ಎಲ್ಲರೂ ಮಾದರಿ ನೀತಿ ಸಂಹಿತೆ ಪಾಲಿಸಿ: ತೊದಲಬಾಗಿ

| Published : Mar 22 2024, 01:03 AM IST

ಸಾರಾಂಶ

ಲೋಕಸಭಾ ಚುನಾವಣೆ ಅಂಗವಾಗಿ ಈಗಾಗಲೇ ಆರಂಭಗೊಂಡಿರುವ ಮಾದರಿ ನೀತಿ ಸಂಹಿತೆಗೆ ಎಲ್ಲಾ ಪಕ್ಷದವರು ಸಹಕರಿಸಬೇಕು.

ಕನ್ನಡಪ್ರಭ ವಾರ್ತೆ ಕನಕಗಿರಿ

ಲೋಕಸಭಾ ಚುನಾವಣೆ ಅಂಗವಾಗಿ ಈಗಾಗಲೇ ಆರಂಭಗೊಂಡಿರುವ ಮಾದರಿ ನೀತಿ ಸಂಹಿತೆಗೆ ಎಲ್ಲಾ ಪಕ್ಷದವರು ಸಹಕರಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.

ತಹಸೀಲ್ದಾರ ಕಚೇರಿಯಲ್ಲಿ ವಿವಿಧ ಪಕ್ಷಗಳ ಪ್ರಮುಖರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವುದಕ್ಕಾಗಿ ಈಗಾಗಲೇ ಕ್ಷೇತ್ರ ವ್ಯಾಪ್ತಿಯ ಹುಲಿಹೈದರ, ನವಲಿ ಹಾಗೂ ಚನ್ನಳ್ಳಿ ಕ್ರಾಸ್ ಬಳಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಮತದಾರರ ಗಮನ ಸೆಳೆಯುವುದಕ್ಕಾಗಿ ಸ್ವೀಪ್ ಸಮಿತಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೆಲ ನಿಯಮ ಸಡಿಲಿಕೆ ಮೂಲಕ ಚುನಾವಣೆ ನಡೆಸಲಾಗುತ್ತಿದೆ ಎಂದರು.

ಯಾವುದಾದರೂ ಸಭೆ, ಸಮಾರಂಭಗಳಿದ್ದಲ್ಲಿ ಸುವಿಧಾ ಆ್ಯಪ್‌ನಲ್ಲಿ ೪೮ ಗಂಟೆ ಪೂರ್ವದಲ್ಲಿ ಅರ್ಜಿ ಸಲ್ಲಿಸಿ, ಪರವಾನಗಿ ಪಡೆದುಕೊಳ್ಳಬೇಕು. ಏಕಾಏಕಿ ಕಚೇರಿಗೆ ಬಂದು ಪರವಾನಗಿ ಕೊಡಿ ಎಂದರೆ ಕೊಡಲಾಗುವುದಿಲ್ಲ. ಇನ್ನೂ ಅನ್ಯ ಜಿಲ್ಲೆಯ ಅಧಿಕಾರಿಗಳು ಅಥವಾ ಸರ್ಕಾರಿ ನೌಕರರು ಕಾರ್ಯನಿರ್ವಹಿಸುವ ಸ್ಥಳದಲ್ಲಿಯೇ ಇವಿಎಂ, ವಿವಿಪ್ಯಾಟ್ ಮೂಲಕ ಮತದಾನ ಮಾಡುವ ವ್ಯವಸ್ಥೆಯನ್ನು ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಜಾರಿಗೊಳಿಸಿದ್ದು, ಈ ಮೊದಲಿದ್ದ ಅಂಚೆ ಮತದಾನವನ್ನು ರದ್ದುಪಡಿಸಿರುವುದಾಗಿ ತಿಳಿಸಿದರು.

ತಾಲೂಕಿನಲ್ಲಿ ಸಖಿ ಮತಗಟ್ಟೆ ಹಾಗೂ ಪಿಂಕ್ ಬೂತ್‌ಗಳನ್ನು ತೆರೆಯಲಾಗುವುದು. ಪ್ರತಿ ಮತಗಟ್ಟೆಯಲ್ಲಿ ಶಾಮಿಯಾನ, ಕುಡಿಯುವ ನೀರು, ವಿದ್ಯುತ್, ವೀಲ್ ಚೇರ್, ಅರ್ಜಿಸಲ್ಲಿಸಿದ ೮೫ ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಹಾಗೂ ವಿಕಲಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದ್ದು, ಇದು ಈ ಚುನಾವಣೆಯ ಹೊಸ ನಿಯಮವಾಗಿದೆ ಎಂದು ತಿಳಿಸಿದರು.

ಸಿವಿಜಿಲ್ ಆ್ಯಪ್‌ನಲ್ಲಿ ದೂರು ಸಲ್ಲಿಸಿ:

ಚುನಾವಣೆ ಸಂದರ್ಭದಲ್ಲಿ ಸಿವಿಜಿಲ್ ಆ್ಯಪ್ ಸಾರ್ವಜನಿಕರಿಗೆ ಅನುಕೂಲವಾಗಿದೆ. ಸಾರ್ವಜನಿಕರು ನೀಡಿದ ದೂರುಗಳಿಗೆ ಸ್ಪಂದಿಸಲು ಈ ಆ್ಯಪ್ ಪ್ರಮುಖ ಪಾತ್ರವಹಿಸಿದೆ. ಸುಳ್ಳು ದೂರು ದಾಖಲಿಸಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ತಾಪಂ ಇಒ ಹಾಗೂ ಸ್ವೀಪ್ ಅಧ್ಯಕ್ಷ ಎಲ್. ರವೀಂದ್ರಕುಮಾರ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಪ್ರಮುಖರಾದ ರವಿ ಪಾಟೀಲ್, ಗಂಗಾಧರಸ್ವಾಮಿ, ವೆಂಕಟೇಶ ಗೋಡಿನಾಳ ಸೇರಿದಂತೆ ಇತರರು ಇದ್ದರು.