ಆದರೆ ಓದುಗರ ಸಂಖ್ಯೆ ಕ್ಷೀಣಿಸುತ್ತಿರುವುದು ವಿಷಾದನೀಯ ಎಂದು ಹೇಳಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ತಾಲೂಕಾಧ್ಯಕ್ಷ ಸಂತೋಷ ದೈವಜ್ಞ ಅಧ್ಯಕ್ಷತೆ ವಹಿಸಿದ್ದರು. ವೈ.ಪಿ. ಭುಜಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಂಡಗೋಡ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಹುಲಕೋಟಿ, ಸಂಘದ ಜಿಲ್ಲಾಧ್ಯಕ್ಷ ನಾಗರಾಜ ದೈವಜ್ಞ, ಪರಶುರಾಮ ತಹಸೀಲ್ದಾರ, ಜಗದೀಶ ದೈವಜ್ಞ, ಶ್ರೀನಿವಾಸ ದೈವಜ್ಞ, ಶಿವರಾಜ ಶಿರಾಲಿ, ಮಲ್ಲಿಕಾರ್ಜುನ ಗೌಳಿ, ಉಪ ವಲಯ ಅರಣ್ಯಾಧಿಕಾರಿ ಅರುಣ ಕಾಶಿ, ಅಜ್ಜಪ್ಪ, ಅರ್ಜುನ ಉಪಸ್ಥಿತರಿದ್ದರು. ಉಪ ವಲಯ ಅರಣ್ಯಾಧಿಕಾರಿ ಶ್ರೀಶೈಲ ಐನಾಪುರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.